ವಿಜೃಂಭಣೆಯಿಂದ ನೆರವೇರಿದ ತೇರು ಮಲ್ಲೇಶ್ವರ ಸ್ವಾಮಿ ರಥೋತ್ಸವ : 18 ಲಕ್ಷಕ್ಕೆ ಹರಾಜಾಯ್ತು ಬಾವುಟ...!
ಸುದ್ದಿಒನ್, ಹಿರಿಯೂರು, ಫೆಬ್ರವರಿ. 24 : ಕರ್ನಾಟಕದ ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ನಗರದ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ರಥೋತ್ವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದೇವರ ಭಕ್ತಿಗೆ ಪಾತ್ರರಾದರು. ಬೆಳಿಗ್ಗೆ 9ಗಂಟೆಗೆ ದೇವಸ್ಥಾನದಲ್ಲಿದ್ದ ಶಿವಧನಸ್ಸನ್ನು ಹೊರತೆಗೆದು ಸಮೀಪದ ವೇದಾವತಿ ನದಿಗೆ ತೆಗೆದುಕೊಂಡು ಹೋಗಿ, ಅಭಿಷೇಕ ಮಾಡಿ ದೇವಾಲಯಕ್ಕೆ ತರಲಾಯಿತು. ಅನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲಂಕಾರಗೊಂಡಿದ್ದ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ಮುಜರಾಯಿ ಅಧಿಕಾರಿ ಹಾಗೂ ತಹಶಿಲ್ದಾರ್ ಸಿ. ರಾಜೇಶ್ ಕುಮಾರ್ ಪೂಜೆ ಸಲ್ಲಿಸಿದರು.
ನೂರಾರು ಭಕ್ತಾದಿಗಳು ಹರ ಹರ ಮಹಾದೇವ ಎಂದು ದೇವರನ್ನು ಸ್ಮರಿಸುತ್ತಾ ರಥದ ಹಗ್ಗವನ್ನು ಹಿಡಿದು ಎಳೆಯವ ಮೂಲಕ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡ ಬ್ರಹ್ಮ ರಥೋತ್ಸವ ಕರಡಿ ಚಮಳ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ವಾಸವಿ ರಸ್ತೆಯ ಮೂಲಕ ಸಿದ್ದನಾಯಕ ಸರ್ಕಲ್‌ವರೆಗೂ ಸಾವಿರಾರು ಭಕ್ತಾಗಳು ಉತ್ಸವದಿಂದ ರಥವನ್ನು ಎಳೆದರು.
ರಥೋತ್ಸವ ಪ್ರಯುಕ್ತ ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಂಬೂಬಜಾರ್ ರಸ್ತೆ, ಟಿ.ಟಿ.ರಸ್ತೆ, ದುರ್ಗಾಂಬಿಕಾ ರಸ್ತೆ, ಆಸ್ಪತ್ರೆ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಾಹನ ಸಂಚಾರ ವ್ಯವಸ್ಥೆ ಕಡಿತಗೊಳಿಸಿದ್ದು, ಬ್ಯಾರೀಕೇಡ್ ಅಳವಡಿಸಿ ಭಕ್ತಾದಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಥ ಎಳೆಯುವ ಸಮಯದಲ್ಲಿ ಬಿಗಿ ಪೋಲಿಸ್ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಸತತ 7ನೇ ಬಾರಿಗೆ ಬ್ರಹ್ಮರಥೋತ್ಸಕ್ಕೆ ಚಾಲನೆ ನೀಡುವ ಮೊದಲು ನಡೆಯುವ ಮುಕ್ತಿ ಭಾವುಟ ಹರಾಜು ಜನರಲ್ಲಿ ಕುತೂಹಲ ಕೆರಳಿಸಿತು. ಒಂದು ಲಕ್ಷಕ್ಕೆ ಜಗದೀಶ್ ಭಂಡಾರಿ ಅವರಿಂದ ಆರಂಭವಾದ ಹರಾಜು ಪ್ರಕ್ರಿಯೆಯು ಹಂತಹತವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೇ ನೇರ ಪೈಪೋಟಿ ಏರ್ಪಟ್ಟಿತ್ತು, ಅಂತಿಮವಾಗಿ ರೂ 18 ಲಕ್ಷಕ್ಕೆ ಕೂಗುವ ಮೂಲಕ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಾಲಾಯಿತು. ಕಳೆದ ಬಾರಿಯೂ ರೂ.10ಲಕ್ಷಗಳಿಗೆ ಇವರೇ ಕೂಗಿದ್ದರು. ಈ ಭಾವುಟ ಪಡೆದರೆ ಉತ್ತಮ ಆರೋಗ್ಯ, ಸಂಪತ್ತು, ವ್ಯಾಪಾರ ವಹಿವಾಟು ವೃದ್ದಿಯಾಗುತ್ತದೆ ಎಂಬ ನಂಬಿಕೆಯು ಇದೆ. ಆದ್ದರಿಂದ ಅನೇಕ ಜನರು ಭಾವುಟ ಪಡೆಯಲು ಪೈಪೋಟಿ ನಡೆಸುತ್ತಾರೆ. ಈ ಬಾರಿ ಚುನಾವಣೆ ಕಾವು ಇರುವುದರಿಂದ ಭಾರೀ ಕುತೂಹಲ ಮೂಡಿಸಿದ್ದರೂ, ಇಬ್ಬರ ನಡುವೆ ಮಾತ್ರ ಪೈಪೋಟಿ ಏರ್ಪಟ್ಟಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಮೊತ್ತಕ್ಕೆ ಕೂಗುವ ಮೂಲಕ ಜನತೆಯಲ್ಲಿ ಉತ್ಸಾಹ ಹೆಚ್ಚಿಸಿತ್ತು.