For the best experience, open
https://m.suddione.com
on your mobile browser.
Advertisement

“ಕ್ರೀಡೆ” ಜೀವನ ಶೈಲಿಯಾಗಬೇಕು : ಆರ್.ಟಿ.ಪ್ರಸನ್ನಕುಮಾರ್ ಅಭಿಮತ

01:30 PM Nov 26, 2023 IST | suddionenews
“ಕ್ರೀಡೆ” ಜೀವನ ಶೈಲಿಯಾಗಬೇಕು   ಆರ್ ಟಿ ಪ್ರಸನ್ನಕುಮಾರ್ ಅಭಿಮತ
Advertisement

Advertisement

ಚಿತ್ರದುರ್ಗ. ನ.26: ಚಾಂಪಿಯನ್‍ಶಿಪ್, ಕ್ರೀಡಾಕೂಟಗಳು ಇದ್ದಾಗ ಮಾತ್ರ ನಾವು ಕ್ರೀಡೆ, ಕ್ರೀಡಾಕೂಟಗಳಿಗೆ ತಯಾರು ಮಾಡುತ್ತೇವೆ. ಆದರೆ ನಿಜವಾಗಿಯೂ “ಕ್ರೀಡೆ” ಜೀವನ ಶೈಲಿಯಾಗಬೇಕು ಎಂದು ಅಂತರ ರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ಯಾರಾ ಒಲಂಪಿಕ್ ಕ್ರೀಡಾಪಟು ಆರ್.ಟಿ.ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಜಿಲ್ಲಾ  ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಆಗ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಉನ್ನತವಾದ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಮನಸ್ಸು ಹಾಗೂ ದೇಹ, ಶರೀರ ಒಂದೊಕ್ಕೊಂಡು ಪೂರಕವಾಗಿ ಸದಾ ಲವಲವಿಕೆ, ಕ್ರಿಯಾಶೀಲ ಚಟುವಟಿಕೆಯಿಂದ ಇರಬೇಕಾದರೆ ಯಾವುದಾದರೊಂದು ಕ್ರೀಡೆಯಲ್ಲಿ ಆಸಕ್ತಿ ತೋರಬೇಕು. ಕ್ರೀಡೆಗಳು ನಮ್ಮ ಜೀವನೋತ್ಸಾಹ ಇಮ್ಮಡಿಗೊಳಿಸುತ್ತವೆ. ಹೊಸ ಹುಮ್ಮಸ್ಸು, ಹರುಷ ಮೂಡಿಸವಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.
ಪ್ರತಿಯೊಬ್ಬರು ಜೀವನದಲ್ಲಿ ಹಲವಾರು ಬಗೆಯ ಒತ್ತಡಗಳನ್ನು ಅನುಭವಿಸುತ್ತಿರುತ್ತಾರೆ. ಕ್ರೀಡೆಯು ಒತ್ತಡ ಮೀರಿ ಬೆಳೆಯಲು ತುಂಬಾ ಸಹಕಾರಿಯಾಗಲಿದೆ. ನಮ್ಮಲ್ಲಿರುವ ಎಲ್ಲಾ ಜಂಜಾಟ ಮೆರೆತು ಆಟದ ಮೈದಾನಕ್ಕೆ ಇಳಿದಾಗ ವ್ಯಕ್ತಿಯ ಸಾಮಾಜಿಕ, ಕೌಟುಂಬಿಕವಾದ ಯಾವುದೇ ನೆನಪುಗಳು ಬರುವುದಿಲ್ಲ. ಛಲ, ಕೆಚ್ಚೆದೆ, ಆತ್ಮವಿಶ್ವಾಸ ಇದಲ್ಲಿ ಜೀವನದಲ್ಲಿ ಏನಾದರೂ ಸಾಧಿಸಬಹುದಾಗಿದೆ ಎಂದರು.

ಕ್ರೀಡಾಕೂಟ, ಕ್ರೀಡೆ ಎಂಬುವುದು ಸಮಾಜದ ಕಟ್ಟುಪಾಡು ಸೂಚಿಸಲಿದೆ. ತಪ್ಪು ಮಾಡಿದಾಗ ಶಿಕ್ಷೆ ಮಾಡುವಂತಹ, ಪಾಯಿಂಟ್ ಕಳೆಯುವಂತಹ ತೀರ್ಪುಗಾರರು ಇರುತ್ತಾರೆ. ಅದೇ ರೀತಿಯಾಗಿ ಎದುರಾಳಿಯನ್ನು ಮಾನಸಿಕ, ದೈಹಿಕ ಹಾಗೂ ಕೌಶಲ್ಯದ ಮೂಲಕ ಹೇಗೆ ಎದುರಿಸಬೇಕು ಎಂಬುವುದನ್ನು ಕ್ರೀಡೆ ಕಲಿಸಿಕೊಡಲಿದೆ ಎಂದರು.

ಪೊಲೀಸ್ ಅಧೀಕ್ಷಕ ಧಮೇಂದರ್ ಕುಮಾರ್ ಮೀನಾ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರತಿ ವರ್ಷವೂ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಹಬ್ಬವಿದ್ದಂತೆ. ಈ ಎರಡು ದಿನಗಳ ಕ್ರೀಡಾಕೂಟದಲ್ಲಿ ಪೊಲೀಸರು ತಮ್ಮ ಒತ್ತಡಗಳನ್ನು ಮರೆತು ಸಹೋದ್ಯೋಗಿಗಳೊಂದಿಗೆ ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ  ಭಾಗಿಯಾಗಬೇಕು. ಎಲ್ಲರೂ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ನಿಮ್ಮ ನಿಮ್ಮ ಉಪವಿಭಾಗಗಳಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ 400 ಮೀಟರ್ ಓಟ ಸೇರಿದಂತೆ ವಾಲಿಬಾಲ್, ರಿಲೆ, ಗುಂಡು ಎಸೆತ ಸ್ಪರ್ಧೆಗಳು ಜರುಗಿದವು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಜೆ.ಕುಮಾರಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಾಪಣ್ಣ, ಡಿಎಆರ್‍ನ ಗಣೇಶ್ ಸೇರಿದಂತೆ ವಿವಿಧ ಉಪವಿಭಾಗಗಳ ಡಿವೈಎಸ್‍ಪಿ, ಸಿಪಿಐ, ಪಿಎಸ್‍ಐ ಅಧಿಕಾರಿಗಳು ಮತ್ತು ಸಿಬ್ಬಂದಿ  ಇದ್ದರು.

Tags :
Advertisement