ಗೋವಿಂದ ಕಾರಜೋಳರನ್ನು ಬೆಂಬಲಿಸಿ : ಮಾಜಿ ಶಾಸಕ ರಾಮಯ್ಯ ಮನವಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ದೇಶದ ಭವಿಷ್ಯದ ಬಗ್ಗೆ ದೂರದೃಷ್ಟಿಯಿಟ್ಟುಕೊಂಡಿರುವ ನರೇಂದ್ರಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಬೇಕಾಗಿರುವುದರಿಂದ ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬೆಂಬಲಿಸುವಂತೆ ಮಾಜಿ ಶಾಸಕ ರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಜನತೆಗೆ ಕೊಟ್ಟಿರುವ ಐದು ಗ್ಯಾರೆಂಟಿಗಳು ಶಾಶ್ವತವಲ್ಲ. ದೇಶಕ್ಕಾಗಿ ಮೋದಿ ಗ್ಯಾರೆಂಟಿ. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ನರೇಂದ್ರಮೋದಿಯಿಂದ ಯಾರಿಗೂ ತೊಂದರೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಮಾದಿಗರನ್ನು ಕಡೆಗಣಿಸಿದೆ. ಆದ್ದರಿಂದ ಬಿಜೆಪಿ.ಯನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆಂದು ಹೇಳಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ ಹಿರಿಯ ಅನುಭವಿ ರಾಜಕಾರಣಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರಿಗೆ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಬೆಂಬಲವಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಜಾಸ್ತಿಯಿದ್ದಾರೆ. ಮೀಸಲಾತಿ ವರ್ಗಿಕರಣದಿಂದ ಮಾದಿಗ ಸಮಾಜಕ್ಕೆ ಕಾಂಗ್ರೆಸ್ ವಂಚಿಸಿದೆ. ಮೂವತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಮೀಸಲಾತಿಯನ್ನು ಹದಿನೈದರಿಂದ ಹದಿನೇಳಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರು.
ಸಿದ್ದರಾಮಯ್ಯ ಗೊಂದಲ ಸೃಷ್ಠಸಿದರೆ ವಿನಃ ಅನುಕೂಲವೇನು ಆಗಲಿಲ್ಲ. ಅದಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ.ಯ ಗೋವಿಂದ ಕಾರಜೋಳರಿಗೆ ನಮ್ಮ ಮತ ಎಂದರು.
ಪರಿಶಿಷ್ಟ ಜಾತಿಯ ಐದು ಕ್ಷೇತ್ರಗಳಲ್ಲಿ ಮಾದಿಗರಿಗೆ ಎಲ್ಲಿಯೂ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮಾದಿಗರ ಮತಗಳಿವೆ. ಮುದೋಳದಲ್ಲಿ ಆರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಾಕಷ್ಟು ಅಭಿವೃದ್ದಿಪಡಿಸಿರುವ ಗೋವಿಂದ ಕಾರಜೋಳರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸಿದರೆ ಮಂತ್ರಿಗಳಾಗಿ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ದಿಪಡಿಸುತ್ತಾರೆಂಬ ವಿಶ್ವಾಸವಿದೆ. ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬುದು ನಮ್ಮ ಆಸೆ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗದೀಶ್, ಪುರುಷೋತ್ತಮ ಪತ್ರಿಕಾಗೋಷ್ಠಿಯಲ್ಲಿದ್ದರು.