ಸಂಪನ್ನ, ಸರಳ, ಸಜ್ಜನಿಕೆಯ ರಾಜಕಾರಣಿ ಬಿ.ಎನ್.ಚಂದ್ರಪ್ಪನವರನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲ್ಲಿಸಿ : ಮಾಜಿ ಸಚಿವ ಹೆಚ್.ಆಂಜನೇಯ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.02 : ಮಲತಾಯಿ ಧೋರಣೆ ಮೂಲಕ ರಾಜ್ಯಕ್ಕೆ ಅನ್ಯಾಯವೆಸಗುತ್ತಿರುವ ಕೇಂದ್ರದ ಕೋಮುವಾದಿ ಬಿಜೆಪಿ ಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಿಂದ ಓಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ್ಯಕರ್ತರು ಹಾಗೂ ಮುಖಂಡುಗಳಲ್ಲಿ ಮನವಿ ಮಾಡಿದರು.
ಉಮಾಪತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಮುಖಂಡರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇದೆ ತಿಂಗಳ 26 ರಂದು ನಡೆಯುವ ಲೋಕಸಭೆ ಚುನಾವಣೆ ಪ್ರತಿಷ್ಟೆಯ ಚುನಾವಣೆಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಕೇಂದ್ರ ಬಿಜೆಪಿ. ಸರ್ಕಾರ ಕಳೆದ ಹತ್ತು ವರ್ಷಗಳಿಂದಲೂ ಅನ್ಯಾಯ ಮಾಡಿಕೊಂಡು ಬರುತ್ತಿದೆ. 2019 ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಿಂದ ಗೆದ್ದು ಹೋಗಿರುವ ಯಾವೊಬ್ಬ ಬಿಜೆಪಿ. ಸಂಸದರೂ ಪಾರ್ಲಿಮೆಂಟ್‍ನಲ್ಲಿ ರಾಜ್ಯದ ಅಭಿವೃದ್ದಿ ಕುರಿತು ಮಾತನಾಡಿಲ್ಲ. ಭದ್ರಾಮೇಲ್ದಂಡೆ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ ಇದುವರೆವಿಗೂ ನಯಾ ಪೈಸೆಯನ್ನು ಬಿಡುಗಡೆಗೊಳಿಸಿಲ್ಲ. ಎಸ್ಸಿ. ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದವರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಈ ಸಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಾಗಿರುವುದರಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸುವಂತೆ ವಿನಂತಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಎಲ್ಲಾ ಜಾತಿ ಧರ್ಮದವರನ್ನೊಳಗೊಂಡಿರುವ ದೇಶ ನಮ್ಮದು. ಜಾತಿ ಧರ್ಮಗಳ ವಿರುದ್ದ ವಿಷ ಬೀಜ ಬಿತ್ತುತ್ತಿರುವ ಪ್ರಧಾನಿ ಮೋದಿ ಹಾಗೂ ಬಿಜೆಪಿ.ಯ ಯಾವೊಬ್ಬ ಕಾರ್ಯಕರ್ತನಿಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆಯಿಲ್ಲ. ವಿಧಾನಸಭೆ ಚುನಾವಣೆ ಮುನ್ನ ಸಿದ್ದರಾಮಯ್ಯನವರು ಘೋಷಿಸಿದ ಐದು ಗ್ಯಾರೆಂಟಿಗಳನ್ನು ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಕೂಡಲೆ ಈಡೇರಿಸಿದ್ದಾರೆ. ಕಾಯಕರ್ತರು ಪ್ರತಿ ಬೂತ್‍ನಲ್ಲಿ ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಜನತೆಗೆ ತಿಳಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಬೇಕೆಂದು ಕೋರಿದರು.
ಜಾತಿ ಧರ್ಮದ ಬಗ್ಗೆ ನಾವುಗಳು ಮಾತನಾಡುವ ಅವಶ್ಯಕತೆಯಿಲ್ಲ. ಕಾಂಗ್ರೆಸ್ ಎಲ್ಲಾ ಜಾತಿ ಧರ್ಮದವರಿಗೂ ಸೌಲಭ್ಯ ನೀಡಿದೆ. ಪಕ್ಷದ ಸಾಧನೆ ಮೇಲೆ ಮತ ಕೇಳೋಣ. ಎಲ್ಲಾ ಕಾರ್ಯಕರ್ತರ ಹಾಗೂ ಮುಖಂಡರುಗಳ ಹೃದಯ ಗೆದ್ದಿರುವ ಸಂಪನ್ನ ಸರಳ ಸಜ್ಜನಿಕೆಯ ರಾಜಕಾರಣಿ ಬಿ.ಎನ್.ಚಂದ್ರಪ್ಪನವರನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲ್ಲಿಸಲೇಬೇಕಾಗಿರುವುದರಿಂದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ ಪ್ರಧಾನಿ ಮೋದಿ ಪೇಪರ್ ಟೈಗರ್ ಆಗುತ್ತಿದ್ದಾರೆ. ಆದರೂ ಅವರ ಟೀಕೆಗಳಿಗೆ ಕಾಂಗ್ರೆಸ್‍ನಲ್ಲಿ ಉತ್ತರ ಕೊಡಲು ಯಾರು ಸಿದ್ದರಿಲ್ಲ. ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರೆಂಟಿಗಳನ್ನು ಪ್ರತಿ ಮನೆ ಮನೆಗೆ ತಿಳಿಸುವ ಜವಾಬ್ದಾರಿ ಕಾರ್ಯಕರ್ತರುಗಳ ಮೇಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳು ಗೆದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಭಾರತ ದೇಶ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಎಸ್ಸಿ. ಎಸ್ಟಿ.ಗಳ ಮೇಲೆ ನಿಂತಿದೆ. ಅದಾನಿ ಅಂಬಾನಿ ಮೇಲಲ್ಲ. ಧರ್ಮ ಜಾತಿಗಳ ಮಧ್ಯೆ ಸಂಘರ್ಷ ಉಂಟು ಮಾಡುತ್ತಿರುವ ಬಿಜೆಪಿ. ಈ ಸಾರಿಯೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯಲ್ಲ. ಮನುವಾದ ಬರುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆನ್ನುವುದನ್ನು ಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಕಾರ್ಯಕರ್ತರು ಮುಖಂಡರುಗಳು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಬೇಕಿದೆ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ 2014 ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಿದಾಗ ಮತದಾರರು ನನ್ನ ಮೇಲೆ ವಿಶ್ವಾಸ ನಂಬಿಕೆಯಿಟ್ಟು ಒಂದು ಲಕ್ಷ ಎರಡು ಸಾವಿರ ಮತಗಳ ಅಂತದಿಂದ ಗೆಲ್ಲಿಸಿದ್ದೀರಿ. ಐದು ವರ್ಷಗಳ ಕಾಲ ಎಲ್ಲಿಯೂ ನಿಮಗೆ ಅಪಮಾನವಾಗುವಂತೆ ನಡೆದುಕೊಂಡಿಲ್ಲ. 2019 ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಸೋತಾಗ ಕ್ಷೇತ್ರದ ಮತದಾರರಿಗೆ ಬೆನ್ನು ತೋರಿಸಿ ಓಡಿ ಹೋಗಲಿಲ್ಲ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ಮನೆ ಮಗನಂತೆ ಕೆಲಸ ಮಾಡಿದ್ದೇನೆ. ಸುಮಾರು 26 ಆಕಾಂಕ್ಷಿಗಳಿದ್ದರೂ ಕಾಂಗ್ರೆಸ್ ವರಿಷ್ಟ ಮಂಡಳಿ ಅಳೆದು ತೂಗಿ ನನ್ನನ್ನು ಉಮೇದುವಾರನನ್ನಾಗಿ ಕಣಕ್ಕಿಳಿಸಿದೆ. ಪ್ರತಿಯೊಬ್ಬ ಕಾರ್ಯಕರ್ತರು ಅಭ್ಯರ್ಥಿಯಾಗಿ ಕೆಲಸ ಮಾಡಿ ಗೆಲ್ಲಿಸಿ ಮತ್ತೆ ನಿಮ್ಮಗಳ ಸೇವೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಐದು ನೂರು ಕಿ.ಮೀ.ದೂರದಿಂದ ಬಂದಿರುವ ಬಿಜೆಪಿ.ಯ ಗೋವಿಂದ ಕಾರಜೋಳರಿಂದ ಜಿಲ್ಲೆಯ ಅಭಿವೃದ್ದಿ ಹೇಗೆ ಸಾಧ್ಯ ಎನ್ನುವುದನ್ನು ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮೊದಲ ಬಾರಿಗೆ ನಾನು ಗೆದ್ದಾಗ ಸಂಸದ ಎನ್ನುವ ಪಿತ್ತ ನೆತ್ತಿಗೇರಿಸಿಕೊಳ್ಳದೆ ಕೆಲಸ ಮಾಡಿದ್ದೇನೆ. ಅಧಿಕಾರ ಸುಖದ ಸುಪ್ಪತ್ತಿಗೆಯಲ್ಲಿ ಮುಳ್ಳಿನ ಹಾಸಿಗೆ. ಯಾವಾಗಲೂ ಚುಚ್ಚುತ್ತಿರುತ್ತದೆ. ಅಪಾಯದಲ್ಲಿರುವ ಸಂವಿಧಾನವನ್ನು ಉಳಿಸಬೇಕಾಗಿರುವುದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು. ನಾಲ್ಕು ನೂರು ಸ್ಥಾನಗಳನ್ನು ಗೆಲ್ಲುತ್ತೇವೆಂದು ಬಿಜೆಪಿ. ಹೇಳುತ್ತಿದೆ. ಜಾತಿ ಧರ್ಮಗಳ ನಡುವೆ ವೈಷಮ್ಯ ಬಿತ್ತುತ್ತಿರುವ ಕೋಮುವಾದಿ ಬಿಜೆಪಿ.ಯಿಂದ ದೇಶದ ಜನ ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯ ಫಲಿತಾಂಶ ಬರಲಿದೆ. ಗುರುವಾರ ನಾಮಪತ್ರ ಸಲ್ಲಿಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರುಗಳು ಆಗಮಿಸಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಮಾಜಿ ಶಾಸಕ ಎ.ವಿ.ಉಮಾಪತಿ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕೆ.ಡಿ.ಪಿ. ಸದಸ್ಯ ಕೆ.ಸಿ.ನಾಗರಾಜ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಹನುಮಲಿ ಷಣ್ಮುಖಪ್ಪ ಇವರುಗಳು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ನಜ್ಮತಾಜ್, ಡಿ.ಟಿ.ವೆಂಕಟೇಶ್, ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಆರ್.ಪ್ರಕಾಶ್, ಸೇವಾದಳದ ಭೂತೇಶ್, ಶ್ರೀಮತಿ ಮೋಕ್ಷರುದ್ರಸ್ವಾಮಿ, ಮುನಿರಾ ಮಕಾಂದಾರ್, ಆರತಿ ಮಹಡಿ ಶಿವಮೂರ್ತಿ, ರುದ್ರಾಣಿ ಗಂಗಾಧರ್, ಮೆಹಬೂಬ್ ಖಾತೂನ್, ಜಮೀರ್, ಕೃಷ್ಣಪ್ಪ, ಶಬ್ಬೀರ್ ಅಹಮದ್, ಸೈಯದ್ ಖುದ್ದೂಸ್, ನ್ಯಾಯವಾದಿ ಸುದರ್ಶನ್, ಎಸ್ಸಿ. ವಿಭಾಗದ ಅಧ್ಯಕ್ಷ ಜಯಣ್ಣ, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಮೋಹನ್ ಪೂಜಾರಿ, ಉಪಾಧ್ಯಕ್ಷ ಎಲ್.ಬಿ.ರಾಜಪ್ಪ ಕೆಂಗುಂಟೆ, ಜಿ.ಪಂ.ಸದಸ್ಯ ಅನಂತ್, ಅಲ್ಲಾಭಕ್ಷಿ, ಬಾಲಕೃಷ್ಣಸ್ವಾಮಿ, ಕಾರೆಹಳ್ಳಿ ಉಲ್ಲಾಸ್, ಸ್ವಾಮಿ, ಪ್ರಕಾಶ್ ರಾಮನಾಯ್ಕ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.