ರೇಖಲಗೆರೆ ಲಂಬಾಣಿ ಹಟ್ಟಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ | ಇವಿಎಂ ನಲ್ಲಿ ವೋಟ್ ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು
ಸುದ್ದಿಒನ್, ಚಳ್ಳಕೆರೆ, ಜುಲೈ. 10 : ತಾಲ್ಲೂಕಿನ ನಾಯಕನ ಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲಾ ಸಂಸತ್ ಚುನಾವಣೆಯಲ್ಲಿ ಮೊಬೈಲ್ ಅಪ್ಲಿಕೇಶನ್ ನಲ್ಲಿರುವ ವೋಟಿಂಗ್ ಮೆಷಿನ್ ನಲ್ಲಿ ಸ್ವತಃ ನೀಲಿ ಬಟನ್ ಒತ್ತುವುದರ ಮೂಲಕ ತಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾಯಿಸಿ ಸಂಭ್ರಮಿಸಿದರು.
ಇಂದು ಶಾಲಾ ಸಂಸತ್ ರಚನೆಗಾಗಿ ಇಲ್ಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾಗಭೂಷಣ್ ಇವರ ನೇತೃತ್ವದಲ್ಲಿ ಚುನಾವಣೆ ಕಾರ್ಯಕ್ರಮವನ್ನು ಯಥಾವತ್ತಾಗಿ ಸಾರ್ವತ್ರಿ ಚುನಾವಣೆ ಹೇಗೆ ನಡೆಯುತ್ತದೆಯೋ ಅದೇ ರೀತಿಯಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ಮಾಡಿ ಇಲ್ಲಿನ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಯಶಸ್ವಿಯಾಗಿದ್ದಾರೆ.
ಶಾಲಾ ಸಂಸತ್ ಚುನಾವಣೆಯನ್ನು ವಿನೂತನ ರೀತಿಯಲ್ಲಿ ಕೈಗೊಂಡು ಇತರ ಶಾಲೆಗಳಿಗೆ ಮಾದರಿಯಾಗಿದೆ.
ಚುನಾವಣೆಯ ಪ್ರಕ್ರಿಯೆಯಲ್ಲಿ ಅಳವಡಿಸಲಾಗಿದ್ದ ಹಂತಗಳು :
* ಚುನಾವಣೆಗಾಗಿ ನೋಟೀಸು
* ಚುನಾವಣಾ ವೇಳಾಪಟ್ಟಿ
* ನಾಮ ಪತ್ರ ಸಲ್ಲಿಕೆ
* ನಾಮ ಪತ್ರಗಳ ಪರಿ ಶೀಲನೆ
* ನಾಮ ಪತ್ರಗಳ ಹಿಂತೆಗೆದುಕೊಳ್ಳುವಿಕೆ
* ಸ್ಪರ್ಧಿಸುವ ವಿದ್ಯಾರ್ಥಿಗಳ ಪಟ್ಟಿ
* ಚಿಹ್ನೆಗಳ ಹಂಚಿಕೆ
* ಮತ ಯಾಚನೆ
* ಪ್ರಿಸೈಡಿಂಗ್ ಅಧಿಕಾರಿಗಳ ಮತ್ತು ಸಿಬ್ಬಂದಿ ನೇಮಕಾತಿ
* ಬ್ಯಾಲೆಟ್ ನಮೂನೆ ಮತ್ತು ಇವಿಎಂ ಮೊಬೈಲ್ ಯಂತ್ರ
* ವೋಟರ್ಸ್ ಸ್ಲಿಪ್ಸ್
* ವೋಟಿಂಗ್ ಕಂಪರ್ಟ್ಮೆಂಟ್
* ಮತದಾನ
* ಮತದಾನ ಮುಕ್ತಾಯ
* ಮತಗಳ ಎಣಿಕೆ
* ಚುನಾವಣಾ ಫಲಿತಾಂಶದ ಘೋಷಣೆ
* ಶಾಲಾ ಸಂಸತ್ ನ ಮಂತ್ರಿ ಮಂಡಲ ರಚನೆ
* ಪ್ರಮಾಣ ವಚನ ಸ್ವೀಕಾರ.
ಈ ರೀತಿ ಎಲ್ಲಾ ಹಂತಗಳನ್ನು ಒಳಗೊಂಡ ಶಾಲಾ ಸಂಸತ್ತು ರಚನೆಯನ್ನು ಕೈಗೊಂಡಾಗ ವಿದ್ಯಾರ್ಥಿಗಳಲ್ಲಿ ಚುನಾವಣಾ ಪ್ರಕ್ರಿಯೆಗಳ ಹೇಗೆ ನಡೆಯುತ್ತವೆ, ಭವಿಷ್ಯದ ಪ್ರಜೆಯಾಗಿ ನನ್ನ ಕರ್ತವ್ಯಗಳು ಹಾಗೂ ಹಕ್ಕುಗಳನ್ನು ತಿಳಿದುಕೊಂಡು ಸಮಾಜದ ಬದಲಾವಣೆಗೆ ನನ್ನ ಪಾತ್ರವೇನು ? ಎನ್ನುವ ನಿಟ್ಟಿನಲ್ಲಿ ಆಲೋಚನಾ ಲಹರಿಗಳು ಮೂಡುತ್ತವೆ.
ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ಸಂವಿಧಾನಾತ್ಮಕವಾಗಿ ಚುನಾವಣೆಯ ಕುರಿತು ತಿಳುವಳಿಕೆ ಹೊಂದುವುದು ಅತ್ಯಗತ್ಯವಾಗಿದೆ,ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶಾಲಾ ಸಂಸತ್ತು ರಚನೆಯ ಪ್ರಕ್ರಿಯೆಗಳನ್ನು ತಿಳಿಸುವುದರಿಂದ ಭವಿಷ್ಯದ ಪ್ರಜೆಗಳಾಗಿ ಹೊರ ಹೊಮ್ಮಿ ಉತ್ತಮ ಪ್ರಜೆಗಳು ಆಗುವಲ್ಲಿ ಇದು ಸಹಕಾರಿ ಎಂದು ಮುಖ್ಯ ಶಿಕ್ಷಕ ವೆಂಕಟೇಶ್ ತಿಳಿಸಿದರು.
ಶಿಕ್ಷಕ ನಾಗಭೂಷಣ್ ಮಾತನಾಡಿ ಬದಲಾದ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಪ್ರಯೋಗದ ಮೂಲಕ ತಿಳಿಸಿದಾಗ ಸುಲಭವಾಗಿ ಸಮಾಜದ ಪ್ರಚಲಿತ ಘಟನೆಗಳು ಹಾಗೂ ಪಠ್ಯಕ್ಕೆ ಪೂರಕವಾದ ಜ್ಞಾನವನ್ನು ಪಡೆಯವಲ್ಲಿ ಹೆಚ್ಚಿನ ಉತ್ಸಾಹ ಮೂಡಿಸುತ್ತದೆ ಎಂದು ಹೇಳಿದರು.
ಹರ್ಷಗೊಂಡ ಅಭ್ಯರ್ಥಿಗಳು : ಇವಿಎಂ ಮೆಷಿನ್ ನಲ್ಲಿ ತಮ್ಮ ಕ್ರಮ ಸಂಖ್ಯೆ, ಹೆಸರು, ಹೆಸರಿನ ಮುಂದೆ ಅವರ ಭಾವಚಿತ್ರಗಳು ತಾವೇ ಆಯ್ಕೆ ಮಾಡಿಕೊಂಡ ಚಿಹ್ನೆ,ಅದರ ಮುಂದೆ ವೋಟ್ ಮಾಡಲು ಒತ್ತುವ ನೀಲಿ ಬಟನ್ ಇವುಗಳನ್ನು ನೋಡಿ ಫುಲ್ ಧಿಲ್ ಕುಷ್ ಆಗಿ ಚುನಾವಣೆ ಪ್ರಕ್ರಿಯೆಗಳನ್ನು ತಾವೇ ಸ್ವತಃ ಅನುಭವಿಸಿ ಕಲಿತುಕೊಂಡು ಕುಣಿದು ಕುಪ್ಪಳಿಸಿದರು.
ಚುನಾವಣಾ ತಂತ್ರಗಳನ್ನು ಅರಿತ ವಿದ್ಯಾರ್ಥಿ ಮತದಾರ :
ಹೌದು...ವಿದ್ಯಾರ್ಥಿಗಳು ಒಬ್ಬ ಅಭ್ಯರ್ಥಿಗೆ ಎಷ್ಟು ಮತ ಚಕಾಯಿಸ ಬೇಕೆಂಬುದನ್ನು ತಿಳಿದು ನಂತರ ಗೌಪ್ಯ ಮತದಾನ ಮಾಡುವಾಗ ಕೆಲವರು ತಮ್ಮ ಜಾಣ್ಮೆಯ ಕೌಶಲ್ಯಗಳನ್ನು ತೋರಿ ಬಹಳ ವಿವೇಕದಿಂದ ಉತ್ತಮ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಲ್ಲಿ ತಂತ್ರಗಾರಿಕೆಯನ್ನು ಮೆರೆದದ್ದು ನಿಜಕ್ಕೂ ಫಲಿತಾಂಶದಲ್ಲಿ ಅಚ್ಚರಿ ಮೂಡಿಸಿತು.
ಕುತೂಹಲ ಭರಿತರಾದ ವಿದ್ಯಾರ್ಥಿ ಪೋಷಕರು : ನಾಮ ಪತ್ರ ಸಲ್ಲಿಕೆಯಿಂದ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಚುನಾವಣಾ ಕುರಿತು ಮಾಡಿಕೊಳ್ಳುತ್ತಿದ್ದ ತಯಾರಿ ನೋಡಿ ಇದೇನಿದು ದೊಡ್ಡವರ ಚುನಾವಣೆಯಂತೆ ಪ್ರತಿ ಹಂತವನ್ನು ಕೂಡ ನಮ್ಮ ಮಕ್ಕಳು ಕಲಿಯುತ್ತಿದ್ದಾರೆ ಎಂದು ಗಮನಿಸಿ ಕುತೂಹಲ ಭರಿತರಾಗಿ ಶಾಲೆಗೆ ಸ್ವತಃ ಆಗಮಿಸಿ ಕಣ್ಣಾರೆ ಮತದಾನದ ಪ್ರಕ್ರಿಯೆಯನ್ನು ಗಮನಿಸಿ ಹೆಮ್ಮೆ ಪಟ್ಟರು...ಗೆದ್ದ ವಿದ್ಯಾರ್ಥಿಗಳು ಚುನಾವಣಾ ಪತ್ರಗಳನ್ನು ಪಡೆದು ಸಂತಸ ಪಟ್ಟರು.
ಪ್ರಮಾಣ ವಚನ ಸ್ವೀಕಾರ ಮಾಡಿದ ಚುನಾಯಿತ ವಿದ್ಯಾರ್ಥಿಗಳು :
ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳು ಬಹಳ ಖುಷಿಯಿಂದ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು.
ಪ್ರಮಾಣ ವಚನ :
ಕುಮಾರ/ಕುಮಾರಿ ……………….ಎಂಬ ಹೆಸರಿನ ನಾನು…………………………….. ಇವರ ಮಗನಾಗಿದ್ದು/ ಮಗಳಾಗಿದ್ದು ಶಾಲಾ ಸಂಸತ್ ಚುನಾವಣೆಯಲ್ಲಿ ಚುನಾಯಿತನಾ/ಳಾಗಿದ್ದು ಕಾನೂನಿನ ಮೂಲಕ ಸ್ಥಾಪಿತವಾದ ನನ್ನ ಶಾಲೆಗೆ ಅಧೀನನಾಗಿ/ಳಾಗಿ ಸತ್ಯ, ಶ್ರದ್ಧೆ ಹಾಗೂ ನಿಷ್ಠೆಯನ್ನು ಹೊಂದಿರುತ್ತೇನೆಂದೂ, ಶಾಲೆಯ ಮತ್ತು ವಿದ್ಯಾರ್ಥಿಗಳ ಪ್ರಗತಿಗಾಗಿ ನಾನುಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ಸರಸ್ವತಿ ಮಾತೆಯ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸುತ್ತಿದ್ದೇನೆ.
ಎಂದು ಹೇಳಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು.ಈ ಸಂದರ್ಭದಲ್ಲಿ
ಪ್ರಮಾಣ ವಚನವನ್ನು ವಿದ್ಯಾರ್ಥಿಗಳಿಗೆ, ಮುಖ್ಯ ಶಿಕ್ಷಕರು ಬೋಧಿಸಿದರು.
ಒಟ್ಟಾರೆಯಾಗಿ ಶಾಲೆಯಲ್ಲಿ ನಡೆದ ಸಂಸತ್ ಚುನಾವಣೆಯು ಪ್ರತಿ ವಿದ್ಯಾರ್ಥಿಗಳಲ್ಲಿ ವಿನೂತಾನವಾದ ಅನುಭವ, ಮತದಾನ ಮಾಡುವ ವಿಧಾನ, ಪ್ರಕ್ರಿಯೆಗಳು ಯಾವುವು? ಗೆದ್ದ ನಂತರ ಜವಾಬ್ದಾರಿ ಕರ್ತವ್ಯಗಳು ಹೇಗೆ ಇರುತ್ತವೆ ಎಂಬ ಅನೇಕ ಮಾಹಿತಿಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಅತೀ ಹೆಚ್ಚು ಪರಿಣಾಮಕಾರಿಯಾಗಿತ್ತು.
ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕ ವೆಂಕಟೇಶ್,ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಂಗನಾಥ್, ನಾಗಭೂಷಣ್, ಎಸ್ಡಿಎಂಸಿ ಅಧ್ಯಕ್ಷ ಜಯಣ್ಣ, ಶಿಕ್ಷಕರಾದ ಜಗದೀಶ್,ವೀರಭದ್ರಪ್ಪ,ನಾಗರಾಜ್, ಶಿವಕುಮಾರ್ ,ರಂಜಿತ, ರಮ್ಯ, ಅಫ್ರಿದಿ,ವಿದ್ಯಾರ್ಥಿಗಳು,ಪೋಷಕರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.