For the best experience, open
https://m.suddione.com
on your mobile browser.
Advertisement

ಸಿದ್ದರಾಮಯ್ಯ ನವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲಿ : ಕೆ.ಎಸ್.ನವೀನ್ ಆಗ್ರಹ

06:20 PM Oct 01, 2024 IST | suddionenews
ಸಿದ್ದರಾಮಯ್ಯ ನವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲಿ   ಕೆ ಎಸ್ ನವೀನ್ ಆಗ್ರಹ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 01 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಮೂಡಾದಲ್ಲಿ ಪಡೆದಿರುವ ಹದಿನಾಲ್ಕು ಸೈಟ್‍ಗಳನ್ನು ಹಿಂದಿರುಗಿಸುವುದಾಗಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿರುವುದನ್ನು ನೋಡಿದರೆ ಸಿದ್ದರಾಮಯ್ಯನವರು ನಾನೆ ತಪ್ಪಿತಸ್ಥನೆಂದು ಒಪ್ಪಿಕೊಂಡಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋರ್ಟ್, ಲೋಕಾಯುಕ್ತ, ಇ.ಡಿ. ತೀರ್ಪು ನೀಡುವ ಮೊದಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೇಲಿನ ಆರೋಪಕ್ಕೆ ತೀರ್ಪು ಕೊಟ್ಟುಕೊಂಡಿದ್ದಾರೆ. ಕಳೆದ ನಾಲ್ಕೈದು ತಿಂಗಳಿನಿಂದ ಬಿಜೆಪಿ ಸದನದ ಒಳಗೆ ಹೊರಗೆ ಪ್ರತಿಭಟನೆ ನಡೆಸಿ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿಗೆ ಪಾದಯಾತ್ರೆಯನ್ನು ನಡೆಸಿತು. ಇಷ್ಟೆಲ್ಲಾ ಆದರೂ ಸತ್ಯಹರಿಶ್ಚಂದ್ರನಂತೆ ವರ್ತಿಸುತ್ತಿರುವ ಸಿದ್ದರಾಮಯ್ಯ ಇಲ್ಲಿಯವರೆಗೂ ಎಲ್ಲಾ ಹಗರಣಗಳಿಂದ ಬಚಾವಾಗುವ ಮಾತುಗಳನ್ನಾಡುತ್ತಿದ್ದಾರೆ. ಲೋಕಾಯುಕ್ತ ಎಫ್.ಐ.ಆರ್.ದಾಖಲಿಸಿ ಮುಖ್ಯಮಂತ್ರಿಯನ್ನು ಆರೋಪಿ ಒಂದನೆ ಸ್ಥಾನದಲ್ಲಿ ನಿಲ್ಲಿಸಿದೆ. ಇ.ಡಿ.ಕೂಡ ಎಫ್.ಐ.ಆರ್.ದಾಖಲಿಸಿದೆ. ಈಗಲಾದರೂ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕೆ.ಎಸ್.ನವೀನ್ ಆಗ್ರಹಿಸಿದರು.

ಸುಮೋಟೋ ಕೇಸು ದಾಖಲಿಸುವ ಹಕ್ಕನ್ನು ಮುಖ್ಯಮಂತ್ರಿ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸಿಬಿಐ.ಗಿರುವ ಅಧಿಕಾರವನ್ನು ಮೊಟಕುಗೊಳಿಸುವ ನಿರ್ಣಯವನ್ನು ಕ್ಯಾಬಿನೆಟ್‍ನಲ್ಲಿ ತೆಗೆದುಕೊಳ್ಳಲಾಗಿದೆ. ಲೋಕಾಯುಕ್ತವನ್ನು ಬಾಗಿಲು ಹಾಕಿಸಿ ಎ.ಸಿ.ಬಿ. ತೆರೆದು ಕಡತಗಳು ತಮ್ಮ ಮುಂದೆ ಬರುವಂತ ವ್ಯವಸ್ಥೆ ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸುತ್ತಲಿನ ಪಟಾಲಂಗಳು ತೋಡಿರುವ ಗುಂಡಿಗೆ ಬಿದ್ದಿದ್ದಾರೆ. ರಾಜ್ಯಪಾಲರ ಯಾವುದೇ ಪತ್ರಗಳಿಗೆ ಉತ್ತರ ಕೊಡಬಾರದೆಂಬ ತೀರ್ಮಾನವನ್ನು ಕ್ಯಾಬಿನೆಟ್‍ನಲ್ಲಿ ತೆಗೆದುಕೊಳ್ಳಲಾಗಿದೆ. ಮೂಡಾ ಕಚೇರಿಯಲ್ಲಿನ ಕಡತಗಳನ್ನು ನಗರಾಭಿವೃದ್ದಿ ಸಚಿವ ಹೆಲಿಕ್ಯಾಪ್ಟರ್‍ನಲ್ಲಿ ಬೆಂಗಳೂರಿಗೆ ತಂದು ಸಿದ್ದರಾಮಯ್ಯನವರನ್ನು ಮೆಚ್ಚಿಸುವ ಕೆಲಸ ಮಾಡಿದ್ದಾರೆ. ನ್ಯಾಯಾಲಯ, ಇ.ಡಿ. ಲೋಕಾಯುಕ್ತದ ನಿಸ್ಪಕ್ಷಪಾತ ತನಿಖೆಗೆ ಸಹಕರಿಸಿ ಅಧಿಕಾರ ತ್ಯಾಗ ಮಾಡುವ ಬದಲು ಮುಖ್ಯಮಂತ್ರಿ ಕುರ್ಚಿಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹಗೆಲು ಮುಟ್ಟಿಕೊಂಡು ನೋಡುವ ಪ್ರವೃತ್ತಿ ಸಿದ್ದರಾಮಯ್ಯನವರಿಗೆ ಶೋಭೆಯಲ್ಲ ಎಂದು ಟೀಕಿಸಿದರು.

ಮೂಡಾದ ಕೇವಲ ಹದಿನಾಲ್ಕು ಸೈಟ್‍ಗಳ ಹಗರಣವಷ್ಟೆ ಅಲ್ಲ. ನಾಲ್ಕು ಸಾವಿರ ಸೈಟ್‍ಗಳನ್ನು ತಮ್ಮ ಹಿಂಬಾಲಕರುಗಳಿಗೆ ಮನಬಂದಂತೆ ಹಂಚಿಕೆ ಮಾಡಿರುವುದು ಕೂಡ ಸಮಗ್ರ ತನಿಖೆಯಾಗಬೇಕು. ಮೈಸೂರಿನಲ್ಲಿ ಎಂಬತ್ತು ಸಾವಿರ ಜನ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವುದನ್ನು ಗಣನೆಗೆ ತೆಗೆಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರ್ಯಾರಿಗೆ ಎಷ್ಟೆಷ್ಟು ನಿವೇಶನಗಳನ್ನು ಕೊಟ್ಟಿದ್ದಾರೆನ್ನುವುದು ಬಯಲಿಗೆ ಬರಬೇಕಿದೆ ಎಂದು ಕೆ.ಎಸ್.ನವೀನ್ ಒತ್ತಾಯಿಸಿದರು.

ಬಿಜೆಪಿ. ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ವಕ್ತಾರ ನಾಗರಾಜ್‍ಬೇದ್ರೆ, ತಿಪ್ಪೇಸ್ವಾಮಿ ಛಲವಾದಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags :
Advertisement