ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ | ಪರೀಕ್ಷೆ ಪಾವಿತ್ರ್ಯತೆ ಹಾಗೂ ನೈತಿಕತೆ ಕಾಪಾಡಿ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿಕೆ
ಚಿತ್ರದುರ್ಗ . ಫೆ.15 : ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾಗಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಮೌಲ್ಯಮಾಪನದ ಜೊತೆಗೆ, ಶಿಕ್ಷಕರ ಬೋಧನಾ ಸಾಮಾಥ್ರ್ಯ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಮೌಲ್ಯಮಾಪನದ ಮಾನದಂಡವು ಆಗಿದೆ. ಹೀಗಾಗಿ ಪರೀಕ್ಷೆ ಪಾವಿತ್ರ್ಯತೆ ಹಾಗೂ ನೈತಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕಾರ್ಯಗಳನ್ನು ಮುತುವರ್ಜಿಯಿಂದ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಹೇಳಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತು ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಪರೀಕ್ಷಾ ಕಾರ್ಯಗಳಲ್ಲಿ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಿ. ಎಲ್ಲಾ ತಾಲ್ಲೂಕು ಉಪಖಜಾನೆಗಳಿಂದ ನಿಗದಿ ವೇಳೆಗೆ ತಹಶೀಲ್ದಾರ್, ಬಿಇಓ ಹಾಗೂ ಖಜಾನಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಪತ್ರಿಕೆ ಹಾಗೂ ಖಾಲಿ ಉತ್ತರ ಪತ್ರಿಕೆಗಳನ್ನು ಹೊರತೆಗದು ಮಾರ್ಗಾಧಿಕಾರಿಗಳಿಗೆ ನೀಡಬೇಕು. ಪರೀಕ್ಷಾ ನಂತರ ಉತ್ತರ ಪತ್ರಿಕೆಗಳನ್ನು ಮಾರ್ಗಾಧಿಕಾರಿಗಳೇ ಸ್ಟ್ರಾಂಗ್ ರೂಮ್‍ಗೆ ತಲುಪಿಸಬೇಕು. ಈ ಸಮಯದಲ್ಲಿ ತಪ್ಪದೇ ಪೊಲೀಸ್ ಭದ್ರತೆಯನ್ನು ಪಡೆದುಕೊಳ್ಳಬೇಕು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ 5 ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನೇಮಿಸಬೇಕು. ಬೇಸಿಗೆ ಕಾಲವಾದ್ದರಿಂದ ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿಯೂ ಪ್ರಥಮ ಚಿಕಿತ್ಸಾ ಪರಿಕರದೊಂದಿಗೆ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು. ಸಾರಿಗೆ ಅಧಿಕಾರಿಗಳು ಮಾರ್ಗಾಧಿಕಾರಿಗಳಿಗೆ ಅಗತ್ಯ ಇರುವ ವಾಹನಗಳನ್ನು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು.
ಮಾರ್ಚ್ 25 ರಿಂದ ಏಪ್ರಿಲ್ 06 ವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ 78 ಕೇಂದ್ರದಲ್ಲಿ 24,228 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 5 ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಾಟಕ್ಕೆ ಒಟ್ಟು 34 ಮಾರ್ಗಗಳನ್ನು ಗುರುತಿಸಲಾಗಿದೆ ಎಂದು ಚಿತ್ರದುರ್ಗ ಬಿಇಓ ನಾಗಭೂಷಣ್ ಸಭೆಯಲ್ಲಿ ಮಾಹಿತಿ ನೀಡಿದರು.
ಒಟ್ಟು 24228 ವಿದ್ಯಾರ್ಥಿಗಳು : ಮಾ. 25 ರಿಂದ ಜಿಲ್ಲೆಯ 78 ಪರೀಕ್ಷಾ ಕೇಂದ್ರಗಳಲ್ಲಿ ಜರುಗುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ 24228 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ 18 ಪರೀಕ್ಷಾ ಕೇಂದ್ರಗಳಲ್ಲಿ 5387 ವಿದ್ಯಾರ್ಥಿಗಳು,
ಚಿತ್ರದುರ್ಗ ತಾಲ್ಲೂಕಿನ 21 ಪರೀಕ್ಷಾ ಕೇಂದ್ರಗಳಲ್ಲಿ 6662 ವಿದ್ಯಾರ್ಥಿಗಳು,
ಹಿರಿಯೂರು ತಾಲ್ಲೂಕಿನ 13 ಪರೀಕ್ಷಾ ಕೇಂದ್ರಗಳಲ್ಲಿ 3716 ವಿದ್ಯಾರ್ಥಿಗಳು,
ಹೊಳಲ್ಕೆರೆ ತಾಲ್ಲೂಕಿನ 08 ಪರೀಕ್ಷಾ ಕೇಂದ್ರಗಳಲ್ಲಿ 2739 ವಿದ್ಯಾರ್ಥಿಗಳು,
ಹೊಸದುರ್ಗ ತಾಲ್ಲೂಕಿನ 10 ಪರೀಕ್ಷಾ ಕೇಂದ್ರಗಳಲ್ಲಿ 3333 ವಿದ್ಯಾರ್ಥಿಗಳು,
ಮೊಳಕಾಲ್ಮೂರು ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ 2391 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ವಿ. ಲಕ್ಷ್ಮೀನಾರಾಯಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಭಿವೃದ್ಧಿ ವಿಭಾಗದ ಡಿ.ಡಿ.ಪಿ.ಐ ನಾಸೀರುದ್ದಿನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ.ಕಾಳೆಸಿಂಘೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಾಧಿಕಾರಿಗಳು ಉಪಸ್ಥಿತರಿದ್ದರು.