ರಾಜ್ಯ ಸರ್ಕಾರ ಡಿ.ಕೆ.ಶಿವಕುಮಾರ್ ರವರನ್ನು ರಕ್ಷಣೆ ಮಾಡಲು ಹೊರಟಿದೆ : ಚಿತ್ರದುರ್ಗದಲ್ಲಿ ಆರ್. ಅಶೋಕ್ ಹೇಳಿಕೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನ. 25 : ರಾಜ್ಯದ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುವುದರ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ರವರನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಇದರ ವಿರುದ್ದ ಬಿಜೆಪಿ ಸದನದ ಒಳಗೂ ಹೊರಗು ಹೋರಾಟವನ್ನು ಮಾಡಲಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಆಶೋಕ್ ಸರ್ಕಾರದ ಕ್ರಮದ ವಿರುದ್ದ ಕಿಡಿ ಕಾರಿದರು.
ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಅವರು ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸರ್ಕಾರ ಆಧಿಕಾರದಲ್ಲಿದ್ಧಾಗ ಶಿವಕುಮಾರ್ ರವರ ಆಕ್ರಮ ಆಸ್ತಿ ಮತ್ತು ಸಂಪಾದನೆಯ ವಿರುದ್ದ ಪ್ರಕರಣವನ್ನು ದಾಖಲಿಸಲು ಸೂಚಿಸಲಾಗಿತ್ತು. ಅದರಂತೆ ಪ್ರಕರಣವನ್ನು ದಾಖಲಿಸಿದ ಸಿಬಿಐ ಶೆ.70 ರಷ್ಟು ತನಿಖೆಯನ್ನು ನಡೆಸಿತ್ತು. 2019ರಲ್ಲಿ ನಮ್ಮ ಸರ್ಕಾರ ಇಲಾಖೆಯ ಮನವಿ ಮೇರೆಗೆ ಅವರು ಮಾಡಿದ ಅಪರಾಧ ಸಿಕ್ಕಿರುವ ಹಣ ಶೇ.300ರಷ್ಟು ಆದಾಯ ಜಾಸ್ತಿ ಇದನ್ನು ಸಿಬಿಐಗೆ ವಹಿಸಲಾಗಿತ್ತು. ನ್ಯಾಯಾಲಯ 3 ತಿಂಗಳ ಗಡುವನ್ನು ನೀಡಿ ಪ್ರಕರಣವನ್ನು ಪೂರ್ಣ ಮಾಡಲು ಸೂಚಿಸಿತ್ತು. ಇದಾದ ಮೇಲೆ ಡಿ.ಕೆ.ಶಿ.ಯವರ ವಕೀಲರು ಪ್ರಕರಣವನ್ನು ಮುಂದಕ್ಕೆ ಹಾಕಿಸಿದ್ದಾರೆ.
ಇದಾದ ಮೇಲೆ ಡಿ.ಕೆ.ಶಿಯವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ಪ್ರಕರಣವನ್ನು ಹಿಂತೆಗೆದುಕೊಳ್ಳುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ್ದಾರೆ. ಯಾರೂ ಒಬ್ಬರ ರಕ್ಷಣೆಗಾಗಿ ಸಚಿವ ಸಂಪುಟವನ್ನು ಕರೆದು ಅವರ ಬಗ್ಗೆ ತೀರ್ಮಾನ ಮಾಡುವುದು ಇದು ಸಚಿವ ಸಂಪುಟಕ್ಕೆ ಅವಮಾನ ಮತ್ತು ಸರ್ಕಾರಕ್ಕೆ ಸಹಾ ಅವಮಾನವಾಗಿದೆ ಎಂದರು.
ಸಚಿವ ಸಂಪುಟದಲ್ಲಿ ಯಾವುದೇ ವಿಷಯ ಚರ್ಚೆಯಾಗ ಬೇಕಾದರೆ ಜಗತ್ತಿಗೆ ತಿಳಿಯುತ್ತದೆ ಆದರೆ ಡಿಕೆಶಿಯವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಡದೇ ಗೌಪ್ಯವಾಗಿ ಡಿಕೆಶಿಯವರ ಪರವಾಗಿ ತೀರ್ಮಾನ ತೆಗೆದುಕೊಂಡು ನ್ಯಾಯಾಲಯಕ್ಕೆ ಅವಮಾನ ಮಾಡಿದ್ದಾರೆ. ಸಚಿವ ಸಂಪುಟ ಸದಸ್ಯರಾಗಿದ್ದು ನ್ಯಾಯಾಲಯದಲ್ಲಿ ಪ್ರಕರಣ ಇದ್ಧಾಗ ಅವರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಇದು ಕಾನೂನಿನ ಉಲ್ಲಂಘನೆಯಾಗುತ್ತದೆ. ಇದು ನ್ಯಾಯಾಂಗಕ್ಕೆ ಮಣ್ಣೆರೆಚುವ ಕಾರ್ಯ ಇದಾಗಿದೆ. ಇದರ ಬಗ್ಗೆ ನ್ಯಾಯಾಲಯ ಛೀಮಾರಿ ಹಾಕುತ್ತದೆ.
ಈ ಹಿಂದೆ ಈ ರೀತಿಯ ಪ್ರಕರಣಗಳಿಗೆ ನ್ಯಾಯಾಲಯ ಛೀಮಾರಿಯನ್ನು ಹಾಕಿದೆ. ಇನ್ನೂಮ್ಮೆ ನ್ಯಾಯಾಲಯದಿಂದ ಛೀಮಾರಿ ಬಂದರೆ ಸಚಿವ ಸಂಪುಟದ ಗೌರವ ಹಾಳಾಗುತ್ತದೆ. ಕ್ಯಾಬಿನೆಟ್‍ಗೆ ಕಪ್ಪು ಚುಕ್ಕೆಯಾಗುತ್ತದೆ. ಡಿಕೆಶಿಯನ್ನು ರಕ್ಷಣೆಗಾಗಿಯೇ ಈ ರೀತಿಯ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಇವರ ಮೇಲೆ ಹೈಕಮಾಂಡ್ ಒತ್ತಡವನ್ನು ತರುವುದರ ಮೂಲಕ ಈ ಕಾರ್ಯವನ್ನು ಮಾಡಿಸಿದ್ದಾರೆ. ಆದರೆ ಆಪವಾದ ಬರುವುದು ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದವರ ಮೇಲೆ ಬರುತ್ತದೆ ಎಂದರು.
ಅಂದಿನ ಅಡ್ವೊಕೇಟ್ ಜನರಲ್‍ರವರು ಡಿಕೆಶಿ ಪ್ರಕರಣವನ್ನು ಸಿಬಿಐಯಿಂದ ತನಿಖೆಯನ್ನು ನಡೆಸಬೇಕೆಂದು ಸೂಚಿಸಿದ್ದರು. ನ್ಯಾಯಾಲಯ ಪ್ರಕರಣವನ್ನು ಮುಂದುವರೆಸುವಂತೆ ಸೂಚನೆ ನೀಡಿದೆ ಆದರೆ ಸಿದ್ದರಾಮಯ್ಯ ಡಿಕೆಶಿಯವರ ಪ್ರಕರಣವನ್ನು ಮುಗಿಸಲು ಹೊರಟ್ಟಿದೆ ಇದು ನ್ಯಾಯಾಲಯ ಕೆಂಗಣ್ಣಿಗೆ ಸರ್ಕಾರ ಗುರಿಯಾಗುತ್ತದೆ ಎಂದ ಆಶೋಕ ರವರು ಸರ್ಕಾರ ಒಂದು ರೀತಿಯಲ್ಲಿ ನಗೆಪಾಟಲಾಗಿದೆ ಎಂದು ವ್ಯಂಗ ಮಾಡಿದರು.
ಸಚಿವ ತಿಮ್ಮಾಪುರ ಮುಂಚೆ ಅವರ ಪಕ್ಷದ ಸಮಸ್ಯೆಯನ್ನು ಪರಿಹಾರ ಮಾಡಲಿ ನಂತರ ನಮ್ಮ ಪಾರ್ಟಿಯ ಬಗ್ಗೆ ಮಾತನಾಡಲಿ, ಪಕ್ಷದ ಮುಖಂಡರು ಅಳೆದು ತೂಗಿ ವಿಜಯೇಂದ್ರರವರು ಆಯ್ಕೆ ಮಾಡಿದ್ದಾರೆ ನಾವು ಅವರು ಸೇರಿ ಮುಂದಿನ ಲೋಕಸಭಾ ಚುಣಾವಣೆಯನ್ನು ಎದುರಿಸಲಾಗುವುದು ಪಕ್ಷದ ಕೆಲ ಮುಖಂಡರಲ್ಲಿ ಅಸಮಾಧಾನ ಇದೆ ಅವರನ್ನು ಸರಿಪಡಿಸುವ ಕಾರ್ಯ ಪಕ್ಷದ ಮುಖಂಡರು ಮಾಡುತ್ತಿದ್ದಾರೆ.
ಸಚಿವ ಜಮೀರ್ ಆಡಿದ ಮಾತಿನ ವಿರುದ್ದ ಹೋರಾಟವನ್ನು ಮಾಡಲಾಗುವುದು ಇದರ ಬಗ್ಗೆ ಅವರಿಗೆ ಶಿಕ್ಷೆಯಾಗಬೇಕಿದೆ. ಹಿಂದುಗಳು ಮುಸ್ಲಿಂರವರಿಗೆ ತಲೆ ಬಾಗಬೇಕು ಎನ್ನುವುದು ಸರಿಯಲ್ಲ ಇದು ಸಂವಿಧಾನ ವಿರೋಧಿಯಾಗಿದೆ. ಎಂದ ಅವರು ಸರ್ಕಾರ ರೈತರಿಗೆ ಮೋಸವನ್ನು ಮಾಡುತ್ತಿದೆ ಎಲ್ಲಾ ಉಚಿತ ಎಂದು ಹೇಳುತ್ತಾ ರೈತರಿಗೆ ಮೋಸ ಮಾಡುತ್ತಿದೆ. ಎಸ್.ಸಿ.ಎಸ್.ಟಿ.ಜನಾಂಗಕ್ಕೆ ಮೋಸ ಮಾಡುತ್ತಿದೆ. ಅವರ ಹಣವನ್ನು ಉಚಿತ ಗ್ಯಾರೆಂಟಿ ಯೋಜನೆಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಸರ್ಕಾರದಲ್ಲಿ ಹಣ ಇಲ್ಲ ಇದು ಪಾಪರ್ ಸರ್ಕಾರವಾಗಿದೆ ಇದರ ಬಗ್ಗೆ ಅಧಿವೇಶನದಲ್ಲಿ ಹೋರಾಟವನ್ನು ಮಾಡಲಾಗುವುದು ಎಂದರು.
ಮಾದಾರ ಚನ್ನಯ್ಯ ಶ್ರೀಗಳ ಆರ್ಶಿವಾದವನ್ನು ಪಡೆಯಲು ಬಂದಿದ್ದೇನೆ ಮಠಕ್ಕೆ 80 ಎಕರೆ ಭೂಮಿಯನ್ನು ನೀಡಿದ್ದೇನೆ. ಈ ಜನಾಂಗಕ್ಕೆ ಇನ್ನಷ್ಟು ಸೌಲಭ್ಯಗಳನ್ನು ಪಡೆಯಲಿ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಗುರುಗಳಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶೀಗಳು ಆರ್. ಆಶೋಕ್‍ರವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜಿ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ ಯಾದವ್, ಗುರುಸಿದ್ದನ ಗೌಡ, ಸೇರಿದಂತೆ ಇತರರು ಉಪಸ್ಥಿತರಿದ್ದರು.