ಭದ್ರಾಮೇಲ್ದಂಡೆ ಯೋಜನೆ : ಇನ್ನೆರಡು ಮೂರು ದಿನಗಳಲ್ಲಿ ಘೋಷಿತ ಅನುದಾನ ಬಿಡುಗಡೆಗೊಳಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರ : ರೈತರ ಎಚ್ಚರಿಕೆ...!
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.07 : ಭದ್ರಾಮೇಲ್ದಂಡೆ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಕಾಯ್ದಿರಿಸಿ ಬಿಡುಗಡೆಗೊಳಿಸದ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಪಂಚಾಯಿತಿ ಮುಂಭಾಗ ಕಳೆದ ಮೂರು ದಿನಗಳಿಂದಲೂ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರೈತ ಸಂಘ ಮತ್ತು ವಿವಿಧ ಜನಪರ ಸಂಘಟನೆಗಳಿಂದ ಬುಧವಾರ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದಲ್ಲಿ ಸಭೆ ನಡೆಸಿ ಭದ್ರಾಮೇಲ್ದಂಡೆ ಯೋಜನೆ ವಿಳಂಭವಾಗುತ್ತಿರುವುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೊಳಲ್ಕೆರೆ ಅಧ್ಯಕ್ಷ ರಂಗಸ್ವಾಮಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಕಾಯ್ದಿರಿಸಿರುವ ಕೇಂದ್ರ ಸರ್ಕಾರ ಒಂದು ವರ್ಷವಾದರೂ ಇನ್ನು ಹಣ ಬಿಡುಗಡೆಗೊಳಿಸಿಲ್ಲ. ಬರಪೀಡಿತ ಪ್ರದೇಶ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಮಳೆಯನ್ನಾಧರಿಸಿ ಕೃಷಿ ಮಾಡುತ್ತಿದ್ದಾರೆ.
ಬರಗಾಲದಿಂದ ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗಿ ನಷ್ಟ ಅನುಭವಿಸುತ್ತಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಉಳಿದಿರುವ ದಾರಿ. ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ನೀರಾವರಿಗಾಗಿ ಜಿಲ್ಲೆಯ ರೈತರು ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ಬರೀ ಆಶ್ವಾಸನೆ ನೀಡುತ್ತಲೆ ವಂಚಿಸಿಕೊಂಡು ಬರುತ್ತಿವೆ. ಇನ್ನೆರಡು ಮೂರು ದಿನಗಳಲ್ಲಿ ಹಣ ಬಿಡುಗಡೆಗೊಳಿಸಿ ಭದ್ರಾಮೇಲ್ದಂಡೆ ಕಾಮಗಾರಿಗೆ ಚುರುಕಿನ ಚಾಲನೆ ನೀಡದಿದ್ದರೆ ದನ-ಕರುಗಳನ್ನು ತಂದು ಜಿಲ್ಲಾ ಪಂಚಾಯಿತಿಯಲ್ಲಿರುವ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಕಚೇರಿ ಮುಂದೆ ಕಟ್ಟಲಾಗುವುದೆಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ಕಾರ್ಯದರ್ಶಿ ರಾಮರೆಡ್ಡಿ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಸತೀಶ್, ಟಿ.ಎಮ್ಮಿಗನೂರು ಜಯಣ್ಣ, ಅನ್ನಪೂರ್ಣ, ತುಳಜಮ್ಮ, ಚಂದ್ರಮೌಳಿ, ನಿರಂಜನಮೂರ್ತಿ ಇನ್ನು ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.