ಭದ್ರಾಮೇಲ್ದಂಡೆ ಯೋಜನೆ ಶೀಘ್ರ ಜಾರಿಗಾಗಿ ಒತ್ತಾಯಿಸಿ ಚಿತ್ರದುರ್ಗ ಬಂದ್ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.23 : ಭದ್ರಾಮೇಲ್ದಂಡೆ ಯೋಜನೆ ಶೀಘ್ರ ಜಾರಿಗಾಗಿ ಒತ್ತಾಯಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಮಂಗಳವಾರ ಚಿತ್ರದುರ್ಗ ಬಂದ್‍ಗೆ ನೀಡಿದ್ದ ಕರೆಗೆ ಅಂಗಡಿ ಮುಂಗಟ್ಟುಗಳು ಮುಚ್ಚಿ ಬೆಂಬಲ ವ್ಯಕ್ತಪಡಿಸಿದವು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಿ.ಪಿ.ಐ.
ಕರುನಾಡ ವಿಜಯಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಬೆಳಗಿನಿಂದಲೇ ಗಾಂಧಿ ಸರ್ಕಲ್‍ನಲ್ಲಿ ಜಮಾಯಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ, ಕಾರು, ಬೈಕ್ ಸವಾರರನ್ನು ತಡೆದು ತರಾಟೆ ತೆಗೆದುಕೊಂಡು ಹಿಂದಕ್ಕೆ ಕಳಿಸುತ್ತಿದ್ದುದು ಕಂಡು ಬಂದಿತು.
ಸಂತೇಹೊಂಡದ ಮುಂಭಾಗದ ತರಕಾರಿ ಮಾರುಕಟ್ಟೆಯನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯವರು ಬಂದ್ ಮಾಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದವರು ದಾವಣಗೆರೆ ರಸ್ತೆಯಲ್ಲಿ ಕುಳಿತು ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಕೊಡದೆ ಭದ್ರಾಮೇಲ್ದಂಡೆ ಯೋಜನೆಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಗಾಂಧಿ ಸರ್ಕಲ್ ದೀಪ ಹೋಟೆಲ್ ಮುಂಭಾಗ ಹೂವು ಹಾರ ಮಾರಾಟ ಮಾಡುತ್ತಿರುವವರನ್ನು ಹೋರಾಟಗಾರರು ಗದರಿದ ಪರಿಣಾಮ ಗಂಟು ಮೂಟೆಗಳನ್ನು ಕಟ್ಟಿಕೊಂಡು ಒಳಗೊಳಗೆ ಗುನುಗುತ್ತ ಮನೆ ಕಡೆ ನಡೆದರು.
ಮೆಡಿಕಲ್ ಸ್ಟೋರ್ ಹೊರತುಪಡಿಸಿ ಬೇರೆ ಎಲ್ಲಾ ಬಗೆಯ ವ್ಯಾಪಾರಿ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದವು. ಪ್ರವಾಸಿ ಮಂದಿರ, ಎಸ್.ಬಿ.ಎಂ.ಸರ್ಕಲ್‍ನಲ್ಲಿ ಹೋರಾಟಗಾರರು ರಸ್ತೆ ಅಡ್ಡಲಾಗಿ ನಿಂತು ಯಾವ ವಾಹನಗಳು ಸಂಚರಿಸಲು ಬಿಡದೆ ಹಿಂದೆ ತರುಬಿದರು. ಬಂದ್ ಕಾವಿಗೆ ಕೆಲವು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಯಿತು.
ಸರ್ಕಾರಿ ಬಸ್‍ಗಳು ಮಾತ್ರ ಎಂದಿನಂತೆ ಸಂಚರಿಸಿದವು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರೈತ ಮುಖಂಡರುಗಳಾದ ಈಚಘಟ್ಟದ ಸಿದ್ದವೀರಪ್ಪ, ಹೊರಕೇರಪ್ಪ, ಲಕ್ಷ್ಮಿಕಾಂತ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ಧನಂಜಯ ಹಂಪಯ್ಯನಮಾಳಿಗೆ, ಅಣ್ಣಪ್ಪ, ಕಾರ್ಮಿಕ ಮುಖಂಡರುಗಳಾದ ಕಾಂ.ಜಿ.ಸಿ.ಸುರೇಶ್‍ಬಾಬು, ಎ.ಪಿ.ಎಂ.ಸಿ.ಯ ಬಸವರಾಜು, ಕಟ್ಟಡ ಕಾರ್ಮಿಕರ ಸಂಘ ತಾಲ್ಲೂಕು ಅಧ್ಯಕ್ಷ ರಾಜಣ್ಣ, ಎ.ಐ.ಟಿ.ಯು.ಸಿ. ತಾಲ್ಲೂಕು ಅಧ್ಯಕ್ಷ ಟಿ.ಆರ್.ಉಮಾಪತಿ, ಸತ್ಯಕೀರ್ತಿ, ತಿಪ್ಪೇಸ್ವಾಮಿ, ಬಾಬಣ್ಣ, ಎ.ಪಿ.ಎಂ.ಸಿ.ಚಂದ್ರಣ್ಣ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ರತ್ನಮ್ಮ, ಕಮಲ, ಕರ್ನಾಟಕ ರಕ್ಷಣಾ ವೇದಿಕೆ ಟಿ.ನಾರಾಯಣಗೌಡ ಬಣದ ಅಧ್ಯಕ್ಷ ಟಿ.ರಮೇಶ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹೆಚ್ಚುವರಿ ರಕ್ಷಣಾಧಿಕಾರಿ, ಡಿ.ವೈ.ಎಸ್ಪಿ. ವೃತ್ತ ನಿರೀಕ್ಷರು, ಸಬ್ ಇನ್ಸ್‌ಪೆಕ್ಟರ್ ಗಳು ಸೇರಿದಂತೆ ನೂರಾರು ಪೊಲೀಸರು ಗಾಂಧಿ ವೃತ್ತ ಇನ್ನಿತರೆ ಕಡೆ ಜಮಾಯಿಸಿ ಯಾವುದೇ ಅನಾಹುತಗಳು ನಡೆಯದಂತೆ ಎಚ್ಚರ ವಹಿಸಿದ್ದರು.