ಮಾರ್ಚ್ 7 ರಿಂದ 9 ರವರೆಗೆ ಶಿವರಾತ್ರಿ ಮಹೋತ್ಸವ | ಚಿತ್ರದುರ್ಗದಲ್ಲಿ 31 ಅಡಿ ಎತ್ತರದ ಧ್ಯಾನಮಗ್ನ ಶಿವನ ಲೋಕಾರ್ಪಣೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, ಮಾರ್ಚ್.05 : ಜೋಗಿಮಟ್ಟಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮೂರನೆ ವರ್ಷದ ಶಿವರಾತ್ರಿ ಮಹೋತ್ಸವ ಹಾಗೂ 31 ಅಡಿ ಎತ್ತರದ ಧ್ಯಾನಮಗ್ನ ಶಿವನ ಪ್ರತಿಮೆ ಲೋಕಾರ್ಪಣೆಗೊಳಿಸಲಾಗುವುದೆಂದು ಮುಕ್ತಿನಾಥೇಶ್ವರಸ್ವಾಮಿ ದೇವಸ್ಥಾನ ಮತ್ತು ಸಾರ್ವಜನಿಕ ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್‍ನ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿ ತಿಳಿಸಿದರು.
ಮುಕ್ತಿನಾಥೇಶ್ವರ ದೇವಸ್ಥಾನ ಸಮೀಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ.7 ರಿಂದ 9 ರವರೆಗೆ ಮೂರು ದಿನಗಳ ಕಾಲ ಶಿವರಾತ್ರಿ ಮಹೋತ್ಸವ ನಡೆಯಲಿದ್ದು, 7 ರಂದು ಬೆಳಿಗ್ಗೆ 9 ಕ್ಕೆ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಪೂರ್ಣಕುಂಭ ಹೊತ್ತ ಮಹಿಳೆಯರು, ಗೊರವರ ಕುಣಿತ, ಟ್ರಾಶ್‍ವಾದ್ಯ, ಉರುಮೆ ಮತ್ತು ಶಾರದ ಬ್ರಾಸ್‍ಬ್ಯಾಂಡ್ ಆರ್ಕೆಸ್ಟ್ರಾ ಸಕಲ ವಾದ್ಯಗಳೊಂದಿಗೆ ಪುಷ್ಪಾಲಂಕೃತ ಬೆಳ್ಳಿ ರಥದಲ್ಲಿ ಮುಕ್ತಿನಾಥೇಶ್ವರಸ್ವಾಮಿ ಭಾವಚಿತ್ರದ ಮೆರವಣಿಗೆ ಹೊರಟು ಗಾಂಧಿವೃತ್ತ, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಜಟ್‍ಪಟ್ ನಗರದ ಮೂಲಕ ದೇವಸ್ಥಾನ ತಲುಪುವುದು.
8 ರಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳವರ ಅಮೃತ ಹಸ್ತದಲ್ಲಿ 31 ಅಡಿ ಎತ್ತರದ ಧ್ಯಾನಮಗ್ನ ಶಿವನ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ನಂತರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ. ಸಂಜೆ 6-30 ಕ್ಕೆ ಮುಕ್ತಿನಾಥೇಶ್ವರಸ್ವಾಮಿಗೆ ವಿಶೇಷ ಪೂಜೆ. ರಾತ್ರಿ 8-30 ರಿಂದ ಸಂಗೀತ ಕಾರ್ಯಕ್ರಮ, ಶಿವಭಜನೆ, 9 ರಂದು ಬೆಳಿಗ್ಗೆ 11-30 ರಿಂದ ಅನ್ನಸಂತರ್ಪಣೆಯಿರುತ್ತದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮುಕ್ತಿನಾಥೇಶ್ವರಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಎಸ್.ವಿ.ಗುರುಮೂರ್ತಿ ವಿನಂತಿಸಿದರು.
ಮುಕ್ತಿನಾಥೇಶ್ವರಸ್ವಾಮಿ ದೇವಸ್ಥಾನ ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಈ.ಅಶೋಕ್‍ಕುಮಾರ್, ಉಪಾಧ್ಯಕ್ಷ ಟಿ.ವೆಂಕಟೇಶ್‍ಬಾಬು, ಕಾರ್ಯದರ್ಶಿ ಡಿ.ರಾಜು, ಸಹ ಕಾರ್ಯದರ್ಶಿ ಆರ್.ನಾಗರಾಜ್, ಖಜಾಂಚಿ ಎಂ.ಸೋಮಪ್ಪ, ಟ್ರಸ್ಟಿಗಳಾದ ಡಿ.ತಿಮ್ಮಣ್ಣ, ಟಿ.ಎಲ್.ಮಂಜುನಾಥ್, ಹೆಚ್.ಶ್ರೀನಿವಾಸ್, ಷಣ್ಮುಖಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.