ಸರ್ಕಾರ ಮಾಡದ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ : ಸಿವಿಲ್ ನ್ಯಾಯಾಧೀಶರಾದ ವಿಜಯ್
ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.20 : ಸಂವಿಧಾನದಡಿ ಪುರುಷರಷ್ಟೆ ಸಮಾನವಾದ ಹಕ್ಕು ಮಹಿಳೆಗೂ ನೀಡಲಾಗಿದೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ವಿಜಯ್ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನೆಹರು ನಗರ ವಲಯ ಚಿತ್ರದುರ್ಗ ವತಿಯಿಂದ ಇಲ್ಲಿನ ಬಡಾಮಕಾನ್ ಶಾದಿ ಮಹಲ್ ಸಭಾಂಗಣದಲ್ಲಿ ಶನಿವಾರ ನಡೆದ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಸರ್ಕಾರ ಮಾಡದ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ. ಮಹಿಳೆ ಸ್ವಾವಲಂಭಿಯಾದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಮಹಿಳೆಯ ಕೈಗೆ ಕೆಲಸ ಸಿಗಬೇಕು. ಕಾನೂನಿನಡಿ ಸೇವೆ, ಹಕ್ಕು, ಸ್ವಾತಂತ್ರ್ಯವಿದೆ. ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆ ಹಿಂದಿನಿಂದಲೂ ಶೋಷಣೆ ಅನುಭವಿಸಿಕೊಂಡು ಬರುತ್ತಿದ್ದಾಳೆ. ಗಂಡನ ಮನೆಯಲ್ಲಿ ಮಹಿಳೆಗೆ ಹಿಂಸಿಸಿ ಶೋಷಣೆಗೆ ಒಳಪಡಿಸಿದರೆ ರಕ್ಷಣೆ ನೀಡುವುದಕ್ಕಾಗಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯನ್ನು 2005 ರಲ್ಲಿ ಜಾರಿಗೆ ತರಲಾಗಿದೆ ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.
ಮಹಿಳೆಗೆ ಗಂಡನ ಆಸ್ತಿಯಲ್ಲಿ ಹಕ್ಕಿದೆ. ಘನತೆಯಿಂದ ಜೀವಿಸುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಶೋಷಣೆಯಿಂದ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಅನೇಕ ಕಾನೂನುಗಳಿವೆ. ತಾಲ್ಲೂಕು ಹಂತದಿಂದ ಹಿಡಿದು ಸುಪ್ರಿಂಕೋರ್ಟ್‍ವರೆಗೆ ಉಚಿತವಾಗಿ ವಕೀಲರ ನೆರವು ನೀಡಲಾಗುವುದು. ಶಿಕ್ಷಣದಿಂದ ಮಾತ್ರ ಮಹಿಳೆ ಆರ್ಥಿಕವಾಗಿ ಸ್ವಾವಲಂಭಿಯಾಗಿ ಬದುಕುವುದರ ಜೊತೆ ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳಬಹುದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ರಚಿಸಿದ್ದಾರೆ. ವಯೋವೃದ್ದರಿಗೆ, ವಿಧವೆಯರಿಗೆ ಮಾಶಾಸನ ನೀಡುತ್ತಿದ್ದಾರೆ. ಕೆರೆ ಕಟ್ಟೆಗಳ ಹೂಳು ತೆಗೆಸಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಉಪಕರಣಗಳನ್ನು ಒದಗಿಸುವುದರ ಜೊತೆ ಹತ್ತು ಹಲವಾರು ಉಪಯುಕ್ತ ಯೋಜನೆಗಳನ್ನು ನೀಡಿದ್ದಾರೆಂದು ಗುಣಗಾನ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನಿರ್ದೇಶಕ ದಿನೇಶ್ ಪೂಜಾರಿ, ಬಡಾಮಕಾನ್ ಧರ್ಮಗುರು ಸೈಯದ್ ಮುಸ್ತಾಕ್ ವೇದಿಕೆಯಲ್ಲಿದ್ದರು. ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್, ನೆಹರು ನಗರ ವಲಯದ ಮೇಲ್ವಿಚಾರಕ ಕಾರ್ತಿಕ್, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿಕಲಚೇತನ ಮಹಿಳೆಗೆ ವೀಲ್‍ಚೇರ್ ವಿತರಿಸಲಾಯಿತು.