ಉರ್ದು ಒಂದು ಸಮುದಾಯಕ್ಕೆ ಸೇರಿದ ಭಾಷೆಯಲ್ಲ : ಎಂ.ಕೆ.ತಾಜ್‍ಪೀರ್
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಉರ್ದು ಭಾಷೆ ಬೆಳೆಸಿ ಅಭಿವೃದ್ದಿಪಡಿಸುವುದಕ್ಕಾಗಿ ಉರ್ದು ಅಕಾಡೆಮಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮಹಮದ್ ಅಲಿಖಾಜಿ ತಿಳಿಸಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯಿಂದ ಬಡಾ ಮಕಾನ್ ಜಿಸ್ತಿಯಾ ಶಾದಿಮಹಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಮುಶಾಯಿರಾ(ಕವಿಗೋಷ್ಠಿ) ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಹಾವಳಿಯಿಂದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಅದಕ್ಕಾಗಿ ಮಕ್ಕಳು ಓದಿನ ಕಡೆ ಹೆಚ್ಚು ಗಮನ ಕೊಡುವಂತೆ ಶಿಕ್ಷಕರು ಹಾಗೂ ಪೋಷಕರುಗಳು ನಿಗಾವಹಿಸಬೇಕು. ಉರ್ದುವಿನಲ್ಲಿ ಜರ್ನಲಿಸಂ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಲ್ಲದೆ ಶುಲ್ಕವನ್ನು ಅಕಾಡೆಮಿಯಿಂದ ಪಾವತಿಸಲಾಗುವುದು. ಉರ್ದು ಶಿಕ್ಷಕರು ತಮ್ಮ ಮಕ್ಕಳಲ್ಲಿ ಒಬ್ಬರನ್ನಾದರೂ ಉರ್ದು ಶಾಲೆಗೆ ಸೇರಿಸಿದಾಗ ಮಾತ್ರ ಉರ್ದು ಭಾಷೆ ಉಳಿಯಲು ಸಾಧ್ಯ ಎಂದು ಹೇಳಿದರು.
ಕಂಠೀರವ ಸ್ಟುಡಿಯೋಸ್ ಲಿಮಿಟೆಡ್‍ನ ಅಧ್ಯಕ್ಷ ಮೆಹಬೂಬ್‍ಪಾಷ ಮಾತನಾಡಿ ಚಿತ್ರದುರ್ಗದಲ್ಲಿ ಉರ್ದು ಶಾಲೆಗಳ ಸಂಖ್ಯೆ ಕಡಿಮೆಯಿದೆ. ಕರ್ನಾಟಕದಲ್ಲಿ ಕನ್ನಡದ ವಾತಾವರಣಕ್ಕೆ ಎಲ್ಲರೂ ಒಗ್ಗಿಕೊಂಡಿರುವುದರಿಂದ ಕನ್ನಡವನ್ನೇ ಜಾಸ್ತಿ ಮಾತನಾಡುತ್ತಾರೆ. ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಉರ್ದು ಕವಿಗೋಷ್ಠಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಉರ್ದು ಕೇವಲ ಮುಸ್ಲಿಂ ಭಾಷೆಯಲ್ಲ. ದೇಶದ ಐಕ್ಯತೆಯನ್ನು ಬೆಸೆಯುವ ಸಾಧನವಾಗಿ ಕೆಲಸ ಮಾಡುತ್ತಿದೆ. ಉರ್ದು ಕೇವಲ ಒಂದು ಸಮುದಾಯಕ್ಕೆ ಸೇರಿದ ಭಾಷೆಯೆಂದು ತಿಳಿಯುವುದು ತಪ್ಪು. ಉರ್ದು ಮಾತನಾಡುವ ಎಲ್ಲರೂ ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಬಹಳಷ್ಟು ಮಕ್ಕಳು ಉರ್ದು ಶಾಲೆಯಲ್ಲಿ ಓದಲು ಪೋಷಕರು ಹಾಗೂ ಗುರುಗಳ ಪ್ರೋತ್ಸಾಹವಿದೆ. ನಾನು ಕೂಡ ಒಂದರಿಂದ ಏಳನೆ ತರಗತಿಯವರೆಗೆ ಉರ್ದು ಶಾಲೆಯಲ್ಲಿ ಓದಿದ್ದೇನೆ. ಇದಕ್ಕೆ ನಮ್ಮ ತಂದೆ-ತಾಯಿ. ಶಿಕ್ಷಕರುಗಳು ಕಾರಣ ಎಂದು ಸ್ಮರಿಸಿದರು.
ಗೋಕಾಕ್ ವರದಿ ಜಾರಿಗಿಂತ ಮುಂಚೆ ಉರ್ದು ಶಾಲೆಯಲ್ಲಿ ಕನ್ನಡ ಕಲಿಯಲು ಅವಕಾಶವಿರಲಿಲ್ಲ. ಚಳುವಳಿಯ ನಂತರ ಉರ್ದು ಶಾಲೆಯಲ್ಲಿ ಕನ್ನಡ ಕಲಿಯಲು ಅವಕಾಶವಾಯಿತು. ಇದರಿಂದ ಕನ್ನಡ ಮತ್ತು ಉರ್ದು ಭಾಷೆಗಳು ಸಾಮರಸ್ಯದ ಸಂಕೇತವಾಗಿ ಉಳಿದುಕೊಂಡಿವೆ ಎಂದು ಹೇಳಿದ ಎಂ.ಕೆ.ತಾಜ್‍ಪೀರ್ ಜಿಲ್ಲೆಯಲ್ಲಿರುವ ಪ್ರತಿಯೊಂದು ವಕ್ಫ್ ಸಂಸ್ಥೆಗಳಲ್ಲಿ ಉರ್ದು ಗ್ರಂಥಾಲಯ ತೆರೆದು ಒಳ್ಳೊಳ್ಳೆ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಒದಗಿಸಿ ಮಕ್ಕಳು ಹಾಗೂ ವಯಸ್ಕರಲ್ಲಿ ಓದುವ ಹವ್ಯಾಸ ಬೆಳೆಸಬೇಕೆಂದು ಉರ್ದು ಅಕಾಡೆಮಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ, ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೆ.ಯಕ್ಬಾಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಸಾಧಿಕ್‍ವುಲ್ಲಾ, ಬಡಾಮಕಾನ್ ಮುತುವಲ್ಲಿ ಸೈಯದ್ ಮುಜೀಬ್, ಧಾರ್ಮಿಕ ಚಿಂತಕ ನಾಯಕನಹಟ್ಟಿಯ ಹಜರತ್ ಆರೀಫುಲ್ಲಾ ಶಾ ಖಾದ್ರಿ ವೇದಿಕೆಯಲ್ಲಿದ್ದರು.