ಅನಿತಾ ಕೌಲ್ ರಾಜ್ಯ ಪ್ರಶಸ್ತಿಗೆ ಶಿಕ್ಷಕ ನಾಗಭೂಷಣ್ ಆಯ್ಕೆ
ಸುದ್ದಿಒನ್, ಚಳ್ಳಕೆರೆ,ಜನವರಿ.05 : ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಶಾಲೆಯ ವಿಜ್ಞಾನ ಶಿಕ್ಷಕ ನಾಗಭೂಷಣ್ ಇವರ ಸೃಜನಾತ್ಮಕ ಬೋಧನೆ ಹಾಗೂ ಶಿಕ್ಷಣದ ಬದ್ಧತೆಯ ಸೇವೆಯನ್ನು ಪರಿಗಣಿಸಿ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ವತಿಯಿಂದ ಈ ವರ್ಷದ ರಾಜ್ಯ ಮಟ್ಟದ ಅನಿತಾ ಕೌಲ್ ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ.
ಜನವರಿ 7 ರಂದು ಬೆಳಗ್ಗೆ 11 ಗಂಟೆಗೆ ಡಾ.ಹೆಚ್ಚೆನ್ ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಅನಿತಾ ಕೌಲ್ ಇವರು ಭಾರತೀಯ ಆಡಳಿತ ಸೇವೆಗೆ ಸೇರಿದ ಪ್ರಾರಂಭದಿಂದಲೂ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಪೂರಕವಾಗಿ ಮತ್ತು ಸಂಪೂರ್ಣವಾಗಿ ತೊಡಗಿಸಿಕೊಂಡು ದುಡಿದವರು, ಅಷ್ಟೇ ಅಲ್ಲದೆ ಸಾಕ್ಷರತಾ ಆಂದೋಲನದ ಪ್ರಾರಂಭದ ದಿನಗಳಲ್ಲಿ ನವದೆಹಲಿಯಲ್ಲಿ ಸಾಕ್ಷರತಾ ಆಂದೋಲನವನ್ನು ಜನಾಂದೋಲನವನ್ನಾಗಿ ರೂಪಿಸಲು ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರದಲ್ಲಿ ಹಗಲಿರುಳೂ ಶ್ರಮಿಸಿ ಸಮಾಜ ಸೇವೆಗೈದ ಇವರು 2016 ರಂದು ನಿಧನ ಹೊಂದಿದರು.
ಇವರ ಸ್ಮರಣಾರ್ಥ ಅನಿತಾ ಕೌಲ್ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ಡಾ.C.R ಚಂದ್ರಶೇಖರ್,ಕಾರ್ಯದರ್ಶಿ ಈ.ಬಸವರಾಜ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ ನಾಗಭೂಷಣ್ ಇವರನ್ನು ಜಿಲ್ಲೆಯ ಉಪನಿರ್ದೇಶರಾದ ರವಿಶಂಕರ್ ರೆಡ್ಡಿ, ಚಳ್ಳಕೆರೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್,ಮುಖ್ಯ ಶಿಕ್ಷಕ ವೆಂಕಟೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ಜಯಣ್ಣ, ಶಾಲಾ ಸಿಬ್ಬಂದಿ ಹಾಗೂ ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.