ರಂಗಭೂಮಿ ಸದಾ ಹರಿಯವ ನದಿಯಿದ್ದಂತೆ, ಎಷ್ಟೇ ಆಧುನಿಕತೆ ಕಡೆಗೆ ಸಾಗಿದರೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡೇ ಬರುತ್ತಿದೆ : ಡಾ.ಕೆ.ಎಂ.ವೀರೇಶ್
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.27 : ತಾನಲ್ಲದ ಪಾತ್ರವನ್ನು ಪ್ರತಿನಿಧಿಸುವವನೆ ನಿಜವಾದ ನಟ, ಒಬ್ಬ ನಟ ತನ್ನ ಪಾತ್ರದ ಮೂಲಕ ಸಮಾಜ ಬದಲಾವಣೆಗೆ ಕಾರಣನಾಗಬಲ್ಲ ಎಂದು ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸೃತ ಹಾಗೂ ಹಿರಿಯ ಕಲಾವಿದ ಜಂಬೂನಾಥ್ ಹೇಳಿದರು.
ತಾಲ್ಲೂಕಿನ ಮಲ್ಲಾಪುರ ಗ್ರಾಮದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ಮಾರ್ಚ್ 27ರಂದು ಜಗತ್ತಿನ ಒಬ್ಬ ಶ್ರೇಷ್ಠ ನಾಟಕಕಾರ, ಕಲಾವಿದ ರಂಗ ಸಂದೇಶವನ್ನು ನೀಡುತ್ತಾರೆ. ಆ ರಂಗ ಸಂದೇಶವನ್ನು ನಾವು ಪಾಲಿಕೊಂಡು ಹೋಗಬೇಕು. ಅದರಲ್ಲಿರುವ ಸಾರವನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಬೇಕು. ಗಿರೀಶ್ ಕಾರ್ನಾಡ್, ಅಶೋಕ ಬಾದರದಿನ್ನಿ, ಗುಬ್ಬಿ ವಿರಣ್ಣ, ಬಿ.ವಿ.ಕಾರಂತ, ಪ್ರಸನ ಇನ್ನೂ ಮುಂತಾದ ರಂಗಕರ್ಮಿಗಳು ನಮ್ಮ ನಾಡಿನ ರಂಗಭೂಮಿಯನ್ನು ಶ್ರೀಮಂತಗೊಳ್ಳಿಸಿದ್ದಾರೆ. ಇಂದು ಮುಖ್ಯವಾಗಿ ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡುವಂತೆ ಪೋಷಕರು ಮಾಡಬೇಕು ಎಂದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಮಾತನಾಡಿ, ರಂಗಭೂಮಿ ಸದಾ ಹರಿಯವ ನದಿ ಇದ್ದ ಹಾಗೆ ನಾವು ಎಷ್ಟೇ ಆಧುನಿಕತೆ ಕಡೆಗೆ ಸಾಗಿದರು ರಂಗಭೂಮಿ ಮಾತ್ರ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬರುತ್ತಿದೆ. ಶಿಕ್ಷಕರಾಗುವವರು ತಮ್ಮ ಪಾಠದಲ್ಲಿ ಧ್ವನಿಯ ಏರಿಳಿತ ಹಾಗೂ ಹಾವಭಾವಗಳ ಕಡೆ ಹೆಚ್ಚು ಗಮನ ಹರಿಸಿ ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಬೋಧನೆ ಮಾಡಬಹುದು.
ಪ್ರತಿಯೊಬ್ಬ ಶಿಕ್ಷಕನಲ್ಲಿ ಒಬ್ಬ ಕಲಾವಿದ ಅಡಗಿರುತ್ತಾನೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಒಂದು ಕಾಲದಲ್ಲಿ ನಾಟಕಗಳ ಪ್ರದರ್ಶನವಾದರೆ ಹೆಚ್ಚಿನ ಜನ ಸೇರುತ್ತಿದ್ದರು ಇತ್ತೀಚಿನ ದಿನಗಳಲ್ಲಿ ನಾಟಕಗಳು ಪ್ರೇಕ್ಷಕರ ಕೋರತೆಯನ್ನು ಕಾಣುತ್ತಿದೆ. ಆದಷ್ಟು ಜನ ನಾಟಕಗಳನ್ನು ನೋಡುವಂತಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದ ರಚನಾ ಮಂಜಣ್ಣ ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಜ್ಯೋತಿ ಬಾದರದಿನ್ನಿ ಅವರು ನಾರ್ವೆ ದೇಶದ ಜಾನ್ ಪೋಸ್ಸೇ ಅವರು ನೀಡಿರುವ ಈ ವರ್ಷದ ರಂಗ ಸಂದೇಶವನ್ನು ವಾಚಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂ.ಆರ್. ಜಯಲಕ್ಷ್ಮಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪಪ್ರಾಚಾರ್ಯ ಎಚ್.ಎನ್.ಶಿವಕುಮಾರ, ಉಪನ್ಯಾಸಕ ಡಾ.ಹನುಮಂತ ರೆಡ್ಡಿ, ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಅಧ್ಯಕ್ಷೆ ಅನಸೂಯಾ ಬಾದರದಿನ್ನಿ, ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಕಲಾವಿದರಾದ ಗುರುಕಿರಣ, ರಾಘವೇಂದ್ರ ಮತ್ತಿತರರು ಇದ್ದರು.