ಮಳೆಗೆ ನಲುಗಿದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ..!
ಬೆಂಗಳೂರು: ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿತ್ತು. ಅದರ ಪರಿಣಾಮ ರಾಜ್ಯದೆಲ್ಲೆಡೆ ಭೀಕರ ಬರಗಾಲವನ್ನು ಎದುರಿಸಿದಂತೆ ಆಗಿತ್ತು. ಆದರೆ ಈ ವರ್ಷ ಆರಂಭದಲ್ಲಿಯೇ ಜಲಧಾರೆಯ ಸದ್ದು ಜೋರಾಗಿದೆ. ಆದರೆ ಮೊದಲ ಮಳೆಯಿಂದಾನೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮಸ್ಯೆಗಳು ಶುರುವಾಗಿವೆ. ಜನ ಪರದಾಡುವಂತೆ ಆಗಿದೆ.
ನಿನ್ನೆ ಸುರಿದ ಬಾರೀ ಮಳೆಗೆ ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿ ಮನೆ, ಅಂಗಡಿಗಳಿಗೆ ನೀರು ತುಂಬಿದೆ. ಚರಂಡಿ ನೀರಿನಿಂದ ಮನೆಗಳು ಜಲಾವೃತಗೊಂಡಿವೆ. ಒಳಚರಂಡಿಗಳಲ್ಲಿ ಮುಕ್ಕಾಲು ಭಾಗ ಮಣ್ಣು ತುಂಬಿಕೊಂಡಿರುವ ಕಾರಣ ನೀರೆಲ್ಲ ಹರಿದು ಮನೆಯತ್ತ ಬಂದಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದಾಗಿನಿಂದ ಹಲವು ಸಮಸ್ಯೆಗಳು ಉಂಟಾಗಿವೆ ಎಂದೇ ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ರಸ್ತೆ ಅಗೆದಿರುವ ಕಾರಣ ಮಣ್ಣೆಲ್ಲ ಚರಂಡಿಗಳಲ್ಲಿ ತುಂಬಿಕೊಂಡಿದೆ. ರಸ್ತಡಗಳಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿವೆ ಎಂದು ಗೋಳು ಹೇಳಿಕೊಂಡಿದ್ದಾರೆ.
ಇನ್ನು ಚಿಕ್ಕಮಗಳೂರಿನಲ್ಲೂ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಡೂರು ತಾಲೂಕಿನ ಹೇಮಗಿರಿ ಕೆರೆಸಂತೆ ಭಾಗದಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ ಕೋಡಿ ಬಿದ್ದಿದೆ. ತುಂಬಿದ ಕೆರೆಯಿಂದ ನೀರು ಇಳಿಜಾರು ಪ್ರದೇಶಗಳಿಗೆ ಹರಿದು ಬರುತ್ತಿದೆ. ರಸ್ತೆಯಲ್ಲೆಲ್ಲಾ ನೀರು ತುಂಬಿದ್ದು, ಜನ ಓಡಾಡುವುದಕ್ಕೂ ಕಷ್ಟ ಪಡುತ್ತಿದ್ದಾರೆ. ಆರಂಭದ ಮಳೆಗೆ ಹೀಗಾದರೆ ಇನ್ನು ಮಳೆಗಾಲ ಶುರುವಾದರೆ ಇಲ್ಲಿನ ಜನರ ಸ್ಥಿತಿ ಏನಾಗಬೇಡ ಎಂಬುದೇ ಅಲ್ಲಿನ ಸ್ಥಳೀಯರ ಚಿಂತೆ.
ಇನ್ನು ಚಿತ್ರದುರ್ಗದ ಮೊಳಕಾಲ್ಮೂರು ಜಿಲ್ಲಾಸ್ಪತ್ರೆಯಲ್ಲಿ ಮಳೆಯಿಂದಾಗಿ ವಿದ್ಯುತ್ ಇಲ್ಲದೆ ರೋಗಿಗಳೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹಿರಿಯೂರು ತಾಲ್ಲೂಕಿನ ಧರ್ಮಪುರ ಅರಳಿಕೆರೆ ಸಂಪರ್ಕ ರಸ್ತೆ ಕುಸಿದಿದೆ.