For the best experience, open
https://m.suddione.com
on your mobile browser.
Advertisement

ಕುಂಚಿಗ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ಪ್ರತಿಭಾವಂತರನ್ನು ಸನ್ಮಾನಿಸಿದರೆ ಇತರರಿಗೆ ಪ್ರೇರಣೆ : ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ

03:56 PM Aug 24, 2024 IST | suddionenews
ಕುಂಚಿಗ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ    ಪ್ರತಿಭಾವಂತರನ್ನು ಸನ್ಮಾನಿಸಿದರೆ ಇತರರಿಗೆ ಪ್ರೇರಣೆ   ಹಿರಿಯ ಪತ್ರಕರ್ತ ಜಿ ಎಸ್ ಉಜ್ಜಿನಪ್ಪ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.23  : ನಮ್ಮ ಸಮಾಜ ಬಲಿಷ್ಟವಾಗಿ ಬೆಳೆಯಬೇಕಾದರೆ ದಾನಿಗಳು ಮುಂದೆ ಬರಬೇಕೆಂದು ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ ಮನವಿ ಮಾಡಿದರು.

Advertisement

2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕುಂಚಿಗ ವೀರಶೈವ ಲಿಂಗಾಯತ ಸಮಾಜದಿಂದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಳೆದ ಹನ್ನೆರಡು ಹದಿಮೂರು ವರ್ಷಗಳಿಂದಲೂ ಕುಂಚಿಗ ವೀರಶೈವ ಲಿಂಗಾಯತ ಸಮಾಜ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ನಮ್ಮ ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸುತ್ತಿದೆ. ಇದಕ್ಕೆ ಜನಾಂಗದ ಎಲ್ಲರೂ ಕೈಜೋಡಿಸುತ್ತ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಸಮಾರಂಭ ಮಾಡಬೇಕಾಗಿರುವುದರಿಂದ ಉಳ್ಳವರು ಧಾರಳವಾಗಿ ಸಮಾಜಕ್ಕೆ ನೆರವು ನೀಡಬೇಕೆಂದು ತಿಳಿಸಿದರು.

ಕುಂಚಿಗ ವೀರಶೈವ ಲಿಂಗಾಯತ ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬಲವಾಗಬೇಕಾಗಿದೆ. ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣವಂತರನ್ನಾಗಿಸುವ ಜವಾಬ್ದಾರಿ ಪೋಷಕರುಗಳ ಮೇಲಿದೆ ಎಂದು ಹೇಳಿದರು.

ಹೊಳಲ್ಕೆರೆ ಮಾಜಿ ಶಾಸಕ ಪಿ.ರಮೇಶ್ ಮಾತನಾಡಿ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕು. ಇದುವರೆವಿಗೂ ನಮಗೆ ಸ್ವಾಮೀಜಿಗಳು ಯಾರು ಎನ್ನುವ ಗೊಂದಲವಿದೆ. ಕೀಳರಿಮೆ ಬಿಟ್ಟು ಸಮಾಜಕ್ಕೆ ಏನು ಮಾಡಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಿ. ಆರ್ಥಿಕವಾಗಿ ಕುಂಚಿಗ ವೀರಶೈವ ಲಿಂಗಾಯತ ಸಮಾಜ ಬಲವಾಗಬೇಕಿದೆ. ಮುಂದಿನ ವರ್ಷದಿಂದ ಇಂತಹ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಬೇಕಾಗಿರುವುದರಿಂದ ದಾನಿಗಳು ದೊಡ್ಡ ಮನಸ್ಸು ಮಾಡಿ ಆರ್ಥಿಕ ನೆರವು ನೀಡಬೇಕು. ಇದರಿಂದ ಸಮಾಜಮುಖಿಯಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡುತ್ತ ಎಲ್ಲರೂ ಒಂದೆ ಎಂಬ ಭಾವನೆ ಮೂಡಬೇಕಾಗಿರುವುದರಿಂದ ಕುಂಚಿಗ ವೀರಶೈವ ಲಿಂಗಾಯತರು ಮೊದಲು ಸಂಘಟಿತರಾಗಬೇಕು. ಅದಕ್ಕಾಗಿ ಪರಸ್ಪರ ಸಹಕಾರ ಮುಖ್ಯ. ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಿದರೆ ಇತರೆಯವರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಡರ್ಮಾಲಜಿಸ್ಟ್ ಡಾ.ಯೋಗೇಂದ್ರ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಸಮಾಜದಿಂದ ಸನ್ಮಾನ ಮಾಡಿರುವುದು ಇನ್ನು ಹೆಚ್ಚಿನ ಸೇವೆಗೆ ಸ್ಪೂರ್ತಿ ನೀಡಿದಂತಾಗಿದೆ. ಚಿತ್ರದುರ್ಗದಲ್ಲಿ ನ.8, 9, 10 ರಂದು ಚರ್ಮ ರೋಗ ವೈದ್ಯರ ಸಮ್ಮೇಳನ ನಡೆಸುವ ಕುರಿತು ಚಿಂತನೆಯಿದ್ದು, ಐದು ನೂರರಿಂದ ಆರುನೂರು ವೈದ್ಯರುಗಳು ಭಾಗವಹಿಸುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ಚರ್ಮ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಿ. ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದರು.

ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿ ಹೆಚ್.ಕುಬೇರಪ್ಪ ದಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಹದಿಮೂರು ವರ್ಷಗಳಿಂದಲೂ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಪ್ರತ್ಯೇಕ ಕಚೇರಿ ಕಟ್ಟಡವಿದೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವು ನೀಡಿದರೆ ಇನ್ನು ದೊಡ್ಡ ಕಟ್ಟಡ ನಿರ್ಮಿಸೋಣ ಎಂದು ಹೇಳಿದರು.

ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಸಹ ಕಾರ್ಯದರ್ಶಿ ನಿವೃತ್ತ ಡಿ.ವೈ.ಎಸ್ಪಿ. ಎಸ್.ಪಿ.ಬಸವರಾಜ್, ಕೃಷ್ಣಮೂರ್ತಿ ಜಿ. ಡಾ. ಅರವಿಂದ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಬಿ.ರಾಜಶೇಖರಪ್ಪ ವೇದಿಕೆಯಲ್ಲಿದ್ದರು.
ನಿರ್ದೇಶಕರಾದ ಜಿ.ಆರ್.ರಾಜಪ್ಪ, ಪಿ.ಶಿವಪ್ರಕಾಶ, ಬಿ.ಟಿ.ವಿಶ್ವನಾಥ, ಲವಕುಮಾರ್, ಓಂಕಾರಪ್ಪ, ಯೋಗೇಂದ್ರಪ್ಪ, ಸ್ವಾಮಿ, ನಿವೃತ್ತ ಉಪನ್ಯಾಸಕ ಹರೀಶ್, ಸಿದ್ದಪ್ಪ
ಎಂ.ತಿಪ್ಪೇರುದ್ರಪ್ಪ ಸೇರಿದಂತೆ ಸಮಾಜದ ಅನೇಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ.ಅರವಿಂದ ಪಾಟೀಲ್‍ರನ್ನು ಸನ್ಮಾನಿಸಲಾಯಿತು.

Tags :
Advertisement