Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಗಳ ಬಗ್ಗೆ ದೈನಂದಿನ ವರದಿ ಆಧರಿಸಿ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ‌ ಟಿ.ವೆಂಕಟೇಶ್ ಸೂಚನೆ

07:56 PM Apr 06, 2024 IST | suddionenews
Advertisement

ಚಿತ್ರದುರ್ಗ. ಏ.06:  ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಗಳ ಬಗ್ಗೆ ದೈನಂದಿನ ವರದಿ ಆಧರಿಸಿ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪಶು, ಕೃಷಿ ಇಲಾಖೆ ಹಾಗೂ ಕುಡಿಯುವ ನೀರಿನ ನಿರ್ವಹಣೆಗೆ ನೇಮಿಸಿರುವ ತಾಲ್ಲೂಕು ನೋಡಲ್ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಳ್ಳಿಗಳಲ್ಲಿ ಸಾರ್ವಜನಿಕರು ಮತದಾನ ಬಹಿಷ್ಕರಿಸುವ ವಿಚಾರ ಮುಂದುಮಾಡಿ, ಪ್ರತಿಭಟನೆ ನಡೆಸುತ್ತಿರುವ ಘಟನೆಗಳ ಬಗ್ಗೆ, ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ. ಇದು ಉತ್ತಮ ಲಕ್ಷಣವಲ್ಲ. ಅಧಿಕಾರಿಗಳು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ, ಸಾರ್ವಜನಿಕರಿಗೆ ತಿಳಿ ಹೇಳಬೇಕು. ಅಗತ್ಯ ಇರುವ ಕಡೆ ಬೋರೆವೆಲ್ ಕೊರಿಸಿ ನೀರು ಸರಬರಾಜು ಕ್ರಮಕೈಗೊಳ್ಳಿ ಎಂದರು.

Advertisement

ವಾಣಿಜ್ಯ ಬಳಕೆಗಾಗಿ ಖಾಸಗಿ ಬೋರವೆಲ್ ನೀರು ಸರಬರಾಜು  ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗುವುದು. ಸರ್ಕಾರ ನಿಗಧಿ ಮಾಡಿದ ದರದಲ್ಲಿ ಖಾಸಗಿ ಬೊರ್‌‌ವೆಲ್‌ಗಳಿಂದಲೂ ನೀರು ಪಡೆದು ಸಾರ್ವಜನಿಕರಿಗೆ ವಿತರಣೆ ಮಾಡಬೇಕು. ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳಿಗೆ ತಪ್ಪದೇ ಜಿಪಿಎಸ್ ಅಳವಡಿಸಬೇಕು.ಟ್ರಿಪ್‌ಗಳ ವಿವರಗಳನ್ನು ತಂತ್ರಾಂಶದಲ್ಲಿ ಅವಳವಡಿಸಬೇಕು. ಟ್ಯಾಂಕರ್ ಪಡೆದುಕೊಳ್ಳಲು ಟೆಂಡರ್ ಪ್ರಕ್ರಿಯೆ  ಪೂರ್ಣಗೊಂಡಿರುವ ತಾಲ್ಲೂಕುಗಳಲ್ಲಿ ತಕ್ಷಣವೇ ಟೆಂಡರ್ ಕರೆದು ಟ್ಯಾಂಕರ್ ಬಾಡಿಗೆ ಪಡೆಯಬೇಕು. ತಾಲ್ಲೂಕು ಹಂತದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಿ ನಡಾವಳಿಗಳನ್ನು ಜಿಲ್ಲಾ ಹಂತಕ್ಕೆ ಕಳುಹಿಸಿ ಕೊಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.

1,33,318 ಮೆಟ್ರಿಕ್ ಟನ್ ಮೇವು ಲಭ್ಯ :

ಜಿಲ್ಲೆಯಲ್ಲಿ 1,33,318 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಪ್ರತಿದಿನ 2033 ಟನ್ ಮೇವಿನ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ 3,38,907 ಜಾನುವಾರು(ದನಕರುಗಳು) ಇದ್ದು, 65 ದಿನಗಳ ಕಾಲ ಮೇವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.

ದನಕರಗಳ ಸಂಖ್ಯೆ ಅವುಗಳಿಗೆ ಬೇಕಾದ ಮೇವಿನ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ಪಶು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಯಾರಿಸಬೇಕು. ಗೋಶಾಲೆಗಳಲ್ಲಿ ಪ್ರತಿದಿನ ಖರ್ಚಾಗುವ ಮೇವಿನ ಬಗ್ಗೆ ವರದಿ ನೀಡಬೇಕು. ಜಿಲ್ಲೆಯಲ್ಲಿ ವಿತರಿಸಲಾಗಿರುವ ಮೇವಿನ ಕಿಟ್, ಅವುಗಳಿಂದ ಉತ್ಪಾದನೆಯಾದ ಮೇವಿನ ಪ್ರಮಾಣ ಹಾಗೂ ಬಳಕೆ ಬಗ್ಗೆ ನಿಖರ ಮಾಹಿತಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಟಿ‌.ವೆಂಕಟೇಶ್ ಹೇಳಿದರು.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 21,000 ಮೇವಿನ ಕಿಟ್ ವಿತರಿಸಲಾಗಿದೆ. ಎರಡನೇ ಹಂತದಲ್ಲಿ 15,300 ಮೇವಿನ ಕಿಟ್‌ಗಳು ಬಂದಿದ್ದು, ಶೀಘ್ರವೇ ವಿತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಉಪನಿರ್ದೇಶಕಿ ಇಂದಿರಾಬಾಯಿ ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್,  ಡಿಡಿಎಲ್ಆರ್ ರಾಮಾಂಜನೇಯ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಬಿ.ಬೀರಲದಿನ್ನಿ, ಗ್ರಾಮೀಣ ಕುಡಿಯುವ ನೀರು ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement
Tags :
bengaluruchitradurgadaily reportDistrict CollectorDrinking waterfodder problemssuddionesuddione newsT. venkateshTake actionಕುಡಿಯುವ ನೀರುಕ್ರಮ ಕೈಗೊಳ್ಳಿಚಿತ್ರದುರ್ಗಜಿಲ್ಲಾಧಿಕಾರಿ ಟಿ. ವೆಂಕಟೇಶ್ದೈನಂದಿನ ವರದಿಬೆಂಗಳೂರುಮೇವಿನ ಸಮಸ್ಯೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article