For the best experience, open
https://m.suddione.com
on your mobile browser.
Advertisement

ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ : ತಿಪ್ಪೇಸ್ವಾಮಿ

05:53 PM Jun 06, 2024 IST | suddionenews
ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ   ತಿಪ್ಪೇಸ್ವಾಮಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜೂ.06  : ಪ್ರತಿಯೊಬ್ಬರು ಆರೋಗ್ಯವಾಗಿರಬೇಕಾದರೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಕರೆ ನೀಡಿದರು.

ವೀರಶೈವ ಸಮಾಜ, ಇನ್ನರ್‍ವೀಲ್ ಕ್ಲಬ್, ಮಹಿಳಾ ಸೇವಾ ಸಮಾಜದ, ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವುಗಳ ಸಹಯೋಗದೊಂದಿಗೆ ಮಹಿಳಾ ಸೇವಾ ಸಮಾಜದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆಯಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದರು.
ಕಾರ್ಡಿಯಾಲಜಿಸ್ಟ್ ಡಾ.ಸುಜಯ್ ಮಾತನಾಡಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕೊಬ್ಬು ಇವುಗಳು ಪ್ರತಿಯೊಬ್ಬರ ಆರೋಗ್ಯವನ್ನು ಹದಗೆಡಿಸುತ್ತವೆ. ಚಿಕ್ಕ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗುತ್ತಿದೆ. ಧೂಮಪಾನ, ಮದ್ಯಪಾನ ಇವುಗಳಿಂದಲೂ ಹೃದಯಾಘಾತ ಜಾಸ್ತಿಯಾಗುವ ಸಾಧ್ಯತೆಗಳಿವೆ. ಮಹಿಳೆಯರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುಂದೆ ಆಗಬಹುದಾದ ಅನಾಹುತವನ್ನು ತಡೆಯುವಂತೆ ಸಲಹೆ ನೀಡಿದರು.

ವೀರಶೈವ ಲಿಂಗಾಯಿತ ಸಮಾಜದ ಉಪಾಧ್ಯಕ್ಷ ಕೆ.ಸಿ.ನಾಗರಾಜ್ ಮಾತನಾಡಿ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಮಹಿಳೆಯರು ತಪ್ಪದೆ ತಪಾಸಣೆ ಮಾಡಿಸಿಕೊಂಡು ಏನಾದರೂ ತೊಂದರೆಯಿದ್ದಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹೇಳಿದರು.

ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮೋಕ್ಷರುದ್ರಸ್ವಾಮಿ ಮಾತನಾಡುತ್ತ ನಲವತ್ತು ವರ್ಷಗಳ ನಂತರ ಮಹಿಳೆಯರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಯಾವಾಗಲು ಸಂಸಾರದ ಕಡೆ ಹೆಚ್ಚಿನ ಗಮನ ಕೊಡುವ ಮಹಿಳೆಯರು ಆರೋಗ್ಯದ ಕಡೆಗೂ ಲಕ್ಷ್ಯ ಕೊಡಬೇಕು. ನಿಮ್ಮ ನಿಮ್ಮ ಆರೋಗ್ಯವನ್ನು ನೀವುಗಳೆ ಕಾಪಾಡಿಕೊಳ್ಳಬೇಕು. ಬಸವೇಶ್ವರ ಆಸ್ಪತ್ರೆಯಲ್ಲಿ ಒಳ್ಳೊಳ್ಳೆ ವೈದ್ಯರುಗಳಿದ್ದಾರೆ. ಹೆಲ್ತ್ ಕಾರ್ಡ್ ಕೊಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದರು.

ಬಸವೇಶ್ವರ ಆಸ್ಪತ್ರೆಯ ಡಾ. ಪ್ರಶಾಂತ್ ಮಾತನಾಡಿ ಬಸವೇಶ್ವರ ಆಸ್ಪತ್ರೆಯಲ್ಲಿರುವ ವೈದ್ಯರುಗಳು ಸೇವಾ ಮನೋಭಾವನೆಯನ್ನು ಹೊಂದಿದ್ದು, ಚಿಕಿತ್ಸೆಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸ್ಪಂದಿಸಿ ಹೆಲ್ತ್ ಕಾರ್ಡ್ ಕೂಡ ಆರಂಭಿಸಲಾಗುವುದು. ಇದರಿಂದ ಚಿಕಿತ್ಸೆಗೆ ತಗಲುವ ವೆಚ್ಚದಲ್ಲಿ ಶೇ.20 ಪರ್ಸೆಂಟ್ ರಿಯಾಯಿತಿ ಸಿಗಲಿದೆ. ಏನಾದರೂ ನಮ್ಮಲ್ಲಿ ಕುಂದುಕೊರತೆಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ನಮ್ಮಲ್ಲಿಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು.

ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರ, ಖಜಾಂಚಿ ಕೆ.ಎಂ.ತಿಪ್ಪೇಸ್ವಾಮಿ, ಲತ ಉಮೇಶ್ ಇನ್ನರ್‍ವೀಲ್ಹ್ ಕ್ಲಬ್ ಜಂಟಿ ಕಾರ್ಯದರ್ಶಿ ವೀಣ ವೇದಿಕೆಯಲ್ಲಿದ್ದರು.

Tags :
Advertisement