ಮಳೆ ಇಲ್ಲದಿದ್ದರು ತುಂಬುತ್ತಿದೆ ವಾಣಿ ವಿಲಾಸ ಸಾಗರ : ಕೋಡಿ ಬೀಳಲು 10 ಅಡಿ ಬಾಕಿ...!
ಚಿತ್ರದುರ್ಗ: ಬೆಳೆ ಸಮಯಕ್ಕೆ ಸರಿಯಾಗಿ ಮಳೆ ಕೈಕೊಟ್ಟಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕೊಂಚ ಮಳೆಯಾಗಿದೆ. ಆದರೆ ಈ ಸಮಯಕ್ಕೆ ಜೋರು ಮಳೆಯನ್ನೇ ನಿರೀಕ್ಷೆ ಮಾಡಲಾಗಿತ್ತು. ಸದ್ಯ ವರುಣಾರಾಯ ಸುಧಾರಿಸಿಕೊಳ್ಳುತ್ತಿದ್ದಾನೆ. ಹೀಗಿದ್ದರು ವಾಣಿ ವಿಲಾಸ ಜಲಾಶಯಕ್ಕೆ ನೀರಿನ ಅರಿವು ಹೆಚ್ಚಳವಾಗಿದೆ. ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯದ ಸದ್ಯ ನೀರಿನ ಮಟ್ಟ 120 ಅಡಿ ತಲುಪಿದೆ. ಇನ್ನು ಕೇವಲ 10 ಅಡಿ ನೀರು ಬಂದರೆ ಕೋಡಿ ಬೀಳೋದು ಗ್ಯಾರಂಟಿ.
ಇದು ಮಧ್ಯ ಕರ್ನಾಟಕ ರೈತರಿಗೆ ಸಂತಸವನ್ನು ದುಪ್ಪಟ್ಟು ಮಾಡಿದೆ. ಚಿತ್ರದುರ್ಗ ಭಾಗಕ್ಕೆ ಹೇಳಿಕೊಳ್ಳುವಂತ ಮಳೆಯೇ ಆಗದೆ ಇದ್ದರು ಜಲಾಶಯಕ್ಕೆ ಇಷ್ಟೊಂದು ನೀರು ಬಂದಿರುವುದು ಆಶ್ಚರ್ಯ ಹಾಗೂ ಸಂತಸವಾಗಿದೆ. ಕಳೆದೊಂದು ತಿಂಗಳಿನಿಂದ ಭದ್ರಾ ಜಲಾಶಯದಿಂದ ಪ್ರತಿದಿನ 693 ಕ್ಯೂಸೆಕ್ ಒಳಹರಿವು ನೀರು ವಾಣಿ ವಿಲಾಸ ಜಲಾಶಯಕ್ಕೆ ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 120 ಅಡಿಗೆ ತಲುಪಿದೆ. ಇನ್ನು ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದೆ. ಹೀಗಾಗಿ ಇನ್ನು ಕೇವಲ 10 ಅಡಿಗಳಷ್ಟು ನೀರು ಬಂದರೆ ಕೋಡಿ ಬೀಳುತ್ತದೆ.
ವಾಣಿ ವಿಲಾಸ ಜಲಾಶಯದಿಂದ ಸಾಕಷ್ಟು ರೈತರ ಬಾಳು ಬೆಳಗುತ್ತದೆ. ಈ ಜಲಾಶಯದಲ್ಲಿ ಕೋಡಿ ಬೀಳುವುದೇ ಅಪರೂಪ. 1908ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾರಥ್ಯದಲ್ಲಿ ಈ ಜಲಾಶಯ ನಿರ್ಮಾಣವಾಗಿತ್ತು. ಆಮೇಲೆ 1933 ರಲ್ಲಿ ಒಮ್ಮೆ ಕೋಡಿ ಬಿದ್ದಿತ್ತು. 2022ರಲ್ಲ ಸುಮಾರು 89 ವರ್ಷಗಳ ಬಳಿಕ ಕೋಡಿ ಬಿದ್ದಿತ್ತು. ಕಳೆದ ವರ್ಷ ಬರಗಾಲವಿದ್ದ ಕಾರಣ ಅದು ಸಾಧ್ಯವಿರಲಿಲ್ಲ. ಈ ಬಾರಿ ಕೋಡಿ ಬೀಳುವ ನಿರೀಕ್ಷೆಯಲ್ಲಿ ಜನರಿದ್ದು, ಮಳೆ ಬೇಗ ಬರಲ್ಲಪ್ಪ ಎಂದು ಬೇಡಿಕೊಳ್ಳುತ್ತಿದ್ದಾರೆ.