For the best experience, open
https://m.suddione.com
on your mobile browser.
Advertisement

ಹತ್ತಿ ಉರಿಯುತಿದೆ ಸುತ್ತಲೂ ಮತ್ಸರದ ಸುರುಸುರು ಬತ್ತಿ; ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ

10:09 AM Nov 02, 2024 IST | suddionenews
ಹತ್ತಿ ಉರಿಯುತಿದೆ ಸುತ್ತಲೂ ಮತ್ಸರದ ಸುರುಸುರು ಬತ್ತಿ  ಡಾ  ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ
Advertisement

ಚಿತ್ರದುರ್ಗ: ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಪರಸ್ಪರ ಶುಭಾಶಯಗಳು ವಿನಿಮಯವಾಗುತ್ತಿವೆ. ಬೆಳಕಿನ ಹಬ್ಬ ಎಲ್ಲರ ಬಾಳಲ್ಲೂ ನವೋಲ್ಲಾಸ ತುಂಬಿ ಬಾಳು ಬೆಳಗಲಿ.

Advertisement

ಪ್ರತಿ ವರ್ಷದಂತೆ ಈ ವರ್ಷವೂ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಭಕ್ತರಿಗೆ ದೀಪಾವಳಿಯ ಶುಭಾಶಂಸನೆಗಳನ್ನು ಮತ್ಸರದ ಬತ್ತಿ ಕವಿತೆ ಮೂಲಕ ತಿಳಿಸಿದ್ದಾರೆ.

'ದೀಪ ಹಚ್ಚು, ದೀಪ ಆರಿಸು' ಎಂಬ ಶಬ್ದಗಳನ್ನು ದಿನನಿತ್ಯದ ಮಾತುಗಳಲ್ಲಿ ಬಳಸುತ್ತಿರುತ್ತೇವೆ. ಉಪಕಾರ ಮಾಡಿದ ವ್ಯಕ್ತಿಯನ್ನು ಕುರಿತು 'ಅವರ ಹೆಸರು ಹೇಳಿ ದೀಪ ಹಚ್ಚುತ್ತೇನೆ' ಎಂದು ಸ್ಮರಣೆ ಮಾಡಿದರೆ ಮನೆಮುರುಕನನ್ನು ಕುರಿತು 'ಅವನು ಎಷ್ಟು ಮನೆ ದೀಪವನ್ನು ಆರಿಸಿದ್ದಾನೋ ಗೊತ್ತಿಲ್ಲ' ಎಂದು ಮೂದಲಿಸುತ್ತಾರೆ.

Advertisement

ಬೆಳಕು ಜ್ಞಾನದ ಸಂಕೇತ; ಕತ್ತಲು ಅಜ್ಞಾನದ ಸಂಕೇತ. ಶತಮಾನಗಳಿಂದ ಗಿಳಿಪಾಠ ಹೇಳಿದ್ದೇ ಹೇಳಿದ್ದು. ನಮ್ಮ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಿದೆಯೇ? ನಮ್ಮ ಬದುಕು ಕತ್ತಲಿನಿಂದ ಬೆಳಕಿನೆಡೆಗೆ ಸಾಗಿದೆಯೇ? ಕತ್ತಲಲ್ಲಿ ದೀಪ ಹಚ್ಚಿ ಆತ್ಮಾನುಸಂಧಾನ ಮಾಡುವ ಬದಲು ಪಟಾಕಿ ಹೊಡೆದು ಗಲಾಟೆ ಗದ್ದಲವೆಬ್ಬಿಸುವುದು ಇಂದಿನ ದೀಪಾವಳಿಯ ವಿಕೃತರೂಪವಾಗಿದೆ.

ಇಂದು ಕಾಣುತ್ತಿರುವುದು ದೀಪಗಳ ಆವಳಿಯಲ್ಲ ಪಟಾಕಿಗಳ ಹಾವಳಿ! ಇಂತಹ ಹಬ್ಬಗಳಂದು ಪುರಾಣಕಾಲದಲ್ಲಿದ್ದ ನರಕಾಸುರ, ತಾರಕಾಸುರ, ರಾವಣ ಇತ್ಯಾದಿ ರಾಕ್ಷಸರ ವಧೆಯಾಯಿತೆಂದು ತಿಳಿಯದೆ ಅವರೆಲ್ಲರೂ ನಮ್ಮೊಳಗೇ ಇನ್ನೂ ಜೀವಂತವಾಗಿದ್ದಾರೆಂದು ಭಾವಿಸಿ ನಮ್ಮೊಳಗಿರುವ ರಾಕ್ಷಸೀ ಗುಣಗಳನ್ನು ನಿರ್ಮೂಲನಗೊಳಿಸುವ ಪ್ರಯತ್ನ ಮಾಡಿದರೆ ಈ ಹಬ್ಬಗಳು ಸಾರ್ಥಕವಾದವು!
ಈ ಹಿನ್ನೆಲೆಯಲ್ಲಿ ಬಹಳ ಹಿಂದೆ ಬರೆದ ನಮ್ಮ ಕವಿತೆ: ಮತ್ಸರದ ಬತ್ತಿಯ ಸಾಲು ಮುಂದಿನಂತೆ.

ಹತ್ತಿ ಉರಿಯುತಿದೆ ಸುತ್ತಲೂ ಮತ್ಸರದ ಸುರುಸುರು ಬತ್ತಿ
ಹಚ್ಚಲಾದೀತೇ ಅದರಿಂದ ಮತ್ತೊಂದು ಹಣತೆಯ ಬತ್ತಿ!
ಹಣತೆ ಹಣತೆಯ ಕೂಡಿದರೆ ಕಂಗೊಳಿಸುವುದು ಜ್ಯೋತಿ

ಹಣತೆ ಬಿರುಸಿನ ಕುಡಿಕೆಯ ಕೂಡಿದರೆ ಉಗುಳುವುದು ಬೆಂಕಿ
ಯಾರ ಬದುಕಿನ ಅಂಗಳದಲ್ಲಿ ಯಾರು ಇಡುವರೋ ಬತ್ತಿ
ಅದು ಸಿಡಿದಾಗಲೇ ಗೊತ್ತು ಬತ್ತಿ ಇಟ್ಟವನ ಯುಕ್ತಿ!

ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!

-ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಸಿರಿಗೆರೆ

Tags :
Advertisement