ರಾಜಕಾರಣದಲ್ಲಿ ಯಾರೂ ಶ್ರತ್ರುಗಳಿಲ್ಲ, ಮಿತ್ರಗಳಿಲ್ಲ : ಸಚಿವ ಡಿ ಸುಧಾಕರ್
ಸುದ್ದಿಒನ್, ಹಿರಿಯೂರು, ಮಾರ್ಚ್. 18.: ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ, ಮಿತ್ರಗಳಲ್ಲ. ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ರನ್ನು ಗೆಲ್ಲಿಸಲು ಹೃದಯ ಪೂರ್ವಕವಾಗಿ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವಭಾವಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನಗೂ ಚಿರಪರಿತರಾಗಿದ್ದ ಎ.ಕೃಷ್ಣಪ್ಪ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅಭಿವೃದಿ ಪರ ಕೆಲಸ ಮಾಡಿದ ವ್ಯಕ್ತಿ. ಆ ಹಿನ್ನೇಲೆಯಲ್ಲಿ ಅವರ ಪುತ್ರಿ ಕೆ.ಪೂರ್ಣಿಮಾ ಅವರನ್ನು ಪಕ್ಷಕ್ಕೆ ಬರಮಾಡಿ ಕೊಂಡಿದ್ದಾರೆ. ಕೃಷ್ಣಪ್ಪ ಅವರಿಗೆ ನಾನೇ ಟಿಕೆಟ್ ತಪ್ಪಿಸಿ ತಪ್ಪು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದರು. ಈಗ ನಾವೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯೋಣ. ಅಕಾರ, ಹಣ ಯಾವುದು ಶಾಶ್ವತವಲ್ಲ. ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಪಕ್ಷ ಕಾಂಗ್ರೆಸ್. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಭರದಿಂದ ಆರಂಭವಾಗಿದೆ. ತಾಲೂಕಿನಲ್ಲಿ ಅಭಿವೃದ್ಧಿಗಾಗಿ ಒಂದಾಗಿ ಹೋಗೋಣ ಎಂದರು.
ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಕಳೆದ ಐದು ವರ್ಷ ಬಿಜೆಪಿ ಶಾಸಕಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಬೇರೆ ಪಕ್ಷದಿಂದ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಆದ್ದರಿಂದ ಎರಡು ಪಕ್ಷದಲ್ಲಿದ್ದ ಕಾರ್ಯಕರ್ತರು ವಾದವಿವಾದ, ಪಕ್ಷ ಸಮರ್ಥನೆ ಇನ್ನೀತರ ಕಾರಣಗಳಿಂದ ಭಿನ್ನಾಭಿಪ್ರಾಯ ತೋರದೆ ಏನೇ ವೈಮನಸ್ಸು ಇದ್ದರೂ ಎಲ್ಲಾವನ್ನು ಬದಿಗೊತ್ತಿ ನಾವೆಲ್ಲರೂ ಒಂದಾಗಬೇಕು. ಕಾಂಗ್ರೆಸ್ ವಿಶ್ವಾಸ, ನಂಬಿಕೆ ಇಟ್ಟುಕೊಂಡಿರುವ ಪಕ್ಷ ಎಂದರು. ಜಿಲ್ಲೆಯಲ್ಲಿ ಐದು ಜನರು ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆಂದು ಸುಮ್ಮನೆ ಕೂರದೇ ಕಾರ್ಯಕರ್ತರು ಮನೆಮನೆಗೂ ತೆರಳಿ ಗ್ಯಾರಂಟಿ ಯೋಜನೆ ತಲುಪಿಸಿರುವ ಬಗ್ಗೆ ನೆನೆಸಿದರೆ ಲೋಕಸಭೆ ಹಾಗೂ ಆಗ್ನೇಯ ಶಿಕ್ಷಕರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧ್ಯ. ಅಭ್ಯರ್ಥಿ ಯಾರೇ ಆಗಲಿ ನಾವೆಲ್ಲಾ ಕಾಂಗ್ರೆಸ್ ಗೆಲುವಿಗೆ ಹೋರಾಡಬೇಕು. ಪಕ್ಷ ತಾಯಿ ಸಮಾನ, ಪಕ್ಷಕ್ಕೆ ಮೋಸ ಮಾಡಿದರೆ, ತಾಯಿಗೆ ಮೋಸ ಮಾಡಿದಂತೆ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ ಈ ಭಾಗದಲ್ಲಿ ಇಲ್ಲಿಯವರೆಗೂ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಗೆಲುವು ಸಾಸಿಲ್ಲ. ಆದ್ದರಿಂದ ಎಲ್ಲಾ ಕಾರ್ಯಕರ್ತರು ಕಾಂಗ್ರೆಸ್ ಗೆಲ್ಲಿಸಲು ಹಗಲಿರುಳೆನ್ನದೇ ಕಂಕಣ ಬದ್ಧರಾಗಿ ಕೆಲಸ ಮಾಡಬೇಕು. ಯುವಕರು ಅಂಧರು. ಅವರಿಗೆ ವಾಸ್ತುವ ಕಟುಸತ್ಯದ ಮೂಲಕ ಪಕ್ಷಕ್ಕೆ ಕರೆತರಬೇಕು. ಲೋಕಸಭಾ ಚುನಾವಣೆಯಲ್ಲಿ ಸಿಎಂ ಮತ್ತು ಡಿಸಿಎಂ ಇಟ್ಟಿರುವ 20ಕ್ಷೇತ್ರಗಳ ಟಾರ್ಗೆಟ್‌ನಲ್ಲಿ ಚಿತ್ರದುರ್ಗ ಮೊದಲ ಸ್ಥಾನವಾಗಬೇಕು ಎಂದರು. ಈ ದೇಶದ ಅಭಿವೃದ್ದಿಗೆ ಶಿಕ್ಷಕರ ಕೊಡುಗೆ ಅಪಾರ. ಈಗಾಗಲೇ ಸಿಎಂ ಅವರು ಏಳನೇ ಆಯೋಗದ ವರದಿಯನ್ನು ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ವರದಿ ಅನುಷ್ಠಾನಕ್ಕೆ ಬರುವುದು ಹಾಗೂ ಓಪಿಎಸ್ ಜಾರಿಗೆ ತರುವುದು ನೂರಕ್ಕೆ ನೂರರಷ್ಟು ಸತ್ಯ. ಕರೋನಾ ವೇಳೆ ಖಾಸಗಿ ಶಿಕ್ಷಕರ ಸಮಸ್ಯೆ ನೋಡಿದ್ದೇವೆ. ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಮಾಜಿ ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾನಂದಿನಿಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಸದಸ್ಯೆ ಮೊದಲ ಮೇರಿಯಾ, ಯುವ ಮುಖಂಡ ಡಾ.ಬ್ರಿಜೇಶ್, ಡಾ.ಸುಜಾತ, ಜಿ.ಎಲ್.ಮೂರ್ತಿ, ಕಾಂತರಾಜ್, ಗುರುಪ್ರಸಾದ್, ವೈ.ನಾಗರಾಜ್, ಚಂದ್ರನಾಯ್ಕ್, ತಿಮ್ಮಣ್ಣ, ಶ್ರೀನಿವಾಸ್, ರಜಿಯಾ ಸುಲ್ತಾನ್, ಜ್ಞಾನೇಶ್, ಶಿವ ಕುಮಾರ್ ಇತರರಿದ್ದರು.