ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಿ ಪೋಷಿಸಬೇಕು : ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ
ಸುದ್ದಿಒನ್, ಮೊಳಕಾಲ್ಮೂರು, ಫೆಬ್ರವರಿ. 25 : ಇತ್ತೀಚಿನ ದಿನಗಳಲ್ಲಿ ಅನೇಕ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಗ್ರಾಮೀಣ ಆಟಗಳಿಂದ ಆರೋಗ್ಯ ವೃದ್ದಿಯಾಗುತ್ತದೆ ಹಾಗಾಗಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಿ ಪೋಷಿಸಬೇಕಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ಮೊಳಕಾಲ್ಮೂರು ತಾಲೂಕಿನ ರಾಂಪುರದ ಎಸ್ ಜಿ ಎಂ ವಿದ್ಯಾಪೀಠ ಕಾಲೇಜು ಆವರಣದಲ್ಲಿ ಫೆ. 25 ರ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಚಿತ್ರದುರ್ಗ ಜಿಲ್ಲಾ ಯುವಜನ ಒಕ್ಕೂಟ, ಶ್ರೀ ಗುರು ಮುದುಕೇಶ್ವರ ವಿದ್ಯಾಪೀಠ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊಳಕಾಲ್ಮೂರು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಮಾತನಾಡಿದರು.
‘ಗ್ರಾಮೀಣ ಆಟಗಳನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಸರ್ಕಾರ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳಿಂದ ವಿವಿಧ ಕ್ರೀಡೆಗಳನ್ನು ನಡೆಸಿ ಅಲ್ಲಿ ವಿಜೇತರಾದವರನ್ನು ತಾಲ್ಲೂಕು ಮಟ್ಟದಲ್ಲಿ, ನಂತರ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕ್ರೀಡೆ ನಡೆಸಲಾಗುತ್ತದೆ’
ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದಿಂದ ಯಾವುದೇ ಕಾರ್ಯಕ್ರಮ ಮಾಡಿದರೂ ನಾವು ಸಹಕಾರ ನೀಡುತ್ತೇನೆ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಪರಿಸರ ಉಳಿಸುವ ಕಾರ್ಯಕ್ರಮಗಳನ್ನು ಮಾಡೋಣ ಎಂದರು.
ಸಮಾರಂಭ ಉದ್ಘಾಟಿಸಿದ ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಟಿ.ನಾಗವೇಣಿ ರವಿಶಂಕರ್ ಮಾತನಾಡಿ,
ಕ್ರೀಡೆಗಳನ್ನು ಆಡುವುದರಿಂದ ದೈಹಿಕ ಸಾಮರ್ಥ್ಯ ಹಾಗೂ ಮನಸ್ಸಿನ ಸ್ವಾಸ್ಥ ಕಾಪಾಡಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ನೀವು ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ನಮ್ಮ ಸಹಕಾರ ಇರುತ್ತದೆ. ಮಕ್ಕಳಿಗೆ ಕ್ರೀಡೆ ಹೆಚ್ಚು ಸಹಕಾರಿ ಎಂದರು.
ಬಹುಮಾನ ವಿತರಿಸಿ ಮಾತನಾಡಿದ ಕರ್ನಾಟಕ ಯುವಜನ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷರು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಚಿತ್ತಪ್ಪ ಯಾದವ್ ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕಿದೆ. ಇದರಿಂದಾಗಿ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ. ಯುವ ಪ್ರಾಧಿಕಾರ ರಚಿಸುವ ಮೂಲಕ ಯುವಕ ಸಂಘ, ಮಹಿಳಾ ಮಂಡಳಿ, ಹವ್ಯಾಸಿ ಕಲಾ ಸಂಘಗಳ ಬಗ್ಗೆ ಸರ್ಕಾರ ಚಿಂತಿಸಬೇಕು. ಮಹಿಳೆಯರಿಗೆ ಉಚಿತ ಬಸ್ ಕೊಟ್ಟಂತೆ ಯುವ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್ ಪಾಸ್ ಕೊಡಲಿ ಎಂದರು.
ರಾಂಪುರದ ರುದ್ರಾಕ್ಷಿ ಮಠದ ಎಸ್.ಜಿ.ಎಂ.ವಿದ್ಯಾಪೀಠ ಕಾರ್ಯದರ್ಶಿ ಡಾ.ಶ್ರೀ ಬಿ.ವೀರಭದ್ರಯ್ಯ ನವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿಗಳಾದ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಧರ್ಮದರ್ಶಿ ಟಿ.ರುದ್ರಮುನಿ, ಮಾತನಾಡಿ, ವಿದ್ಯಾರ್ಥಿಗಳಿಗೆ ಅಧ್ಯಯನ ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೇ ಪ್ರಾಮುಖ್ಯತೆ. ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಕ್ರೀಡೆಯಿಂದ ಸಾದ್ಯ. ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನವು ಸದಾ ನಿಮ್ಮೊಂದಿಗೆ ಇರಲಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಯುವಜನ ಒಕ್ಕೂಟದ ಕಾರ್ಯದರ್ಶಿ ಮಾಲತೇಶ್ ಅರಸ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕ್ರೀಡೆ ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ. ಇದನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದಾಗ ಹಿಗ್ಗುವುದು ಸೋತಾಗ ಕುಗ್ಗುವಂತಹ ಕೆಲಸ ಆಗಬಾರದು. ಕ್ರೀಡೆಗಳು ಉನ್ನತ ಮಟ್ಟದ ವ್ಯಕ್ತಿತ್ವ ರೂಪಿಸುತ್ತದೆ. ಕ್ರೀಡೆಯಿಂದಲೇ ಕೆಲವೊಮ್ಮೆ ಸರಕಾರಿ ಉದ್ಯೋಗ ಕೂಡ ಲಭಿಸುತ್ತಿದೆ. ಆರೋಗ್ಯ ಕೂಡ ಸರಿಯಾಗಿ ಇರುತ್ತದೆ. ಹೀಗಾಗಿ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು, ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಹಿರಿಯೂರು ಲಕ್ಷ್ಮಿದೇವಿ, ಶ್ರೀ ಮುದುಕೇಶ್ವರ ವಿದ್ಯಾಪೀಠದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಸವರಾಜಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಅಜೇಯ್ ಕುಮಾರ್, ಪಿಯು ಕಾಲೇಜು ಪ್ರಾಚಾರ್ಯರಾದ ಡಿ. ಶಿವಪ್ಪ ಭಾಗವಹಿಸಿದ್ದರು.
ತೀರ್ಪುಗಾರರಾಗಿ, ಅಬ್ರಹಾಂ, ಶಂಕರ್ ಪಾಟೀಲ, ಶರಣಪ್ಪ, ವಿದ್ಯಾಪೀಠದ ದೈಹಿಕ ಶಿಕ್ಷಕ ಮಹಂತೇಶ್ ಇದ್ದರು.