ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗೂ ಮಾನ್ಯತೆ ನೀಡಬೇಕು : ಮಾದಾರ ಚನ್ನಯ್ಯ ಸ್ವಾಮೀಜಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್ 11 : ಪಠ್ಯದ ಜೊತೆಗೆ ಕ್ರೀಡೆಗೂ ಸಹಾ ಮಾನ್ಯತೆಯನ್ನು ನೀಡಿದಾಗ ಅದು ನಿಮ್ಮ ಮುಂದಿನ ಜೀವನದಲ್ಲಿ ಕೈ ಹಿಡಿಯಲಿದೆ ಎಂದು ಕ್ರೀಡಾಪಟುಗಳಿಗೆ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕಿವಿ ಮಾತು ಹೇಳಿದರು.
ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿ.ಪಿ.ಬಡಾವಣೆ ಹಾಗೂ ಚಿತ್ರದುರ್ಗ ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನವದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಮಾನವನಿಗೆ ಕ್ರೀಡೆ ಅಗತ್ಯವಾಗಿದೆ. ಯಾವುದಾದರೊಂದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ ಆಗ ಮಾತ್ರ ಉತ್ತಮವಾದ ದೇಹವನ್ನು ಹೊಂದಲು ಸಾಧ್ಯವಿದೆ. ತಾವು ಓದುವ ಅಭ್ಯಾಸದ ಜೊತೆಗೆ ಕ್ರೀಡೆಗೂ ಸಹಾ ಮಾನ್ಯತೆಯನ್ನು ನೀಡಬೇಕಿದೆ. ಇದರಿಂದ ನಿಮ್ಮ ಮುಂದಿನ ಬದುಕಿಗೆ ಸಹಾಯವಾಗಲಿದೆ.
ನಿಮ್ಮ ಉದ್ಯೋಗದ ನೇಮಕಾತಿಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಮನ್ನಣೆಯನ್ನು ನೀಡುತ್ತಾರೆ ಇದರಿಂದ ಕ್ರೀಡೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ ಎಂದ ಶ್ರೀಗಳು, ವಿದ್ಯಾರ್ಥಿ ಜೀವನ ಮತ್ತೇ ಬರುವುದಿಲ್ಲ ಅದು ಬಂದಾಗ ಅನುಭವಿಸಬೇಕಿದೆ ಇಲ್ಲಿ ಸ್ನೇಹಿತರರೊಂದಿಗೆ ಕೊಡಿಕೊಂಡು ಆಟವನ್ನು ಆಡುವುದು ಓದುವುದು ಮಾಡಬೇಕಿದೆ ಇದರಿಂದ ನಿಮ್ಮ ಬದುಕಿನಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ ಎಂದರು.
ನೀವುಗಳ ಭಾಗವಹಿಸುವ ಕ್ರೀಡೆಯಲ್ಲಿ ವಿಜೇತರಾಗಿ ಬನ್ನಿ ಇದರಿಂದ ನಮ್ಮ ರಾಜ್ಯ ಮತ್ತು ಜಿಲ್ಲೆಯ ಹೆಸರು ಬೆಳದಂತೆ ಆಗುತ್ತದೆ. ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ ಆದರೂ ಸಹಾ ನೀವು ಗೆಲ್ಲುವ ರೀತಿಯಲ್ಲಿ ಪ್ರದರ್ಶನವನ್ನು ನೀಡಬೇಕಿದೆ, ನಮ್ಮ ಜಿಲ್ಲೆಯವರು ರಾಷ್ಟ್ರ ಮಟ್ಟದಲ್ಲಿ ಕ್ರೀಡೆಯನ್ನು ಪ್ರದರ್ಶನ ಮಾಡುವುದು ಉತ್ತಮವಾದ ಅವಕಾಶವಾಗಿದೆ ಇದರ ಸದುಪಯೋಗ ಪಡೆದುಕೊಳ್ಳಿ ಹೋಗುವಾಗ ಬರುವಾಗ ಸರಿಯಾದ ರೀತಿಯಲ್ಲಿ ಇರಿ ರೈಲಿನಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ ಇಳಿಯಬೇಡಿ ಕ್ಷೇಮವಾಗಿ ಹೋಗಿ ಬನ್ನಿ ಈ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ತಂಡದಲ್ಲಿ ನಮ್ಮ ಜಿಲ್ಲೆಯವರೇ ನಾಯಕರಾಗಿರುವುದು ಇನ್ನೂ ಸಂತೋಷದ ಸಂಗತಿಯಾಗಿದೆ ಎಂದು ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ನಾಗಭೂಷಣ್ ಮಾತನಾಡಿ, ಪಠ್ಯ ಮತ್ತು ಕ್ರೀಡೆ ವಿದ್ಯಾರ್ಥಿಯ ಜೀವನದ ಭಾಗವಾಗಬೇಕಿದೆ ಆಗ ಮಾತ್ರ ಉತ್ತಮವಾದ ಕ್ರೀಡಾಪಟುವಾಗಲು ಸಾಧ್ಯವಿದೆ. ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕಾರ ಮಾಡಬೇಕಿದೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದವರಿಗೆ ಹಲವಾರು ಅವಕಾಶಗಳು ಮುಂದೆ ಒದಗಿಬರಲಿವೆ. ಈ ಚಿತ್ರದುರ್ಗ ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆಗೆ ಶ್ರೀಗಳು ಅಧ್ಯಕ್ಷರಾಗಿರುವುದು ಇನ್ನೂ ಸಂತೋಷದ ವಿಷಯವಾಗಿದೆ. ಇಲ್ಲಿ ಶ್ರೀಗಳು ಸಹಾ ವಿವಿಧ ರೀತಿಯ ಕ್ರೀಡೆಯನ್ನು ನಡೆಸುವುದರ ಮೂಲಕ ಕ್ರೀಡಾ ಪ್ರೇಮಿಗಳಾಗಿ ಕ್ರೀಡಾ ಪ್ರೋತ್ಸಾಹಕರಾಗಿದ್ದಾರೆ. ಮಕ್ಕಳಿಎಗ ಪ್ರೋತ್ಸಾಹ ನೀಡುವುದರ ಮೂಲಕ ಅವರನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡಬೇಕಿದೆ ಎಂದರು.
ಚಿತ್ರದುರ್ಗ ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಕೆ.ಹೆಚ್.ಶಿವರಾಮ್ ಮಾತನಾಡಿ, ಡಿಸೆಂಬರ್ 12 ರಿಂದ 16ರವರೆಗೆ ದೆಹಲಿಯಲ್ಲಿ ನಡೆಯುವ 14 ವರ್ಷದೊಳಗಿನ ಬಾಲಕ / ಬಾಲಕಿಯರ ರಾಷ್ಟ್ರೀಯ ಹ್ಯಾಂಡ್‍ಬಾಲ್ ಪಂದ್ಯಾವಳಿ ಹಾಗೂ ದಿನಾಂಕ ಡಿಸೆಂಬರ್ 15 ರಿಂದ 20 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ 20ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಹ್ಯಾಂಡ್‍ಬಾಲ್ ಪಂದ್ಯಾವಳಿ ನಡೆಯಲಿದೆ ಇದರಲ್ಲಿ ಭಾಗವಹಿಸಲು ಚಿತ್ರದುರ್ಗ ಜಿಲ್ಲೆಯಿಂದ 11 ಕ್ರೀಡಾಪಟುಗಳು ಹೋಗಲಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ 14 ವರ್ಷದ ಬಾಲಕ, ಬಾಲಕಿಯರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಜ್ವಲ್ ಎನ್. ದಿಗಂತ ಕುಮಾರ್ ಎನ್, ಪುಷ್ಪಲತಾ ಎಸ್, ಚಿನ್ಮೂಲಾದ್ರಿ ಪ್ರೌಢಶಾಲೆಯ ಮಂಜುನಾಥ್ ಆರ್, ತೇಜಸ್ವಿನಿ ಎಸ್.ಚಳ್ಳಕೆರೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸುನೀಲ್ ಡಿ.ಎಂ.ಪಲ್ಲವಿ ಎನ್, ಮೂರಾರ್ಜಿ ಧೇಸಾಯಿ ವಸತಿ ಶಾಲೆಯ ಸುನಿಲ್ ಎ. ಹಾಗೂ ಡಿ.16 ರಿಂದ ಉತ್ತರ ಪ್ರದೇಶದಲ್ಲಿ ನಡೆಯಲಿರುವ 20 ವರ್ಷ ಬಾಲಕಿಯರ ವಿಭಾಗದಲ್ಲಿ ವೆಸ್ಟ್ರನ್ ಹಿಲ್ಸ್ ಕಾಲೇಜಿನ ಸಾನಿಯ, ಸಂತ ಜೋಸೆಫರ್ ಕಾಲೇಜಿನ ಸುಮ ಎ, ಎಸ್.ಜೆ.ಎಂ.ಕಾಲೇಜಿನ ರಂಜಿತ ಆಯ್ಕೆಯಾಗಿದ್ದಾರೆ ಎಂದರು.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕ ರಾಜ್ಯದ ತಂಡಕ್ಕೆ ನಾಯಕನಾಗಿ ಚಿತ್ರದುರ್ಗದ ಎನ್. ಪ್ರಜ್ವಲ್ ಹಾಗೂ 20ವರ್ಷದ ಬಾಲಕಿಯರ ವಿಭಾಗದ ತಂಡಕ್ಕೆ ನಾಯಕಿಯಾಗಿ ಚಿತ್ರದುರ್ಗದ ಸಾನಿಯ ರವರು ಆಯ್ಕೆಯಾಗಿದ್ದಾರೆ. ಇದು ಜಿಲ್ಲೆಗೆ ದೂರೆತ ಗೌರವವಾಗಿದೆ ಎಂದು ಶಿವರಾಮ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆಯ ಉಪಾಧ್ಯಕ್ಷ ಎಂ.ಹೆಚ್.ಜಯಣ್ಣ, ಖಜಾಂಚಿ, ಸಿ.ಎಸ್.ಪ್ರಮಾನಂದ್, ಚಿದಾನಂದಪ್ಪ, ರವಿಶಂಕರ್, ದೈಹಿಕ ನಿರ್ದೇಶಕರಾದ ಸಂಪತ್, ರವಿಶಂಕರ್, ಚಿನ್ಮೂಲಾದ್ರಿ ಶಾಲೆಯ ಮುಖ್ಯೋಪಾಧ್ಯಯರಾದ ರಘು, ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಸುರೇಶ್ ಭಾಗವಹಿಸಿದ್ದರು.