ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿ ಕೊಳಗೇರಿ ನಿವಾಸಿಗಳ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.12 : ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ವಿಜಯನಗರ ಬಡಾವಣೆ, ಸಿಹಿನೀರು ಹೊಂಡ, ಚೋಳಗುಡ್ಡ, ಕಾಮನಬಾವಿ ಬಡಾವಣೆ, ಹಿಮ್ಮತ್‍ನಗರ, ಸಿ.ಕೆ.ಪುರ, ಕಬೀರಾನಂದನಗರ, ಬಾರಾ ಹಿಮಾಮ್ ಮಕಾನ್ ಹಿಂಭಾಗ, ಮೇಕೆಬಂಡೆ ಇನ್ನು ಮೊದಲಾದ ಕೊಳಚೆ ಪ್ರದೇಶಗಳಲ್ಲಿ ಇನ್ನು ಹಕ್ಕುಪತ್ರಗಳನ್ನು ವಿತರಿಸಿರುವುದಿಲ್ಲ.
ಹೊಸದಾಗಿ ನೀಡುತ್ತಿದ್ದ ಬಿ.ಪಿ.ಎಲ್. ಕಾರ್ಡ್ ಸ್ಥಗಿತಗೊಳಿಸಿದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶವಿಲ್ಲದಂತಾಗಿದೆ. ಇದರಿಂದ ಬಡವರಿಗೆ ಸಿಗುತ್ತಿದ್ದ ಉಚಿತ ಅಕ್ಕಿಗೂ ಭಂಗವಾಗಿದೆ. ಕೊಳಗೇರಿ ನಿವಾಸಿಗಳು ಜೀವಿಸುವುದು ಕಷ್ಟವಾಗಿರುವುದರಿಂದ ಕೂಡಲೆ ಉಚಿತ ಅಕ್ಕಿ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಬಡವರು ಚಿಕಿತ್ಸೆಯಿಲ್ಲದೆ ಪರದಾಡುವಂತಾಗಿದೆ. ಆಶ್ರಯ ಬಡಾವಣೆಯಲ್ಲಿ ವಾಸಿಸುತ್ತಿರುವವರಿಗೆ ಸಾಲ ತೀರುವಳಿಯಾಗಿದ್ದರೂ ನಗರಸಭೆಯಲ್ಲಿ ಸಾಲ ತೀರುವಳಿ ಪತ್ರ ನೀಡುತ್ತಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಉಪಾಧ್ಯಕ್ಷ ಎನ್.ರಂಗಸ್ವಾಮಿ, ಹೆಚ್.ಮೈಲಾರಪ್ಪ, ಇಮಾಂಸಾಬ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.