ಪರಿಶಿಷ್ಟರ ಹಣ ಅನ್ಯ ಉದ್ದೇಶಕ್ಕೆ ಬಳಕೆ ಬೇಡ : ಮಾಜಿ ಸಚಿವ ಎಚ್.ಆಂಜನೇಯ
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.14 : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜಾರಿಗೆ ತಂದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಕಠಿಣ ಆದೇಶ ಹೊರಡಿಸುವ ತುರ್ತು ಅಗತ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘ ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭವನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಕಾಯ್ದೆಯ ಮೂಲ ಆಶಯ ಎಸ್ಸಿ-ಎಸ್ಟಿ ಜನರ ಸಮಗ್ರ ಅಭಿವೃದ್ಧಿ ಆಗಿದೆ. ಎಸ್ಸಿ, ಎಸ್ಟಿ ಜನರು ವಾಸಿಸುವ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಲಾಗಿದೆ. ಆದರೆ, ಕಳೆದ ಸರ್ಕಾರದ ಅವಧಿಯಲ್ಲಿ ಈ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಜಾತಿ ಜನರು ವಾಸಿಸುವ, ವಾಣೀಜ್ಯ ಪ್ರದೇಶದ ಅಭಿವೃದ್ಧಿಗೆ ಬಳಸಲಾಗಿದೆ. ಜತೆಗೆ ಅನ್ಯ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ ಎಂದು ಬೇಸರಿಸಿದರು.
ಶ್ರೀಮಂತರ ಬಡಾವಣೆ, ವ್ಯಾಪಾರಸ್ಥರ ಅನುಕೂಲಕ್ಕಾಗಿ ಎಸ್‌ಎಸಿಎಸ್‌ಪಿ-ಟಿಎಸ್‌ಪಿಯ ಕೋಟ್ಯಾಂತರ ರೂಪಾಯಿ ಹಣವನ್ನು ಬಳಕೆ ಮಾಡಿ, ಪರಿಶಿಷ್ಟರಿಗೆ ಅನ್ಯಾಯ ಮಾಡಲಾಗಿದೆ. ಜೊತೆಗೆ ಪ್ಯಾಕೇಜ್ ಹೆಸರಲ್ಲಿ ಟೆಂಡರ್ ಪದ್ಧತಿ ಜಾರಿಗೆ ತಂದು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡಲಾಗಿದೆ ಎಂದು ದೂರಿದರು.
ಇದಕ್ಕೆ ಕಡಿವಾಣ ಹಾಕಲು ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 50 ಲಕ್ಷದವರೆಗೆ ಎಸ್ಸಿ-ಎಸ್ಟಿ ಜನರಿಗೆ ಗುತ್ತಿಗೆ ನೀಡುವ ಪದ್ಧತಿ ಜಾರಿಗೆ ತಂದರು. ಪ್ರಸ್ತುತ ಅದನ್ನು 1 ಕೋಟಿ ರೂಪಾಯಿಗೆ ಹೆಚ್ಚಿಸಿ ನಾನೊಬ್ಬ ದಲಿತ ಪರ, ನೊಂದ ಜನರ ಧ್ವನಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದ ಆಂಜನೇಯ, ಈ ಗುತ್ತಿಗೆ ಮೊತ್ತವನ್ನು 2 ಕೋಟಿ ರೂಪಾಯಿಗೆ ಹೆಚ್ಚಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಮೂಲ ಆಶಯಕ್ಕೆ ಸಣ್ಣ ದಕ್ಕೆ ಉಂಟಾಗದಂತೆ ಹಾಗೂ ಈ ಅನುದಾನವನ್ನು ದುರ್ಬಳಕೆ ಮಾಡುವ ಅಧಿಕಾರಿ ವರ್ಗದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು ಆದೇಶ ಹೊರಡಿಸುವುದು ತುರ್ತು ಅಗತ್ಯವಿದೆ ಎಂದರು.
ಶೋಷಿತರು ತಮ್ಮ ಸಮುದಾಯದ ಕುರಿತು ಮಾನವೀಯ ಗುಣ ಬೆಳೆಸಿ ಕೊಳ್ಳಬೇಕು. ಆದರೆ ಈಚೆಗೆ ಶೋಷಣೆ ಮಾಡುತ್ತಿರುವುದು ನೋವಿನ ವಿಷಯ. ಇಂತಹ ನಡೆ ಕೈಬಿಟ್ಟು ಒಗ್ಗೂಡಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸಂಘದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಮಹಾದೇವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ವಿಧಾನಪರಿಷತ್ ಸದಸ್ಯ ನಸೀರ್ ಅಹಮ್ಮದ್, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್, ಸಹ ಪ್ರಾಧ್ಯಾಪಕ ಪ್ರದೀಪ್ ರಮಾವತ್, ಸುಪ್ರೀಂ ಕೋರ್ಟ್ ನ್ಯಾಯವಾದಿ ಚೈನಾ ಕೊಠಾರಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಚ್.ಆಂಜನೇಯ ಅವರನ್ನು ಸಂಘದ ಪದಾಧಿಕಾರಿಗಳು, ಗಣ್ಯರು ಸನ್ಮಾನಿಸಿದರು.