ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ
ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ನಮ್ಮ ಸಮಾಜ 2000-2001ನೇ ಸಾಲಿನಲ್ಲಿ ಪ್ರಾರಂಭವಾಗಿ ಇಂದಿಗೆ 25 ವರ್ಷ ಪ್ರಾರಂಭವಾಗಲಿದೆ ಈ ಹಿನ್ನಲೆಯಲ್ಲಿ ಈ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡಬೇಕಿದೆ ಇದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಈ ವರ್ಷದ ಪ್ರತಿಭಾ ಪುರಸ್ಕಾರದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ.85 ರಷ್ಟು ಅಂಕಗಳನ್ನು ಪಡೆದ ಪ್ರತಿಭಾವಂತ ಚಿತ್ರದುರ್ಗ ಜಿಲ್ಲೆಯ ಶಿವಶಿಂಪಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ತಿರ್ಮಾನಿಸಿದ್ದು, ಇದರೊಂದಿಗೆ ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಸಾಧನೆಯನ್ನು ಮಾಡಿದ ವಯಸ್ಸಿನ ಮಿತಿ ಇಲ್ಲದೆ ಯಾರು ಬೇಕಾದರೂ ಹೆಸರನ್ನು ನೀಡಬಹುದಾಗಿದೆ. ಇದ್ದಲ್ಲದೆ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಧನ ಸಹಾಯ ಮಾಡಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲು ತೀರ್ಮಾನ ಮಾಡಲಾಯಿತು.
ಸಮಾಜದ ಕಾರ್ಯದರ್ಶಿ ಇ.ಕೆ.ಮಲ್ಲಿಕಾರ್ಜನರವರು, ಹಿಂದಿನ ಮಹಾಸಭೆಯ ನೋಟಿಸ್‌ನ್ನು ಓದಿ 2023-24ನೇ ಸಾಲಿನ ಜಮಾ-ಖರ್ಚು ಹಾಗೂ 2024-25ನೇ ಸಾಲಿನ ಮುಂಗಡ ಜಮಾ-ಖರ್ಚುನ್ನು ಮಂಡನೆ ಮಾಡಿದರು. 2024ರ ಕುಲಗುರು ಶ್ರೀ ಶಿವದಾಸಿಮಯ್ಯ ಜಯಂತ್ಯೋತ್ಸವಕ್ಕೆ ದಿನಾಂಕ ನಿಗಧಿಯ ಬಗ್ಗೆ ಮುಂದಿನ ಕಾರ್ಯಾಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲು ನಿರ್ಧಾರ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷರಾದ ಇ.ಎಸ್.ಜಯದೇವ ಮೂರ್ತಿಯವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಿಮ್ಮಗಳ ಸಹಕಾರದಿಂದ ಶಿವದಾಸಿಮಯ್ಯರವರು ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರವನ್ನು ಅದ್ದೂರಿಯಾಗಿ ಮಾಡಲಾಗಿದೆ. ಇದಕ್ಕೆ ಸಹಾಯ ಮಾಡಿದವರನ್ನು ಈಗ ನೆನೆಯ ಬೇಕಿದೆ ಇದೇ ರೀತಿ ಮುಂದಿನ ದಿನದಲ್ಲಿ ಸಮಾಜದ ಪ್ರಗತಿಗೆ ಎಲ್ಲರು ಸಹಾ ಸಹಕಾರ ನೀಡಬೇಕಿದೆ. ಈ ವರ್ಷ ನಮ್ಮ ಸಮಾಜ 25ನೇ ವರ್ಷ ಪ್ರಾರಂಭವಾಗಲಿದ್ದು, ಇದರ ಏಳ್ಗೆಗೆ ಎಲ್ಲರು ಸಹಾ ಸಹಕಾರ ಮಾಡಿದ್ದಾರೆ ಇದರಲ್ಲಿ ಸಮಾಜದ ಹಿರಿಯರಾದ ಷಣ್ಮುಖಪ್ಪರವರ ನೆರವು ಹೆಚ್ಚಿನ ರೀತಿಯಲ್ಲಿ ಇದೆ ಎಂದರು.
ನಮ್ಮ ಸಮಾಜದ ಪ್ರಗತಿಗೆ ಮಹಿಳಾ ಘಟಕದ ಸಹಕಾರ ಹೆಚ್ಚಿನ ರೀತಿಯಲ್ಲಿ ಇದೆ, ಅವರು ಪ್ರತಿ ತಿಂಗಳು ಕಾರ್ಯಕ್ರಮವನ್ನು ಮಾಡುವುದರ ಮೂಲಕ ರಾಜ್ಯದಲ್ಲಿ ಉತ್ತಮ ಮಹಿಳಾ ಘಟಕ ಎಂದು ಹೆಸರು ಪಡೆದಿದ್ದಾರೆ. ನಮ್ಮಲ್ಲಿ ಯುವ ಜನತೆ ಹೆಚ್ಚಾಗಿ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಇದು ದುರಂತವಾಗಿದೆ ನಮ್ಮ ಸಮಾಜದ ಮುಂದಿನ ನಾಯಕರಾದ ಯುವ ಜನತೆ ಹೆಚ್ಚಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದೆ, ಬೇರೆ ಸಮಾಜದವರನ್ನು ನೋಡಿದರೆ ನಮಗೆ ನಮ್ಮ ಸಂಘಟನೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಪಡಿಸಬೇಕಿದೆ ಎಂದು ಜಯದೇವಮೂರ್ತಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ನಿಧನರಾದ ನಮ್ಮ ಸಮಾಜದ ಭಾಂದವರಿಗೆ ಒಂದು ನಿಮಿಷ ಮೌನವನ್ನು ಆಚರಿಸುವುದರ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜದ ಗೌರವಾಧ್ಯಕ್ಷರಾದ ಡಿ.ಬಿ.ಶಿವಹಾಲಪ್ಪ, ಉಪಾಧ್ಯಕ್ಷರಾದ ಎಸ್.ವಿರೇಶ್, ಖಂಜಾಚಿ ಶ್ರೀಮತಿ ನಿರ್ಮಲ ಬಸವರಾಜು, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾ ಮುರುಗೇಶ್ ಭಾಗವಹಿಸಿದ್ದರು. ಶ್ರೀಮತಿ ಕವಿತಾ ವಿರೇಶ್ ಪ್ರಾರ್ಥಿಸಿದರೆ. ಸಮಾಜದ ಪ್ರಚಾರ ಸಂಚಾಲಕರಾದ ಸುರೇಶ್ ಪಟ್ಟಣ್ ವಂದಿಸಿದರು.