ಬೇಕಾಬಿಟ್ಟಿ ಯೋಜನೆ ಕೊಟ್ಟು ಈಗ ಡೀಸೆಲ್, ಪೆಟ್ರೋಲ್ ದರ ಹೆಚ್ಚಿಸಿದ್ದಾರೆ : ಸಂಸದ ಗೋವಿಂದ ಎಂ.ಕಾರಜೋಳ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ, ಜೂ. 17 : ವಿವೇಚನೆಯಿಲ್ಲದೆ ತೆಗೆದುಕೊಂಡ ತೀರ್ಮಾನಗಳಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಜನರು ಸರ್ಕಾರದ ವರ್ತನೆಗೆ ಹಿಡಿಶಾಪ ಹಾಕುತ್ತಿದ್ದಾರೆ ಬೇಕಾಬಿಟ್ಟಿ ಯೋಜನೆ ಕೊಟ್ಟು ಈಗ ಡೀಸೆಲ್, ಪೆಟ್ರೋಲ್ ದರ ಹೆಚ್ಚಿಸಿದ್ದಾರೆ. ಅದನ್ನು ಇಳಿಕೆ ಮಾಡಿ ಯಥಾಸ್ಥಿತಿ ಮುಂದುವರೆಸಬೇಕು ಎಂದು ಸಂಸದ ಗೋವಿಂದ ಎಂ.ಕಾರಜೋಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಸದರಾಗಿ ಪ್ರಪಥಮ ಬಿಜೆಪಿ, ಜೆಡಿಎಸ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗಿಂತ ಕಡಿಮೆ ದರ ಎನ್ನುವುದು ಭಂಡತನದ ಹೇಳಿಕೆ. ಗ್ಯಾರೆಂಟಿಗಳಿಗೆ ಹಣ ಹೊಂದಿಸಲು ಸರ್ಕಸ್ ಮಾಡುತ್ತಿದ್ದಾರೆ. ಮೂರು ತಿಂಗಳಿಂದ ಅನ್ನಭಾಗ್ಯ ಹಣ ಹಾಕಿಲ್ಲ' ಎಂದು ದೂರಿದ ಅವರು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷದಲ್ಕಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ಮುದ್ದೇಬಿಹಾಳ ಶಾಸಕ ಅಪ್ಪಾಜಿ ಗೌಡ್ರು ಯಾವ ಪುರುಷಾರ್ಥಕ್ಕೆ ಮುಂದುವರೆಯಬೇಕು ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿ 40 ಶಾಸಕರು ಬಂಡೇಳುತ್ತಿದ್ದಾರೆ ಎಂದರು.
ಬಿತ್ತನೆಗೆ ರೈತರಿಗೆ ಶೇಂಗಾ ಬೀಜ ಸಿಗುತ್ತಿಲ್ಲ. ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿದೆ. ಸಮರ್ಪಕ ಪೂರೈಕೆ ಆಗುತ್ತಿಲ್ಲ. ಬರ ಪರಿಹಾರದ ಹಣವನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕಳೆದ 74 ವರ್ಷಗಳಲ್ಲಿ ಹೇಗೆ ಆಡಳಿತ ನಡೆದಿದೆ ಅದನ್ನು ಮುಂದುವರೆಸಿ, ಜನರ ದಾರಿ ತಪ್ಪಿಸಬೇಡಿ' ಎಂದು ತಿರುಗೇಟು ನೀಡಿದರು.
`ಕಳೆದ ನಾಲ್ಕು ತಿಂಗಳಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸಚಿವರು ನಿಷ್ಕ್ರಿಯರಾಗಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ನಾನು ಕೆಡಿಪಿ ಸಭೆಯಲ್ಲಿ ಭಾಗವಹಿಸಬಾರದು ಎಂಬ ಕಾರಣಕ್ಕೆ ಕೆಡಿಪಿ ಸಭೆ ಮುಂದೂಡಿದ ಬುದ್ದಿವಂತಿಕೆ ಮಾಡಿದ್ದಾರೆ ಲೋಕಸಭೆ ಅಧಿವೇಶನ ಪ್ರಾರಂಭದ ಸಮಯಕ್ಕೆ ಸಭೆ ನಿಗಧಿ ಮಾಡಿದ್ದಾರೆ. ನನ್ನನ್ನು ಹೊರತುಪಡಿಸಿ ಕೆಡಿಪಿ ಸಭೆ ಮಾಡುವುದಿದ್ದರೆ ಮಾಡಿ. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಲೋಕಸಭೆ ಅಧಿವೇಶನ ಮುಗಿದ ಬಳಿಕ ಕೆಡಿಪಿ ಸಭೆ ನಡೆಸಿದರೆ ಉತ್ತಮ' ಎಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಬೆಂಗಳೂರಿನಲ್ಲಿ ಹೊಸಬರ ಚಲನವಲನ ಗಮನಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಶೆಡ್‍ನಲ್ಲಿಟ್ಟು ಕೊಲೆ ಮಾಡಿದರೂ ಸಹ ಗೊತ್ತಾಗಿಲ್ಲ. ಸರ್ಕಾರ ಇಲ್ಲ ಅನ್ನಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದ ಸಂಸದರು ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಸ್ಥಳೀಯ ಶಾಸಕರು ವಾರದ ನಂತರ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಇತ್ತ ಕಾಲಿಟ್ಟಿಲ್ಲ. ಇದೀಗ ಗೃಹ ಸಚಿವರ ಬಾಲ ಹಿಡಿದುಕೊಂಡು ಬರುತ್ತಾರಾ' ಎಂದ ಪ್ರಶ್ನಿಸಿದರು.
`ಶಕ್ತಿ ಯೋಜನೆ ಮಾಡಿ ವಿದ್ಯಾರ್ಥಿಗಳನ್ನು ಬಸ್‍ನಲ್ಲಿ ಸಂಚರಿಸದಂತೆ ಮಾಡಿದ್ದಾರೆ. ಕೆಎಸ್‍ಆರ್‍ಟಿಸಿಯ ಎಲ್ಲ ಮಾರ್ಗಗಳಿಗೂ ಶಾಲೆ, ಕಾಲೇಜುಗಳಿಗಾಗಿ ವಿಶೇಷ ಬಸ್ ಬಿಡಬೇಕು ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಬಂದು ಹೋದ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಿಡಿಯೂರಪ್ಪ ಅವರನ್ನು ಬಂಧಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿತು. ಸತ್ತು ಹೋದ ಪ್ರಕರಣದಲ್ಲಿ 80 ವರ್ಷ ದಾಟಿದ ಹಿರಿಯರನ್ನು ಅವಮಾನ ಮಾಡುವಂತೆ ನ್ಯಾಯಾಲಯಕ್ಕೆ ಕರೆತರುವುದು ಸೇಡಿನ ರಾಜಕಾರಣ' ಎಂದ ಅವರು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಶೀಘ್ರವೇ ನಡೆಸಬೇಕು. ಈ ಮೂಲಕ ಅಭಿವೃದ್ಧಿಗೆ ವೇಗ ನೀಡುವ ಕಾರ್ಯ ಆಗಬೇಕು' ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಖಂಜಾಚಿ ಎಸ್.ಆರ್.ಗಿರೀಶ್, ಚಿದಾನಂದ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.