ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ : ಇಸ್ರೋ ವಿಜ್ಞಾನಿ ಗೋವಿಂದರಾಜ ಭಾಗಿ
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 29 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 2024-25ನೇ ಸಾಲಿನ ‘ವಿಜ್ಞಾನ ವಸ್ತು ಪ್ರದರ್ಶನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೆಸರಾಂತ ಇಸ್ರೋ ವಿಜ್ಞಾನಿಯಾದ ಚಿತ್ರದುರ್ಗ ಗೋವಿಂದರಾಜ ಟಿ.ಎಸ್ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡುತ್ತಾ, ಗೋವಿಂದರಾಜ ಟಿ.ಎಸ್ ಇಸ್ರೋದಲ್ಲಿ ಚಂದ್ರಯಾನ 1, 2 ಮತ್ತು 3 ಸೇರಿದಂತೆ ಅನೇಕ ಬಾಹ್ಯಕಾಶ ಯೋಜನೆಗಳ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದು, ಕರ್ನಾಟಕ ರಾಜ್ಯದ ಹಾಗೂ ಭಾರತದ ಪ್ರಸ್ತುತ ವಿಜ್ಞಾನಿ ಆಗಿ ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳನ್ನು ಬಾಲ ವಿಜ್ಞಾನಿಗಳು ಎಂದು ಕರೆದರು ಹಾಗೂ ಮಕ್ಕಳು ತಯಾರಿಸಿದ ಮಾದರಿಗಳನ್ನು ಇಲ್ಲಿಗೆ ಸೀಮಿತಗೋಳಿಸದೆ ಮುಂದುವರೆಸಿ ದೊಡ್ಡ ಮಟ್ಟದಲ್ಲಿ ನೇರ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ವಿಜ್ಞಾನಿಗಳಾಗಬೇಕು, ಹಾಗೂ ವಿಜ್ಞಾನವು ನಮ್ಮ ಜೀವನವನ್ನು ಸುಗಮಗೊಳಿಸಿದೆ ಹಲವಾರು ಆವಿಷ್ಕಾರಗಳು ನಮ್ಮ ಜೀವನಕ್ಕೆ ಬೇಕಾದ ಅನುಕೂಲಕರ ವಾತಾವರಣವನ್ನು ಕಲ್ಪಿಸಿದೆ. ಆಯಾ ಕ್ಷೇತ್ರಗಳಲ್ಲಿ ಅಷ್ಟೆ ಅಲ್ಲದೇ ಪ್ರತಿಯೊಂದರಲ್ಲೂ ವಿಜ್ಞಾನ ಇದೆ. ಅಷ್ಟೇ ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ವಯಸ್ಸು ಕಲಿಯುವಂತಹ ವಯಸ್ಸಿನ ವಿದ್ಯಾರ್ಥಿಗಳಿಗೆ ಮುಖ್ಯ ಘಟ್ಟ. ಈ ಹಂತದಲ್ಲಿ ನೀವು ವಿಜ್ಞಾನದ ಬಗ್ಗೆ ಚೆನ್ನಾಗಿ ಅಭ್ಯಾಸ ಮಾಡಿದರೆ, ಮುಂದೆ ನೀವು ದೊಡ್ಡ ವಿಜ್ಞಾನಿಗಳಾಗಿ ಸಾಧನೆ ಮಾಡಬಹುದು. ಇಸ್ರೋ ಸಂಸ್ಥೆ ಇತ್ತೀಚೆಗೆ ರಾಕೇಟ್‍ಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಅಲ್ಲದೆ ಸ್ಯಾಟಲೈಟ್‍ಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಜೊತೆಗೆ ಚಂದ್ರಯಾನ 1, 2, ಮತ್ತು 3 ರ ಬಗ್ಗೆ ಆದರ ಯಶಸ್ಸಿನ ಹಿಂದಿನ ಪರಿಶ್ರಮವನ್ನು ತಿಳಿಸಿದರು. ಮುಂಬರುವ ಚಂದ್ರಯಾನ 4ರ ತಯಾರಿ, ಸಲಕರಣೆಗಳು ಹಾಗೂ ಉಡಾವಣೆ ಮಾಡಿ ಚಂದ್ರನಿಂದ 2 ಕೆ.ಜಿ. ಮಣ್ಣು ಸಂಗ್ರಹಿಸಿ ಭೂಮಿಗೆ ತಂದು ಸಂಶೋಧನೆ ಮಾಡಲು ಬೇಕಾದ ಕಾರ್ಯತಯಾರಿ ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿತ್ರದುರ್ಗದ ವಿಜ್ಞಾನ ಕ್ಲಬ್‍ನ ಕಾರ್ಯದರ್ಶಿ ಗಳಾದ ಹೆಚ್.ಎಸ್.ಟಿ ಸ್ವಾಮಿಯವರು ಮಾತನಾಡುತ್ತಾ ವಿಜ್ಞಾನ ಬಿಟ್ಟು ನಾವಿಲ್ಲ ನಮ್ಮನ್ನು ಬಿಟ್ಟು ವಿಜ್ಞಾನವಿಲ್ಲ. ಈ ನಿಟ್ಟಿನಲ್ಲಿ ಹಲವಾರು ಸಾಧನೆಗಳನ್ನು ಮಾಡಲು ಈ ಶಾಲೆ ತುಂಬ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಿ. ಅಲ್ಲದೇ ಈ ಸಂಸ್ಥೆಯು ವಿಜ್ಞಾನದ ಕಲಿಕೆಗೆ ಅವಶ್ಯಕವಾದ ಚಿತ್ರದುರ್ಗದಲ್ಲೇ ಅತೀ ದೊಡ್ಡ ಟೆಲಿಸ್ಕೋಫ್ ಹಾಗೂ ದುಬಾರಿಯಾದ ಸಲಕರಣೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಬಳಸಿಕೊಂಡು ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆಯನ್ನು ಮಾಡಿ ಜೀವನದಲ್ಲಿ ಯಶಸ್ವಿ ವಿಜ್ಞಾನಿಯಾಗಿ ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿತರಬೇಕು, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಜನಸಾಮಾನ್ಯರಿಗೆ ಉಪಯುಕ್ತವಾದ ಮಾದರಿಯನ್ನು ತಯಾರಿಸಿ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಹಿರಿಯ ವಿಜ್ಞಾನಿ ಗೋವಿಂದರಾಜ ಟಿ.ಎಸ್ ಅವರ ಸಾಧನೆಗಳನ್ನು ಹೊಗಳಿದರು. ಹಾಗೂ ಉನ್ನತ ಮಟ್ಟದ ಸಾಧನೆಯನ್ನು ಮಾಡಿದರೂ ಸರಳತೆಯ ವ್ಯಕ್ತಿತ್ವವನ್ನು ಹೊಂದಿದವರು, ವಿದ್ಯಾರ್ಥಿಗಳ ಜೊತೆಗೆ ನಮಗೂ ವಿಜ್ಞಾನದ ಬಗ್ಗೆ ಜ್ಞಾನ ತುಂಬಿದರು. ಮಕ್ಕಳಿಗಾಗಿ, ದೇಶಕ್ಕಾಗಿ, ಸಮಾಜಕ್ಕಾಗಿ ವಿಜ್ಞಾನ ಬೇಕೆ ಬೇಕು ಎಂಬ ಅರಿವು ಇರುವ ಶಾಲೆ ನಮ್ಮದು, ವಿಜ್ಞಾನಿಗಳು ಹೆಚ್ಚು ಮಾತನಾಡುವುದಿಲ್ಲ ಆದರೆ ಗೋವಿಂದರಾಜ ಟಿ.ಎಸ್ ಅವರು ನಮಗೆ ಅರ್ಥವಾಗುವಂತೆ ನಮಗೆ ತಿಳಿ ಹೇಳಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಮಾದರಿಗಳನ್ನು ತಯಾರಿಸುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪ್ರೋತ್ಸಾಹವನ್ನು ಶ್ಲ್ಲಾಘಿಸಿದರು.
ಸಂಸ್ಥೆಯ ಐಸಿಎಸ್‍ಇ ಪ್ರಾಂಶುಪಾಲರಾದ ಪಿ.ಬಸವರಾಜಯ್ಯ ಅವರು ಮಾತನಾಡುತ್ತಾ “ನೇಚರೆ ನಮ್ಮ ಟೀಚರು” ಎನ್ನುವಂತೆ ಚಂದ್ರಯಾನದ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಾ ಮಕ್ಕಳಿಗೆ ತಿಳಿಸಿದರು. ಇಸ್ರೋದ ಹೆಸರಾಂತ ಸಂಸ್ಥೆಯಲ್ಲಿ ವಿಜ್ಞಾನಿಯಾದರೂ ಇಂದು ನಮ್ಮ ಮಕ್ಕಳೊಂದಿಗೆ ಬೆರೆತು ಇಸ್ರೋದಲ್ಲಿ ಅವರ ಕಾರ್ಯದ ಬಗ್ಗೆ ಸ್ಥೂಲವಾಗಿ ತಿಳಿಸಿಕೊಟ್ಟು, ಮಕ್ಕಳಾದ ನೀವು ಕೂಡ ನಮ್ಮ ಇಸ್ರೋ ಸಂಸ್ಥೆಗೆ ಭೇಟಿ ನೀಡಿ, ಅಲ್ಲಿ ನಡೆಯುವ ಅನೇಕ ವೈಜ್ಞಾನಿಕ ಕಾರ್ಯಗಳ ಬಗ್ಗೆ ತಿಳಿದು ಭವಿಷ್ಯದಲ್ಲಿ ಯುವ ವಿಜ್ಞಾನಿಗಳಾಗಿ ಎಂದು ಆಹ್ವಾನ ನೀಡಿದ ಗೋವಿಂದರಾಜ ಟಿ.ಎಸ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ವಿಜ್ಞಾನ ವಸ್ತು ಪ್ರದರ್ಶದಲ್ಲಿ ಸುಮಾರು 350ಕ್ಕೂ ಹೆಚ್ಚಿನ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದರು. ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಶಿಕ್ಷಕರು ಹಾಗೂ ಉಪನ್ಯಾಸಕರುಗಳಾದ ಲೋಕೇಶ್ ಮಧುರೆ, ಕಿಶೋರ್ ಕುಮಾರ್, ಮಹೇಶ್ ಕಡ್ಲೆಗುದ್ದು, ಪುಷ್ಪಾಂಜಲಿ.ಹೆಚ್.ಪಿ ಅವರು ಕೂಲಂಕುಶವಾಗಿ ವೀಕ್ಷಿಸಿ ತೀರ್ಪುಗಳನ್ನು ಅಂತಿಮಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ ಪೃಥ್ವೀಶ್, ಶ್ರೀಮತಿ ಸುನಿತಾ.ಪಿ.ಸಿ, ಸಂಸ್ಥೆಯ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಐಸಿಎಸ್‍ಇ ಉಪಪ್ರಾಂಶುಪಾಲರಾದ ಅವಿನಾಶ್.ಬಿ, ಮತ್ತು ಎಲ್ಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯಾದ ಶ್ರಾವ್ಯ ಅವರು ಪ್ರಾರ್ಥಿಸಿದರು, ಶಿಕ್ಷಕರಾದ ಮೊಹಮ್ಮದ್ ಆರೀಫ್ ಸ್ವಾಗತಿಸಿದರು, ಶಿಕ್ಷಕಿ ಅಫ್ರಿನ್ ಸಬಾ ವಂದಿಸಿದರು, ಅಕ್ಷತಾ ಕೆ.ವಿ ನಿರೂಪಿಸಿದರು.