For the best experience, open
https://m.suddione.com
on your mobile browser.
Advertisement

ಬರ ಪರಿಸ್ಥಿತಿ ಇದೆ ಕೆಲಸ ಕೊಡುತ್ತೇವೆ, ಯಾರೂ ಗುಳೇ ಹೋಗಬೇಡಿ : ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್

03:59 PM Mar 14, 2024 IST | suddionenews
ಬರ ಪರಿಸ್ಥಿತಿ ಇದೆ ಕೆಲಸ ಕೊಡುತ್ತೇವೆ  ಯಾರೂ ಗುಳೇ ಹೋಗಬೇಡಿ   ಜಿ ಪಂ  ಸಿಇಒ ಎಸ್ ಜೆ  ಸೋಮಶೇಖರ್
Advertisement

Advertisement

ಚಿತ್ರದುರ್ಗ, ಮಾ. 14 :  ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಕೂಲಿ ಕೆಲಸ ಅರಸಿಕೊಂಡು, ಯಾರೂ ಕೂಡ ಗುಳೇ ಹೋಗಬೇಡಿ, ನರೇಗಾ ಯೋಜನೆಯಡಿ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಕೂಲಿ ಕೆಲಸ ಕೊಟ್ಟು, ಸಕಾಲದಲ್ಲಿಯೇ ಕೂಲಿ ಹಣ ನೀಡುತ್ತೇವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.

ಹೊಳಲ್ಕೆರೆ ತಾಲ್ಲೂಕು ಹಿರೇ ಎಮ್ಮಿಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಲ್ಯಾಣಿ ಅಭಿವೃದ್ಧಿ, ಗ್ರಾಮೀಣ ಉದ್ಯಾನವನ, ಚರಂಡಿ, ರಸ್ತೆ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿ, ಬಳಿಕ ಅವರು ಮಾತನಾಡಿದರು.

Advertisement

ಮಳೆಯ ಕೊರತೆಯಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ.  ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಈಗಾಗಲೆ ನರೇಗಾ ಯೋಜನೆಯಡಿ ಕೂಲಿ ಆಧಾರಿತ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದೇವೆ.  ಉದ್ಯೋಗವನ್ನು ಅರಸಿಕೊಂಡು ಯಾರೂ ಕೂಡ ಗುಳೇ ಹೋಗಬಾರದು, ತಮ್ಮ ತಮ್ಮ ಗ್ರಾಮಗಳಲ್ಲಿಯೇ ನರೇಗಾದಡಿ ನೀಡುವ ಉದ್ಯೋಗವನ್ನು ನೀಡುತ್ತೇವೆ.  ಕೆಲಸ ಅಗತ್ಯವಿರುವವರು ಕೂಡಲೆ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ತಿಳಿಸಬೇಕು.  ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಕೂಲಿ ಕೆಲಸ ನೀಡುತ್ತೇವೆ, ಅಲ್ಲದೆ ಸಕಾಲಕ್ಕೆ ಕೂಲಿ ಹಣವನ್ನು ಕೂಡ ಪಾವತಿಸಲಾಗುವುದು.  ಗ್ರಾಮೀಣ ಭಾಗದ ಮಹಿಳಾ ಕೂಲಿಕಾರರು ಹೆಚ್ಚು ಹೆಚ್ಚು ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು, ಬರ ಪರಿಸ್ಥಿತಿಯಲ್ಲಿಯೇ ಆರ್ಥಿಕವಾಗಿ ಸದೃಢರಾಗಬೇಕು.  ಅಧಿಕಾರಿಗಳು ನರೇಗಾ ಯೋಜನೆ ಅನುಷ್ಠಾನಗೊಳಿಸುವಾಗ 60 : 40 ಅನುಪಾತವನ್ನು ತಪ್ಪದೆ ಪಾಲಿಸಬೇಕು, ಈ ಮೂಲಕ ಇನ್ನೂ ಹೆಚ್ಚು ಉತ್ತಮ ಗುಣಮಟ್ಟದ ಆಸ್ತಿಗಳ ಸೃಜನೆಯನ್ನು ಮಾಡಬೇಕು ಎಂದು ಸಿಇಒ ಸೋಮಶೇಖರ್ ಹೇಳಿದರು.
ನಂತರ ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ವಹಿಸುತ್ತಿರುವ ಕೂಸಿನ ಮನೆಗೆ ಭೇಟಿ ನೀಡಿದ ಅವರು, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ವಿತರಣೆ ಆಗಬೇಕು, ಗುಣಮಟ್ಟದ ಆಹಾರ ಮತ್ತು ಕುಡಿಯುವ ನೀರನ್ನು ಪೂರೈಸಬೇಕು, ಮತ್ತು ಮಕ್ಕಳ ಆರೋಗ್ಯವನ್ನು ತುಂಬಾ ಜಾಗರೂಕತೆಯಿಂದ ಕಾಳಜಿ ವಹಿಸಿ ನೋಡಿಕೊಳ್ಳುವಂತೆ ಕೂಸಿನ ಮನೆ ನಿರ್ವಾಹಕರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 7 ಗ್ರಾಮಗಳಿದ್ದು ಕಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಸಿಇಒ ಅವರ ಗಮನಕ್ಕೆ ತಂದರು.  ಸ್ಪಂದಿಸಿದ ಸಿಇಒ ಅವರು, ಅತ್ಯಂತ ತುರ್ತಾಗಿ ಸ್ಥಳೀಯ ಖಾಸಗಿ ಬೋರ್‍ವೇಲ್ ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರನ ಸಮಸೆಯನ್ನು ಪರಿಹರಿಸುವಂತೆ ಸೂಚಿಸಿದರು.
ಹಿರೇ ಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 7000 ಸಾವಿರ ಜನಸಂಖ್ಯೆಯಿದ್ದು, 17 ಗ್ರಾಮ ಪಂಚಾಯಿತಿಯ ಸದಸ್ಯರಿದ್ದಾರೆ.  ಹೀಗಾಗಿ ಈ ಗ್ರಾಮ ಪಂಚಾಯಿತಿಯನ್ನು ಗ್ರೇಡ್ 1 ಗ್ರಾಮ ಪಂಚಾಯಿತಿಯನ್ನಾಗಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.  ಗ್ರಾ.ಪಂ. ಕಟ್ಟಡ 30 ವರ್ಷ ಹಳೆಯದಾಗಿದ್ದು, ಶಿಥಿಲವಾಗಿದೆ, ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಸದಸ್ಯರು ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಸದಸ್ಯರ ಶಿಫಾರಸ್ಸಿನಂತೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಬಳಕೆಗೆ ಅವಕಾಶವಿದ್ದು, ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದು, ಹೊಸ ಕಟ್ಟಡ ನಿರ್ಮಿಸಿಕೊಳ್ಳಲು ಸೂಚಿಸಿದರು.  ಗ್ರಾಮ ಪಂಚಾಯಿತಿಯು ಕರವಸೂಲಿಯಲ್ಲಿ ಅತ್ಯಂತ ಹಿಂದುಳಿದಿದ್ದು,ಅರೇ ಮಲೆನಾಡಿನ ಭಾಗವಾಗಿರುವುದರಿಂದ ಅತಿ ಹೆಚ್ಚಿನ ವಸೂಲಾತಿಯನ್ನು ಮಾಡಿ, ಗ್ರಾಮ ಪಂಚಾಯಿತಿಯ ಸಂಪನ್ಮೂಲ ಹೆಚ್ಚು ಮಾಡಿಕೊಂಡು ಗ್ರಾಮಗಳ ಅಭಿವೃದ್ದಿ ಮಾಡುವಂತೆ ಸೂಚನೆ ನೀಡಿದರು.
ಗ್ರಾಮದ ಸರ್ಕಾರಿ ಫ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರೊಂದಿಗೆ ಮತ್ತು ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ವಾರ್ಷಿಕ ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ಸಂವಾದ ನಡೆಸಿದ ಅವರು, ಮಕ್ಕಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.  ಏಕಾಗ್ರತೆಯಿಂದ ವ್ಯಾಸಂಗ ಮಾಡಿ, ಉತ್ತಮ ಅಂಕಗಳÀನ್ನು ಪಡೆದು ತಮ್ಮ ಶಾಲೆಗೆ ಹಾಗೂ ತಂದೆ-ತಾಯಿಯವರಿಗೆ ಮತ್ತು ಜಿಲ್ಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು.
ಹಿರೇ ಎಮ್ಮಿಗನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪ್ರಕಾಶ್ ಎಸ್.  ಗ್ರಾ.ಪಂ. ಉಪಾಧ್ಯಕ್ಷರು ಹಾಗು ಸರ್ವ ಸದಸ್ಯರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸ್ಥಳೀಯ ಸಮಸ್ಯೆಗಳ ಕುರಿತು ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಉಪ ಕಾರ್ಯದರ್ಶಿ ತಿಮ್ಮಪ್ಪ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಸೇರಿದಂತೆ ನರೇಗಾ ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಯಲ್ಲಿ ಹಾಜರಿದ್ದರು.

Tags :
Advertisement