ವಿದ್ಯಾರ್ಥಿಗಳಲ್ಲಿ ಸ್ಪಷ್ಠವಾದ ಗುರಿಯಿದ್ದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ : ಎಂ.ಸಿ.ರಘುಚಂದನ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ.30 : ವಿದ್ಯಾರ್ಥಿಗಳಲ್ಲಿ ಸ್ಪಷ್ಠವಾದ ಗುರಿಯಿದ್ದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಕರೆ ನೀಡಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಎಸ್.ಎಲ್.ವಿ.ಪದವಿ ಪೂರ್ವ ಕಾಲೇಜು ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಪರಿಣಿತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪೋಷಕರು ನಮ್ಮ ಸಂಸ್ಥೆಗೆ ಶುಲ್ಕ ಕಟ್ಟಿ ನಿಮ್ಮನ್ನು ಓದಲು ಕಳಿಸುತ್ತಿದ್ದಾರೆ. ವಾಸ್ತವದ ಅರಿವು ಎಲ್ಲರಲ್ಲಿಯೂ ಇರಬೇಕು. ಮಕ್ಕಳಿಂದ ಫೀ ಪಡೆಯುತ್ತಿದ್ದೇವೆ. ಅದಕ್ಕೆ ತಕ್ಕಂತೆ ನ್ಯಾಯ ಒದಗಿಸುತ್ತಿದ್ದೇವ ಎಂದು ಆತ್ಮವಾಲೋಕನ ಮಾಡಿಕೊಳ್ಳಬೇಕು. ಚೆನ್ನಾಗಿ ಓದಿ ಗುರು-ಹಿರಿಯರು, ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂಬ ಮನಸ್ಥಿತಿ ರೂಢಿಸಿಕೊಂಡರೆ ಭಗವಂತ ನಿಮಗೆ ಒಳ್ಳೆಯದು ಮಾಡುತ್ತಾನೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು ಬದ್ದ ಜೀವನವಿದ್ದರೆ ಎಂತಹ ಉನ್ನತ ಸ್ಥಾನವನ್ನಾದರೂ ಅಲಂಕರಿಸಬಹುದು. ಅಪ್ಪ ಅಮ್ಮನ ಆಸೆಗೆ ತಕ್ಕಂತೆ ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ತೆಗೆಯುವತ್ತ ನಿಮ್ಮ ಚಿತ್ತವಿರಲಿ ಎಂದು ತಿಳಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕರಾದ ರಾಜು ಆರ್.ಎಸ್. ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ಇತರೆಯವರಿಗೆ ಪ್ರೇರಣೆಯಿದ್ದಂತೆ. ದ್ವಿತೀಯ ಪಿ.ಯು.ಸಿ. ಜೀವನದ ಅತ್ಯಂತ ಮಹತ್ವವಾದ ತಿರುವಿನ ಘಟ್ಟ. ಇಂಜಿನಿಯರಿಂಗ್ ಮೆಡಿಕಲ್‌ಗೆ ಹೋಗಬೇಕೆಂದೇನೂ ಇಲ್ಲ. ಬೇರೆ ಬೇರೆ ವಿಭಿನ್ನವಾದ ಕೋರ್ಸ್ಗಳಿವೆ. ಕಠಿಣ ಪರಿಶ್ರಮ ಸತತ ಅಧ್ಯಯನವಿರಬೇಕು. ಅಂಕಗಳ ಕಡೆ ಗಮನಕೊಟ್ಟು ಓದಿ. ಯಾವುದೇ ಕಾರಣಕ್ಕೂ ನಿರ್ಲಕ್ಷೆ ಬೇಡ ಎಂದು ಹೇಳಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅನಂತರಾಮ್ ಬಿ.ಸಿ. ಮಾತನಾಡುತ್ತ ಪೋಷಕರುಗಳಿಗಿಂತಲೂ ಶಿಕ್ಷಕರುಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಹೆಚ್ಚು ಅಂಕಗಳನ್ನು ಗಳಿಸಬೇಕಾದರೆ ಪ್ರಯತ್ನವಿರಬೇಕು. ಅದಕ್ಕಾಗಿ ಮನಸ್ಸನ್ನು ಬೇರೆ ಕಡೆ ಹೋಗಲು ಬಿಡದೆ ಶಿಕ್ಷಣಕ್ಕೆ ಗಮನ ಕೊಟ್ಟು ತಂದೆ ತಾಯಿಗಳು ನಿಮ್ಮ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಗೆ ತಕ್ಕಂತೆ ಓದಬೇಕು. ಆಗ ಮಾತ್ರ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯ ಎಂದರು.
ಸಾಧಿಸುವ ಛಲವಿದ್ದಾಗ ಮಾತ್ರ ನಿಮ್ಮ ಗುರಿ ತಲುಪಬಹುದು. ಆಗ ನಿಮ್ಮ ಪೋಷಕರು, ಗುರು-ಹಿರಿಯರು ಶಿಕ್ಷಣ ಸಂಸ್ಥೆಗೆ ಒಳ್ಳೆಯ ಕೀರ್ತಿ ತರಬಹುದೆಂದು ತಿಳಿಸಿದರು.
ವೆಂಕಟೇಶ್ವರ ಕಾಲೇಜ್ ಆಫ್ ಎಜುಕೇಷನ್‌ನ ಸಹಾಯಕ ಪ್ರಾಧ್ಯಾಪಕ ಮತ್ತು ಎಸ್.ಎಲ್.ವಿ.ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ವೀಕ್ಷಕರಾದ ಪ್ರಕಾಶ್ ವಿ. ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಸಿಬಿಎಸ್‌ಸಿ. ಪ್ರಾಂಶುಪಾಲರಾದ ಆಂಟೋನಿ ಮ್ಯಾಥ್ಯೂ, ಎಸ್.ಎಲ್.ವಿ.ಪದವಿ ಪೂರ್ವ ಕಾಲೇಜಿನ ಕೇಶವಮೂರ್ತಿ, ಇಂಡಿಯನ್ ಇಂಟರ್ ನ್ಯಾಷನಲ್ ಸ್ಟೇಟ್ ಶಾಲೆಯ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಎಸ್.ಎಲ್.ವಿ.ಪದವಿ ಪೂರ್ವ ಕಾಲೇಜಿನ ಎಲ್ಲಾ ಪ್ರಾಂಶುಪಾಲರು, ಬೋಧಕ, ಬೋಧಕೇತರ ವರ್ಗದವರು ಮತ್ತು ಪೋಷಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರದುರ್ಗ : ಚಿತ್ರದುರ್ಗ ಕ್ರಿಕೆಟ್ ಅಕಾಡೆಮಿ ವತಿಯಿಂದ ಕಳೆದ ೨೮ ರಂದು ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಜೂನಿಯರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದ ಆಯ್ಕೆಯಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಹತ್ತು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಹತ್ತು ವಿದ್ಯಾರ್ಥಿಗಳಿಗೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಪ್ರಾಂಶುಪಾಲರು, ಕ್ರೀಡಾ ಸಂಯೋಜಕರು ತರಬೇತುದಾರರು ಶುಭ ಹಾರೈಸಿದ್ದಾರೆ.