ತಾಲ್ಲೂಕು ಕಚೇರಿ ಆವರಣದಲ್ಲಿ ಶೌಚಾಲಯ ಅವ್ಯವಸ್ಥೆ : ಕರುನಾಡ ವಿಜಯಸೇನೆ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.11: ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಇನ್ನು ಬಳಕೆಗೆ ಬಾರದಿರುವುದನ್ನು ವಿರೋಧಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಕಚೇರಿಗೆ ದಿನನಿತ್ಯವೂ ಕೆಲಸದ ನಿಮಿತ್ತ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಾರೆ. ಪಕ್ಕದಲ್ಲಿಯೇ ಸಬ್‍ರಿಜಿಸ್ಟರ್ ಕಚೇರಿಯೂ ಇದೆ. ವಿಶೇಷವಾಗಿ ಇಲ್ಲಿಗೆ ಬರುವ ಮಹಿಳೆಯರು ಜಲಭಾದೆ ತೀರಿಸಿಕೊಳ್ಳಲು ಎಲ್ಲಿಗೆ ಹೋಗಬೇಕು. ಅಂದಾಜು ಹದಿನಾರು ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಾಲಯವನ್ನು ನೀರಿಲ್ಲದ ಕಾರಣಕ್ಕೆ ಬಂದ್ ಮಾಡಲಾಗಿದೆ. ವಿಪರ್ಯಾಸವೆಂದರೆ ಶೌಚಾಲಯದಲ್ಲಿ ಹಳೆ ಕಡತಗಳ ರಾಶಿ ಹಾಕಲಾಗಿದೆ.
ಇದು ಯಾವ ನ್ಯಾಯ? ಎಂದು ತಹಶೀಲ್ದಾರ್‍ನನ್ನು ಪ್ರಶ್ನಿಸಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಇನ್ನೆರಡು ಮೂರು ದಿನಗಳಲ್ಲಿ ಶೌಚಾಲಯವನ್ನು ಬಳಕೆಗೆ ಉಪಯೋಗಿಸದಿದ್ದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಜಗದೀಶ್ ಸಿ. ರತ್ನಮ್ಮ, ಗೋಪಿನಾಥ್ ಎಸ್. ಅವಿನಾಶ್, ರಾಜಣ್ಣ, ಪ್ರದೀಪ, ಹರೀಶ್, ಸುರೇಶ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿದ್ದರು.