For the best experience, open
https://m.suddione.com
on your mobile browser.
Advertisement

ಈ ಸಮಯ ಆನಂದಮಯ...ಜಗವೆಲ್ಲಾ ರಾಮಮಯ... ಚಿತ್ರದುರ್ಗ ಜಿಲ್ಲೆಯಲ್ಲಿ ಭಕ್ತರಿಂದ ರಾಮನಾಮಸ್ಮರಣೆ

01:49 PM Jan 22, 2024 IST | suddionenews
ಈ ಸಮಯ ಆನಂದಮಯ   ಜಗವೆಲ್ಲಾ ರಾಮಮಯ    ಚಿತ್ರದುರ್ಗ ಜಿಲ್ಲೆಯಲ್ಲಿ ಭಕ್ತರಿಂದ ರಾಮನಾಮಸ್ಮರಣೆ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.22 : ಕೋಟ್ಯಾಂತರ ಹಿಂದೂಗಳು ಕಾಯುತ್ತಿರುವ ಸುದಿನಕ್ಕೆ ಸಮಯ ಒದಗಿ ಬಂದಿದೆ. ಬಾಲರಾಮನನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಲು ಕ್ಷಣ ಗಣನೆ ಆರಂಭವಾಗಿದೆ. ಅಯೋಧ್ಯೆ ಮಧುವಣಗಿತ್ತಿಯಂತೆ ಅಲಂಕಾರಗೊಂಡಿದೆ. ದೇಶದೆಲ್ಲೆಡೆ ದೇಗುಲಗಳು ಶೃಂಗಾರಗೊಂಡಿದ್ದು, ವಿಶೇಷ ಪೂಜೆ ಪುನಸ್ಕಾರಗಳ ಜೊತೆಗೆ, ಅನ್ನಸಂತರ್ಪಣಾ ಕಾರ್ಯ ನಡೆಯುತ್ತಿದೆ.

ದೇಗುಲ ಅಷ್ಟೇ ಅಲ್ಲದೇ ಪ್ರತಿ ಬೀದಿ ಮನೆಗಳಲ್ಲೂ ರಾಮ ನಾಮ ಸ್ಮರಣೆ ಆರಂಭವಾಗಿದೆ. ಬೆಳಗ್ಗೆಯಿಂದಾನೇ ಮನೆ ಮನಗಳನ್ನು ಸಿದ್ಧತೆ ಮಾಡಿಕೊಂಡಿರುವ ರಾಮ ಭಕ್ತರು, ಅಯೋಧ್ಯೆಯ ಉದ್ಘಾಟನಾ ಸಮಯಕ್ಕೆ ಸರಿಯಾಗಿ, ಶ್ರೀ ರಾಮನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಸಂಜೆ ವೇಳೆಗೆ  ದೀಪ ಹಚ್ಚಿ, ರಾಮನ ಸ್ಮರಣೆ ಮಾಡಲು ಕೋಟ್ಯಂತರ ಭಕ್ತರು ಸಜ್ಜಾಗಿದ್ದಾರೆ. 500 ವರ್ಷಗಳ ಹೋರಾಟದ ಫಲ.. ಹಿಂದೂಗಳ ಆಸೆಯ ದಿನ ಇದು. ಹೆಮ್ಮೆಯ ಕ್ಷಣ. ರಾಮನನ್ನು ಕಣ್ತುಂಬಿಕೊಳ್ಳಲು ಅದೆಷ್ಟು ಉತ್ಸುಕ. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಹಿಂದೂಗಣಕ್ಕೆ ಈ ಸೌಭಾಗ್ಯ ಸಿಗಲಿದೆ.

Advertisement

ಇದರಂತೆ ಚಿತ್ರದುರ್ಗದಲ್ಲಿಯೂ ರಾಮನಾಮ ಸ್ಮರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ಬಹುತೇಕ ಎಲ್ಲಾ ದೇಗುಲಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತಿವೆ. ಮುಂಜಾನೆ 5 ಗಂಟೆಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮಾಡಲಾಗಿದೆ. ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತರು ಬೆಳಿಗ್ಗೆ 6 ಗಂಟೆಯಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ. 8 ಗಂಟೆಯಿಂದ ಮಹಾಮಂಗಳಾರತಿ ನಡೆಯುತ್ತಿದೆ. 9.30ರಿಂದ ರಾಮತಾರಕ‌ ಹೋಮ ಆರಂಭಗೊಂಡು 12.30 ಪೂರ್ಣಾಹುತಿ ಆಗಲಿದೆ.

ಇಡೀ ದಿನ ಭಜನೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನಲೆ, ಸಾರ್ವಜನಿಕರ ಅನುಕೂಲಕ್ಕೆ ದೇವಾಲಯದ ಆವರಣಗಳಲ್ಲಿ ಎಲ್ ಇಡಿ ವ್ಯವಸ್ಥೆ ಮಾಡಲಾಗಿದೆ.  ಸಂಜೆ 6 ಗಂಟೆಗೆ 108 ದೀಪ ಬೆಳಗಲಿವೆ. ರಾತ್ರಿ 10.30ರವರೆಗೂ ದೇವಾಲಯದಲ್ಲಿ ನಿರಂತರ ಭಜನೆ ನಡೆಯಲಿದೆ. ಈಗಾಗಲೇ ವಿವಿಧ ಹಿಂದೂ ಸಂಘಟನೆಗಳು ದೇವಾಲಯಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಶ್ರೀರಾಮನ ವಿಶೇಷ ದೇವಾಲಯಗಳಾದ, ಹೊಸದುರ್ಗದ ಹಾಲು ರಾಮೇಶ್ವರ, ದಶರಥ ರಾಮೇಶ್ವರ, ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ಶ೬ ಗುರುಕರಿಸಿದ್ದೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ನಗರದ ಜೆ.ಸಿ.ಆರ್. ಬಡಾವಣೆಯ ಗಣಪತಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ಬೆಳಿಗ್ಗೆಯೇ ಪಂಚಾಮೃತ ಅಭಿಷೇಕ ನೆರವೇರಿಸಲಾಗಿತ್ತು.  ವಿಶೇಷವಾಗಿ ಕೇಸರಿ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿರುವ ಮಂಟಪದಲ್ಲಿ ಮಾರುತಿ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ತಂಡಗಳಿಂದ ಭಜನೆ ಮತ್ತು ರಾಮನಾಮ ಸ್ಮರಣೆಯನ್ನು ಮಾಡಲಾಯಿತು. ಮಹಾಮಂಗಳಾರತಿ ಆದ ನಂತರ ಭಕ್ತರಿಗೆ ತೀರ್ಥ ಮತ್ತು ಪ್ರಸಾದ ವಿನಿಯೋಗಿಸಲಾಗುತ್ತದೆ.

ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ಸ್ವಾಮಿಗೆ ಬೆಳಿಗ್ಗೆಯೇ ಪಂಚಾಮೃತ ಅಭಿಷೇಕ ನೆರವೇರಿಸಲಾಗಿತ್ತು. ದೇವಾಲಯದ ಆವರಣದಲ್ಲಿರುವ ಮಂಟಪದಲ್ಲಿ ಬ್ಯಾಂಕ್ ಕಾಲೋನಿಯ ಮಹಿಳಾ ಯೋಗ ತರಬೇತಿ ತಂಡದವರಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬ್ಯಾಂಕ್ ನಿವಾಸಿಗಳಿಂದ ಭಕ್ತರಿಗೆ ಪಾನಕ, ಕೋಸುಂಬರಿ, ಪಲಾವ್, ಕೇಸರಿಬಾತ್,  ವಿತರಿಸಲಾಗುತ್ತದೆ.

ನಗರದ ಮೆಜೆಸ್ಟಿಕ್ ಸರ್ಕಲ್‍ನಲ್ಲಿರುವ ಶ್ರೀ ರಕ್ಚಾ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯೇ ಸ್ವಾಮಿಗೆ ಬೆಳ್ಳಿ ಕವಚ ಅಲಂಕಾರ, ಪಂಚಾಮೃತ ಅಭಿಷೇಕ, ಎಲೆ ಪೂಜೆ ಮಾಡಲಾಗಿತ್ತು. ನವಗ್ರಹ ಸಹಿತ ರಾಮ ತಾರಕ ಹೋಮವನ್ನು ನೆರವೇರಿಸಲಾಯಿತು. ಸಂಜೆ ದೀಪೋತ್ಸವ ನಂತರ ಪ್ರಸಾದ ವಿನಿಯೋಗಿಸಲಾಗುತ್ತದೆ ಎಂದು ಅರ್ಚಕರು ತಿಳಿಸಿದರು.

ನಗರದ ಕೆಲವು ದೇವಸ್ಥಾನಗಳಲ್ಲಿ ರಾಘವೇಂದ್ರ ಸ್ವಾಮಿ ಮಠ,  ಆನೆ ಬಾಗಿಲು ದೇವಸ್ಥಾನ ,ಬರಗೇರಮ್ಮ ದೇವಸ್ಥಾನ ,ರಂಗಯ್ಯನ ಬಾಗಿಲು  ಆಂಜನೇಯ ದೇವಸ್ಥಾನ , ಉಚ್ಚಂಗಿಯಲ್ಲಮ್ಮ ದೇವಸ್ಥಾನ, ಬುರುಜನಹಟ್ಟಿ ಕೋಟೆ ಆಂಜನೇಯನ ದೇವಸ್ಥಾನ‌. ಹೀಗೆ ಹಲವು ಕಡೆ ನಗರದಲ್ಲಿ ವಿಶೇಷ ಪೂಜೆ ಮತ್ತು ರಾಮಮಂದಿರ ಉದ್ಘಾಟನೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ತಾಲ್ಲೂಕಿನ ತುರುವನೂರಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿಯೂ ವಿಶೇಷ ಪೂಜೆ ನೆರವೇರಿಸಲಾಯಿತು.

ಪಿಳ್ಳೆಕೇರೆನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲೂಕುಗಳಲ್ಲಿ  ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಹೋಮ-ಹವನಗಳು ನಡೆದವು. ಮಹಾ ಮಂಗಳಾರತಿಯ ನಂತರ ತೀರ್ಥ ಪ್ರಸಾದ, ಪಾನಕ, ಕೋಸುಂಬರಿ ವಿತರಿಸಲಾಯಿತು. ಹಲವೆಡೆ ಭಕ್ತರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದರು.

Tags :
Advertisement