ಚಿತ್ರದುರ್ಗ ಜಿಲ್ಲೆಯ 278 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆ, ತೊಂದರೆಯಾಗದಂತೆ ಕ್ರಮ ವಹಿಸಿ : ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸೂಚನೆ
ಸುದ್ದಿಒನ್, ಚಿತ್ರದುರ್ಗ. ಜ.16 : ಜಿಲ್ಲೆಯಲ್ಲಿ ಬರುವ ಬೇಸಿಗೆಯಲ್ಲಿ ಅಂದಾಜು 278 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆಗಳಿದ್ದು, ಇಂತಹ ಸಮಸ್ಯಾತ್ಮಕ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ 36, ಚಳ್ಳಕೆರೆ-32, ಚಿತ್ರದುರ್ಗ-43, ಮೊಳಕಾಲ್ಮೂರು-67, ಹಿರಿಯೂರು-57 ಹಾಗೂ ಹೊಳಲ್ಕೆರೆ-43 ಸೇರಿದಂತೆ ಒಟ್ಟು 278 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವವಿದೆ.
ಹೀಗಾಗಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡಲು ಈಗಾಗಲೆ ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮಾತನಾಡಿ, ಬರ ಪರಿಸ್ಥಿತಿಯ ತುರ್ತು ನಿರ್ವಹಣೆಗಾಗಿ ಜಿಲ್ಲೆಗೆ ಈಗಾಗಲೆ 09 ಕೋಟಿ ರೂ. ಬಿಡುಗಡೆಯಾಗಿದೆ.
ಇದರಲ್ಲಿ ಮೇವು ಪೂರೈಕೆ, ಟ್ಯಾಂಕರ್ ಮೂಲಕ ನೀರು ಸರಬರಾಜು, ಖಾಸಗಿ ಬೋರ್‍ವೆಲ್ ಬಾಡಿಗೆಗೆ ಪಡೆಯುವುದು ಹಾಗೂ ತುರ್ತು ಪೈಪ್‍ಲೈನ್ ಕಾಮಗಾರಿಗಳಿಗೆ ಹಾಗೂ ತಾತ್ಕಾಲಿಕ ಪರಿಹಾರ ಕಾರ್ಯಗಳಿಗೆ ವಿನಿಯೋಗಿಸಿ, ಬರ ಪರಿಸ್ಥಿತಿ ನಿರ್ವಹಿಸಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಇರುವ ಕಡೆಗಳಲ್ಲಿ ಬೋರ್‍ವೆಲ್ ಕೊರೆಯಿಸಬೇಕು ಎಂದು ಸೂಚನೆ ನೀಡಿದರು.
ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಮಾತನಾಡಿ, ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಯಾವುದೇ ಹಾಸ್ಟೆಲ್‍ಗಳಿಗೆ ಗ್ರಾಮೀಣ ಭಾಗಗಳಿಂದ ಎಷ್ಟೇ ವಿದ್ಯಾರ್ಥಿಗಳು ಬಂದರೂ ಅಂತಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದಾಖಲಿಗೆ ನಿರಾಕರಿಸಬಾರದು, ಅಗತ್ಯಬಿದ್ದರೆ, ಹೆಚ್ಚುವರಿ ಸ್ಥಾನಗಳನ್ನು ಸರ್ಕಾರದಿಂದ ಮಂಜೂರಾತಿ ಪಡೆಯಬಹುದು. ಒಟ್ಟಾರೆ ಹಾಸ್ಟೆಲ್ ಪ್ರವೇಶ ಕೋರಿ ಬರುವ ಹಳ್ಳಿಯ ಮಕ್ಕಳಿಗೆ ಹಾಸ್ಟೆಲ್‍ನಲ್ಲಿ ಪ್ರವೇಶ ದೊರೆಯಬೇಕು ಎಂದು ಸೂಚನೆ ನೀಡಿದರು.
ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ವಿವಿಧ ಅಭಿವೃದ್ಧಿ ನಿಗಮಗಳಡಿ ಗಂಗಾ ಕಲ್ಯಾಣ, ನೇರ ಸಾಲ ಮತ್ತಿತರ ಯೋಜನೆಗಳಿಗೆ ಆನ್‍ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆದರೆ ನಿಗದಿತ ಗುರಿ ಸಂಖ್ಯೆ ಮಾತ್ರ ಕೇವಲ ಬೆರಳಣಿಕೆಯಷ್ಟು ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಸರ್ಕಾರದ ಸವಲತ್ತು ದೊರೆಯುವಂತಾಗಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಡಾ.ಎಂ.ಚಂದ್ರಪ್ಪ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ತಿಮ್ಮಯ್ಯ, ಕೆ.ಸಿ.ನಾಗರಾಜು, ಖಲೀಮುಲ್ಲಾ, ರಂಗಸ್ವಾಮಿ, ದೀಪಿಕಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.