Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಟಿಪ್ಪು ಕನ್ನಡ ವಿರೋಧಿಯಲ್ಲ : ಟಿ.ಗುರುರಾಜ್ ಟಿಪ್ಪು

06:08 PM Nov 20, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 20 : ರಾಮನ ಹೆಸರಿನಲ್ಲಿ ಹಿಂದೂ-ಮುಸಲ್ಮಾನರ ನಡುವೆ ಕೊಳ್ಳಿ ಹಚ್ಚುವ ಕೆಲಸ ಮಾಡುತ್ತಿರುವ ಕೋಮುವಾದಿಗಳು ಮೊದಲು ಟಿಪ್ಪು ಕನ್ನಡ ವಿರೋಧಿಯಲ್ಲ ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಟಿ.ಗುರುರಾಜ್ ಟಿಪ್ಪು ವಿರೋಧಿಗಳಿಗೆ ಎಚ್ಚರಿಸಿದರು.

Advertisement

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ಹಜರತ್ ಟಿಪ್ಪುಸುಲ್ತಾನ್‍ರವರ 274 ನೇ ಜಯಂತಿ ಹಾಗೂ 69 ನೇ ಕನ್ನಡ ರಾಜ್ಯೋತ್ಸವ ಉದ್ಗಾಟಿಸಿ ಮಾತನಾಡಿದರು.

ಟಿಪ್ಪು ಕೇವಲ ಹೆಸರಲ್ಲ. ವಿಸ್ಮಯ. ಇಡಿ ಜಗತ್ತಿನ ಚರಿತ್ರೆಯ ಪುಟಗಳಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಕೇವಲ ಪಠ್ಯಗಳಿಂದ ಟಿಪ್ಪು ಹೆಸರು ತೆಗೆದರೆ ಟಿಪ್ಪು ಇತಿಹಾಸಕ್ಕೆ ದ್ರೋಹ ಬಗೆದಂತಾಗುತ್ತದೆ. ಬ್ರಿಟೀಷರಿಗೆ ಕಪ್ಪ ಕಾಣಿಕೆ ಕೊಡಲು ಒಪ್ಪದ ಟಿಪ್ಪುಸುಲ್ತಾನ್ ಜೀವನದ ಕೊನೆಯವರೆಗೆ ರಣಭೈರವನಂತೆ ಶತ್ರುಗಳ ಪಾಳೆಯಕ್ಕೆ ನುಗ್ಗಿ ಹೋರಾಡಿದ ಧೀರ ಎಂದು ಬಣ್ಣಿಸಿದರು.

ಟಿಪ್ಪು ಸಂಸ್ಥಾನದಲ್ಲಿ ಯಾವ ಜಾತಿ ಧರ್ಮವೂ ಭಾದಿತವಾಗಿರಲಿಲ್ಲ. ಹಿಂದೂ ದೇವಾಲಯಗಳಲ್ಲಿಯೂ ಪೂಜೆ ನಡೆಯುತ್ತಿತ್ತು. ಟಿಪ್ಪುವನ್ನು ಹಿಂದೂ ದ್ರೋಹಿ ಎಂದು ಕರೆಯುವವರು ಟಿಪ್ಪು ಕೈಯಲ್ಲಿದ್ದ ಉಂಗುರದ ಮೇಲೆ ರಾಮ್ ಎಂದು ಬರೆದಿತ್ತು ಎನ್ನುವುದನ್ನು ತಿಳಿದುಕೊಳ್ಳಲಿ. ಟಿಪ್ಪುವಿನ ಲಾಲ್ ಮಹಲ್ ಅರಮನೆ ಎದುರು ಗಂಗಾಧರೇಶ್ವರನ ಗುಡಿಯಿದೆ. ಗಂಟೆ ಜಾಗಟೆ ಸದ್ದು ಕೇಳಿಸಿಕೊಳ್ಳುತ್ತಿದ್ದ. ನರಸಿಂಹಸ್ವಾಮಿ ದೇವಸ್ಥಾನವೂ ಇತ್ತು. ಶೃಂಗೇರಿ ಶಾರದಾಂಬೆಯ ಭಕ್ತನಾಗಿದ್ದ ಟಿಪ್ಪು ಯಾವ ದೇವಸ್ಥಾನವನ್ನು ಕೆಡವಲಿಲ್ಲ. ಮರಾಠರು ಶೃಂಗೇರಿ ಮೇಲೆ ದಾಳಿ ನಡೆಸಿದಾಗ ರಕ್ಷಣೆಗೆ ನಿಂತಿದ್ದನ್ನು ಟಿಪ್ಪು ವಿರೋಧಿಗಳು ಮರೆಯಬಾರದೆಂದು ಹೇಳಿದರು.

ಮುಸಲ್ಮಾನ ಎನ್ನುವ ಕಾರಣಕ್ಕಾಗಿ ಟಿಪ್ಪುವನ್ನು ಹಳದಿ ಕಣ್ಣಿನಿಂದ ನೋಡಬಾರದು. ಶೃಂಗೇರಿಯ ಶಾರದಾಂಬೆಗೆ ವಜ್ರದ ಹಾರ ನೀಡಿದ್ದ ಟಿಪ್ಪು ಹೆಸರು ಕೇವಲ ಭಾರತದಲ್ಲಷ್ಟೆ ಅಲ್ಲ. ಹೊರ ದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಧರ್ಮದ ಕೊಳಕು ಮೆತ್ತುವುದು ಬೇಡ. ತನ್ನನ್ನು ತಾನು ರಾಜ ಎಂದು ಕರೆದುಕೊಳ್ಳಲಿಲ್ಲ. ಹೆಂಡ

ಸರಾಯಿ, ಜೂಜು, ವ್ಯಭಿಚಾರವನ್ನು ಕಟುವಾಗಿ ನಿಷೇಧಿಸಿದ್ದ ಟಿಪ್ಪು ಸುಲ್ತಾನ್ ಪರಿಸರ ಸಂರಕ್ಷಣೆಗೆ ಒತ್ತು ಕೊಡುತ್ತಿದ್ದ. ಸತ್ಯ ಎದೆಯಲ್ಲಿಟ್ಟುಕೊಂಡಿರುವವರ ನಾಲಿಗೆ ಮೇಲೆ ಸುಳ್ಳು ಹರಿದಾಡುತ್ತಿದೆ. ಕನ್ನಂಬಾಡಿ ಅಣೆಕಟ್ಟೆಗೆ ಮೊದಲು ಶಂಕುಸ್ಥಾಪನೆ ಮಾಡಿದ ಟಿಪ್ಪುಸುಲ್ತಾನ್ ಉಳುವವನೆ ಭೂಮಿ ಒಡೆಯ ಎನ್ನುವ ಕಾನೂನು ಮೊದಲು ಜಾರಿಗೆ ತಂದವರು ಎಂದು ಹೇಳಿದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡುತ್ತ ಬ್ರಿಟೀಷರ ವಿರುದ್ದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವೀರ ಸೇನಾನಿ ಟಿಪ್ಪುಸುಲ್ತಾನ್ ಜಯಂತಿಯನ್ನು ಕಳೆದ ಹದಿನೇಳು ವರ್ಷಗಳಿಂದಲೂ ರಾಜ್ಯದ ನಾನಾ ಭಾಗಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದೇನೆ. 300 ಕ್ಕೂ ಹೆಚ್ಚು ರೋಡ್‍ಶೋಗಳಾಗಿದೆ. ಆದರೂ ಚಿತ್ರದುರ್ಗದಲ್ಲಿ ಅಲ್ಪಸಂಖ್ಯಾತರ ಶಕ್ತಿ ಕುಂದುತ್ತಿದೆ. ಟಿಪ್ಪು ಜಯಂತಿಗೆ ಬರಲು ಹೆದರುತ್ತಿರುವುದು ಮನಸ್ಸಿಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಹೆಚ್.ಆನಂದಕುಮರ್ ಮಾತನಾಡಿ ಬ್ರಿಟೀಷರ ವಿರುದ್ದ ಹೋರಾಡುವಾಗ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟ ಟಿಪ್ಪು ಎಂದಿಗೂ ಬ್ರಿಟೀಷರಿಗೆ ಗುಲಾಮನಾಗಲು ಒಪ್ಪಲಿಲ್ಲ. ಯಾವ ದೇವಾಲಯವನ್ನು ಧ್ವಂಸಗೊಳಿಸದ ಟಿಪ್ಪು ಹೇಗೆ ಕನ್ನಡ ವಿರೋಧಿಯಾಗಲು ಸಾಧ್ಯ ಎಂದು ಕೋಮುವಾದಿ ಬಿಜೆಪಿ.ಯವರನ್ನು ಪ್ರಶ್ನಿಸಿದರು?

ದಲಿತ ಮುಖಂಡ ಬಿ.ರಾಜಣ್ಣ ಮಾತನಾಡುತ್ತ ದೇವಸ್ಥಾನಗಳಿಗೆ ಆನೆಗಳನ್ನು ಕೊಟ್ಟಿದ್ದ ಟಿಪ್ಪುಸುಲ್ತಾನ್ ಹಿಂದೂ ವಿರೋಧಿ ಹೇಗಾಗುತ್ತಾನೆ. ದೇವಾಲಯಗಳನ್ನು ಎಲ್ಲಿಯೂ ನಾಶಪಡಿಸಲಿಲ್ಲ. ಆದರೂ ಕೋಮುವಾದಿ ಬಿಜೆಪಿ.ಯವರು ಟಿಪ್ಪು ವಿರುದ್ದ ಅಪ ಪ್ರಚಾರದಲ್ಲಿ ತೊಡಗಿರುವುದಕ್ಕೆ ಯಾರು ಕಿವಿಗೊಡಬಾರದೆಂದು ಮನವಿ ಮಾಡಿದರು.

ಟಿಪ್ಪು ಜಯಂತಿಯ ಸಾನಿಧ್ಯ ವಹಿಸಿದ್ದ ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಪೂರ್ವಾಗ್ರಹ ಪೀಡಿತ ಮನಸ್ಸುಗಳು ಟಿಪ್ಪುವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಟಿಪ್ಪು ದೇಶದ್ರೋಹಿ ಎಂದೆಲ್ಲಾ ಕರೆಯುವುದರಲ್ಲಿ ಅರ್ಥವಿಲ್ಲ. ದೇಶಕ್ಕಾಗಿ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟು ಬ್ರಿಟೀಷರ ವಿರುದ್ದ ಹೋರಾಡಿದ ಟಿಪ್ಪುಸುಲ್ತಾನ್ ಹೃದಯವಂತ ದೇಶಭಕ್ತ ಎಂದು ಗುಣಗಾನ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮೆಹಬೂಬ್ ಖಾತೂನ್, ಮುದಸಿರ್ ನವಾಜ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್‍ಗೊಪ್ಪೆ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಮದ್ ಅಹಮದ್ ಪಾಷ, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್‍ಹುಸೇನ್, ಎ.ಸಾಧಿಕ್‍ವುಲ್ಲಾ, ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಪಾರ್ಥ, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಸೈಯದ್ ಖುದ್ದೂಸ್, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಇಸ್ಮಾಯಿಲ್, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ಹೆಚ್.ಶಬ್ಬೀರ್‍ಭಾಷ ಇನ್ನು ಅನೇಕರು ವೇದಿಕೆಯಲ್ಲಿದ್ದರು.

ವಿವಿಧ ಕ್ಷೇತ್ರಗಳಲ್ಲಿನ ಸಾಧಕರುಗಳಿಗೆ ಟಿಪ್ಪುಸುಲ್ತಾನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Tags :
chitradurganot anti-KannadaT. Gururaj TipuTipuಕನ್ನಡ ವಿರೋಧಿಯಲ್ಲಚಿತ್ರದುರ್ಗಟಿ.ಗುರುರಾಜ್ ಟಿಪ್ಪುಟಿಪ್ಪು
Advertisement
Next Article