ತಂದೆ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳಿದ ಉಮೇಶ್ ಕಾರಜೋಳ...!
ಸುದ್ದಿಒನ್, ಹಿರಿಯೂರು, ಏಪ್ರಿಲ್.14 : ನೀರಾವರಿ ಕ್ಷೇತ್ರಕ್ಕೆ ತಂದೆಯ ಕೊಡುಗೆ ಅಪಾರವಾಗಿದೆ. ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಅವರನ್ನೇ ಗೆಲ್ಲಿಸಿ ಎಂದು ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ್ ಕಾರಜೋಳ ಜನರಲ್ಲಿ ಮನವಿ ಮಾಡಿದ್ದಾರೆ.
ತಾಲೂಕಿನ ಎಂಡಿ. ಕೋಟೆ, ಮದ್ದನಕುಂಟೆ, ಸೊಂಡೆಕೆರೆ, ರಾಮಜೋಗಿಹಳ್ಳಿ, ವದ್ದೀಕೆರೆ, ಬಿದರಿಕೆರೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ಹಾಗೂ ತಂದೆ ಗೋವಿಂದ ಕಾರಜೋಳ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಚಿತ್ರದುರ್ಗ - ಹಿರಿಯೂರು ಮಧ್ಯೆ ವಿಮಾನ ನಿಲ್ದಾಣಕ್ಕೆ ಆಧ್ಯತೆ ನೀಡುವುದರ ಜೊತೆಗೆ ಜಿಲ್ಲೆಯನ್ನು ಮೇಲ್ದರ್ಜೆಗೇರಿಸಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತದೆ ಎಂದರು. ಹಿರಿಯೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು, ಒಟ್ಟಾಗಿ ಚುನಾವಣೆ ಎದುರಿಸಲಾಗುತ್ತಿದೆ.
ದೇಶದಲ್ಲಿ 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶವನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಿಂದ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದ್ದು, ಜಿಲ್ಲೆಯ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಇತ್ತ ಜಿಲ್ಲೆಯಲ್ಲಿ ಬರ ತಾಂಡವಾಡುತ್ತಿದ್ದು, ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.