ಭರವಸೆ ಕೊಟ್ಟಂತೆ ನಡೆದುಕೊಳ್ಳಲು ಆಗದಿದ್ದಲ್ಲಿ ರಾಜೀನಾಮೆ ನೀಡಿ : ಕಾಂಗ್ರೆಸ್ ನಾಯಕರಿಗೆ ಸಂಸದ ಕಾರಜೋಳ ಸವಾಲು
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ಒಂದು ವರ್ಷದ ಕಾಂಗ್ರೆಸ್ ಸರ್೬ ಆಡಳಿತದಲ್ಲಿ ರಾಜ್ಯವನ್ನು 10 ವರ್ಷ ಹಿಂದಕ್ಕೆ ಕೊಂಡೊಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ಭರವಸೆ ಕೊಟ್ಟಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಮತ್ತೊಮ್ಮೆ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬನ್ನಿ ಎಂದು ಸಂಸದ ಗೋವಿಂದ ಕಾರಜೋಳ ಸವಾಲು ಹಾಕಿದ್ದಾರೆ.
ಗ್ಯಾರಂಟಿ ಯೋಜನೆ ಕಡಿತಕ್ಕೆ ಸಚಿವರಿಂದ ಒತ್ತಡ ವಿಚಾರಕ್ಕೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷದ ಮೋಸದಾಟ ನಡೆಯೋದಿಲ್ಲ. ಮೋಸ ಮಾಡಿದರೆ ನಮ್ಮ ಪಕ್ಷ ಹೋರಾಟಕ್ಕೆ ತೀರ್ಮಾನಿಸಲಿದೆ. ಚುನಾವಣೆ ಪೂರ್ವ ಗ್ಯಾರಂಟಿ ಘೋಷಣೆ ವೇಳೆ ಗೊತ್ತಿರಲಿಲ್ಲವೇ ? ಅಭಿವೃದ್ಧಿಗೆ ತೊಂದರೆ ಆಗುತ್ತದೆಂದು ತಿಳಿದಿರಲಿಲ್ಲವೇ ? ಲೋಕಸಭೆ ಚುನಾವಣೆ ವೇಳೆಯೂ ಮಹಿಳೆಯರಿಗೆ 1 ಲಕ್ಷ ಘೋಷಣೆ ಮಾಡಿದ್ದರು. ಸುಳ್ಳು ಹೇಳುವುದು, ಮೋಸದಾಟ ನಡೆಯೋದಿಲ್ಲ. ಬಡತನದ ಜನ ಸರ್ಕಾರದ ಸವಲತ್ತು ಕೇಳುತ್ತಾರೆ. ಶೋಷಿತರಿಗೆ ಶಿಕ್ಷಣ ಸೇರಿ ವಿವಿಧ ಸವಲತ್ತು ನೀಡಬೇಕಾಗುತ್ತದೆ. ಹಿಂದುಳಿದ ವರ್ಗದ ಚಾಂಪಿಯನ್ ಎಂದು ಸಿದ್ಧರಾಮಯ್ಯ ಹೇಳಿಕೊಳ್ಳುತ್ತಾರೆ
ಅಹಿಂದ ವರ್ಗದ ಏಳ್ಗೆಗೆ ಕಟಿಬದ್ಧರಾಗಿರಬೇಕು. ಬಡವರ ಪರ ಯಾವುದೇ ಯೋಜನೆ ನಿಲ್ಲಿಸಬಾರದು ಎಂದಿದ್ದಾರೆ.
ಎಸ್ಸಿ, ಎಸ್ಟಿ ಒಳಮೀಸಲಾತಿ ವರ್ಗೀಕರಣ ವಿಚಾರವಾಗಿ ಮಾತನಾಡಿ, ಎಐಸಿಸಿ ಅದ್ಯಕ್ಷ ಖರ್ಗೆ ಗೊಂದಲ ಸೃಷ್ಠಿಸಬಾರದು ಮತಬ್ಯಾಂಕ್ ರಾಜಕಾರಣಕ್ಕಾಗಿ ಅನುಷ್ಠಾನಕ್ಕೆ ತರದಿರಲು ಪ್ರಯತ್ನ ಆಗ್ತಿದೆ. ಶೋಷಿತ ಜನ ಮುಂದುವರೆದರೆ 'ಕೈ' ಮತಬ್ಯಾಂಕ್ ಕಡಿತದ ಭಯ ಇದೆ. ಕೆನೆ ಪದರ ಬಗ್ಗೆ ಪ್ರಸ್ತಾಪಿಸಿ ಖರ್ಗೆರಿಂದ ಗೊಂದಲ ಸೃಷ್ಠಿಯಾಗಿದೆ. ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಒಳ ಮೀಸಲಾತಿ ಜಾರಿಗೆ ಸೂಚಿಸಿದೆ. ಕೆನೆ ಪದರ ಬಗ್ಗೆ ಪ್ರಾಸಂಗಿಕವಾಗಿ ಸಲಹೆ ನೀಡಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಖರ್ಗೆ ಸೂಚನೆ ನೀಡಲಿ. ಕೂಡಲೇ ಒಳ ಮೀಸಲಾತಿ ಜಾರಿಗೆ ಸೂಚನೆ ನೀಡಲಿ. ಕಾಂಗ್ರೆಸ್ ಸಿಎಂಗಳ ಸಭೆ ಕರೆದು ಈ ಬಗ್ಗೆ ಸೂಚನೆ ನೀಡಲಿ. 101ಜಾತಿಗೆ ಅನುಕೂಲ ಆಗುವ ಕಾರ್ಯ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.