Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಶೀಘ್ರ ನೋಂದಣಿ ಪ್ರಾರಂಭ : ದಿವ್ಯಪ್ರಭು ಜಿ.ಆರ್.ಜೆ.

01:33 PM Nov 30, 2023 IST | suddionenews
Advertisement

ಚಿತ್ರದುರ್ಗ. ನ.30: ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಖರೀದಿ ಮಾಡಲು ರೈತರ ನೊಂದಣಿ ಪ್ರಕ್ರಿಯೆಯನ್ನು ಶೀಘ್ರ ಪ್ರಾರಂಭಿಸಲಾಗುವುದು, ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ನಮೂದನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.

Advertisement

 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಸ್ತಕ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು, ಖರೀದಿ ಕೇಂದ್ರ ತೆರೆಯುವ ಬಗ್ಗೆ ಪೂರ್ವಸಿದ್ಧತೆಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಪ್ರಸಕ್ತ ಸಾಲಿಗೆ ರಾಗಿ ಬೆಳೆಗೆ ಪ್ರತಿ ಕ್ವಿಂಟಾಲ್‍ಗೆ 3846 ರೂ. ಬೆಂಬಲ ಬೆಲೆ ಘೋಷಿಸಿದೆ.  ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಟ 20 ಕ್ವಿಂ. ರಾಗಿ ಖರೀದಿಸಲು ಅವಕಾಶವಿದೆ.  ಬೆಂಬಲ ಬೆಲೆಯಡಿ ರಾಗಿ ಖರೀದಿಗಾಗಿ ರೈತರ ನೊಂದಣಿ ಕಾರ್ಯ ಶೀಘ್ರ ಆರಂಭಿಸಲಾಗುವುದು.

Advertisement

ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸಂದರ್ಭದಲ್ಲಿ ಉಂಟಾದ ಗೊಂದಲ, ಅಕ್ರಮ ಹಾಗೂ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಅಂತಹ ತಪ್ಪುಗಳು ಹಾಗೂ ಗೊಂದಲ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು.

ರೈತರ ನೊಂದಣಿ ಸಂದರ್ಭದಲ್ಲಿಯೇ ಅವರಿಗೆ ರಾಗಿ ಬೆಳೆಯನ್ನು ಎಪಿಎಂಸಿ ಗೆ ತರುವ ದಿನಾಂಕ ಹಾಗೂ ಸಮಯವನ್ನು ನಮೂದಿಸಿ ಟೋಕನ್ ನೀಡುವ ವ್ಯವಸ್ಥೆ ತರಲಾಗುವುದು.

ಈ ಬಾರಿ ಹೊಸದುರ್ಗದಲ್ಲಿ 02, ಶ್ರೀರಾಂಪುರದಲ್ಲಿ 02, ಚಿತ್ರದುರ್ಗ-01 ಹಾಗೂ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರಿನಲ್ಲಿ 01 ಸೇರಿದಂತೆ ಒಟ್ಟು 06 ಖರೀದಿ ಕೇಂದ್ರಗಳನ್ನು ಎಪಿಎಂಸಿ ಗಳಲ್ಲಿ ಪ್ರಾರಂಭಿಸಲಾಗುವುದು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಜಿಲ್ಲೆಗೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಏಜೆನ್ಸಿಯಾಗಿ ಸರ್ಕಾರ ನಿಗದಿಪಡಿಸಿದೆ ಎಂದರು.

ಫ್ರುಟ್ಸ್ ನಲ್ಲಿ ಬೆಳೆ ತಿದ್ದುಪಡಿ ಮಾಡಿದಲ್ಲಿ ಎಫ್‍ಐಆರ್ : ಫ್ರುಟ್ಸ್ ತಂತ್ರಾಂಶದ ಬೆಳೆ ಮಾಹಿತಿ ಆಧಾರದ ಮೇಲೆ ರಾಗಿ ಖರೀದಿಸಲಾಗುವುದು. ಈ ಹಿನ್ನಲೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಫ್ರುಟ್ಸ್ ತಂತ್ರಾಂಶದಲ್ಲಿ ವಿವರ ನಮೂದಿಗೆ ಅವಕಾಶವಿದೆ.  ಕಳೆದ ಬಾರಿ ರಾಗಿ ಬೆಳೆಯದಿರುವವರಿಗೂ ಫ್ರುಟ್ಸ್ ತಂತ್ರಾಂಶದಲ್ಲಿ ಬೆಳೆ ಬದಲಾವಣೆ ಮಾಡಿರುವುದು ಕಂಡುಬಂದಿದ್ದು, ಹೀಗಾಗಿ ಈ ಬಾರಿ ಬೆಳೆ ಸಮೀಕ್ಷೆ ಸಂದರ್ಭದಲ್ಲಿ ದಾಖಲಿಸಿಕೊಂಡಿರುವ ದತ್ತಾಂಶವನ್ನು ಪರಿಗಣಿಸಿಕೊಂಡು, ಬೆಳೆ ವಿವರ ಪರಿಶೀಲಿಸಲಾಗುವುದು.  ಮನಬಂದಂತೆ ಫ್ರುಟ್ಸ್ ತಂತ್ರಾಂಶದಲ್ಲಿ ಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿ ಅಕ್ರಮವಾಗಿ ಬೆಳೆ ತಿದ್ದುಪಡಿ ಮಾಡಿರುವುದು ಕಂಡುಬಂದಲ್ಲಿ, ಅಂತಹ ಪ್ರಕರಣಗಳಲ್ಲಿ ಯಾರ ಲಾಗಿನ್ ನಿಂದ ಈ ತಿದ್ದುಪಡಿ ಆಗಿದೆ ಎಂಬುದನ್ನು ಗುರುತಿಸಿ, ಅಂತಹ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಿ ಅಮಾನತುಗೊಳಿಸಲಾಗುವುದು ಎಂದು  ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

484 ರೈತರ ಬಾಕಿ ಮೊತ್ತ ಶೀಘ್ರ ಪಾವತಿ :
ಕಳೆದ ಬಾರಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿದ ರೈತರ ಪೈಕಿ ಈಗಾಗಲೆ ಮೊತ್ತ ಪಾವತಿಯಾಗಿದೆ, ಆದರೆ ವಿವಿಧ ಸಮಸ್ಯೆಯ ಕಾರಣ ಸುಮಾರು 484 ಕ್ಕೂ ಹೆಚ್ಚು ರೈತರಿಗೆ ಸುಮಾರು 1.28 ಕೋಟಿ ರೂ. ಹಣ ಪಾವತಿ ಬಾಕಿ ಇದ್ದು, ಈ ಬಗ್ಗೆ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಒಂದು ವಾರದ ಒಳಗಾಗಿ 484 ರೈತರ ಬಾಕಿ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಪಾವತಿಯಾಗಲಿದೆ ಎಂದರು.

ಖರೀದಿ ಕೇಂದ್ರದಲ್ಲಿ ಮಾಹಿತಿ ಫಲಕ ಅಳವಡಿಸಿ : ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುವ ಎಪಿಎಂಸಿ ಆವರಣದಲ್ಲಿನ ಖರೀದಿ ಕೇಂದ್ರಗಳ ಬಳಿ, ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರವನ್ನು ಹೊಂದಿರುವ ಮಾಹಿತಿ ಫಲಕವನ್ನು ಅಳವಡಿಸಬೇಕು, ಖರೀದಿ ಕೇಂದ್ರಕ್ಕೆ ಆಗಮಿಸುವ ರೈತರಿಗೆ ಸೂಕ್ತ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ರಾತ್ರಿ ಸಮಯದಲ್ಲಿಯೂ ತೊಂದರೆಯಾಗದ ರೀತಿ ವಿದ್ಯುತ್ ಲೈಟಿಂಗ್ ವ್ಯವಸ್ಥೆ ಮಾಡಬೇಕು.  ಅಕ್ರಮವಾಗಿ ಎಪಿಎಂಸಿ ಆವರಣದಲ್ಲಿ ಹಮಾಲರು ರೈತರಿಂದ ಹಣ ವಸೂಲಿ ಮಾಡದಂತೆ ನಿಗಾ ವಹಿಸಬೇಕು, ದೂರು ಬಂದಲ್ಲಿ ಕೂಡಲೆ ಸೂಕ್ತ ಕ್ರಮ ಜರುಗಿಸಬೇಕು.  ರಾಗಿ ಗುಣಮಟ್ಟ ಪರೀಕ್ಷೆಗೆ ಪ್ರತಿ ಕೇಂದ್ರಕ್ಕೆ ಅರ್ಹ ಗ್ರೇಡರ್‍ಗಳನ್ನು ನೇಮಿಸಬೇಕು, ಕಾನೂನು ಮಾಪನ ಇಲಾಖೆಯವರು ವೇಬ್ರಿಡ್ಜ್‍ಗಳನ್ನು ಪರಿಶೀಲಿಸಿ, ಸರಿಯಿರುವ ಬಗ್ಗೆ ದೃಢೀಕರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

18,285 ಟನ್ ರಾಗಿ ಉತ್ಪಾದನೆ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಉತ್ತಮ ಮಳೆಯಾದ ಕಾರಣ 74,135 ಟನ್ ರಾಗಿ ಉತ್ಪಾದನೆಯಾಗಿತ್ತು, ಹೊಸದುರ್ಗ ತಾಲ್ಲೂಕು ಒಂದರಲ್ಲೇ 47,540 ಟನ್ ರಾಗಿ ಉತ್ಪಾದನೆಯಾಗಿತ್ತು. ಅಲ್ಲದೆ ಬೆಂಬಲ ಬೆಲೆ ಯೋಜನೆಯಡಿ ಕಳೆದ ವರ್ಷ 2.17 ಲಕ್ಷ ಕ್ವಿಂ. ರಾಗಿ ಖರೀದಿಸಲಾಗಿತ್ತು.  ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಕೇವಲ 18,285 ಟನ್ ರಾಗಿ ಉತ್ಪಾದನೆಯಾಗಿರುವ ನಿರೀಕ್ಷೆ ಇದೆ.  ಪ್ರಸಕ್ತ ಸಾಲಿಗೆ ರಾಗಿ ಬೆಳೆಗೆ ಪ್ರತಿ ಕ್ವಿಂಟಾಲ್‍ಗೆ 3846 ರೂ. ಬೆಂಬಲ ಬೆಲೆ ಘೋಷಿಸಿದೆ.  ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಟ 20 ಕ್ವಿಂ. ರಾಗಿ ಖರೀದಿಸಲು ಅವಕಾಶವಿದೆ.  ಬೆಂಬಲ ಬೆಲೆಯಡಿ ರಾಗಿ ಖರೀದಿಗಾಗಿ ರೈತರ ನೊಂದಣಿ ಕಾರ್ಯ ಶೀಘ್ರ ಆರಂಭಿಸಲಾಗುವುದು.  ಕಳೆದ ಬಾರಿ 04 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು.  ರಾಗಿ ಆವಕ ಹೆಚ್ಚಾದ ಕಾರಣ ಖರೀದಿ ಕೇಂದ್ರಗಳಲ್ಲಿ ಗೊಂದಲ ಹಾಗೂ ಜನಜಂಗುಳಿಗೆ ಕಾರಣವಾಗಿತ್ತು.   ಈ ಬಾರಿ ಇಂತಹ ಸಮಸ್ಯೆಗಳಿಗೆ ಕಾರಣವಾಗದಂತೆ ಖರೀದಿ ಕೇಂದ್ರಗಳ ಸಂಖ್ಯೆಯನ್ನು 04 ರಿಂದ 06 ಕ್ಕೆ ಹೆಚ್ಚಿಸಲಾಗಿದೆ.  ಈ ಬಾರಿ ಬಯೋಮೆಟ್ರಿಕ್ ಆಧಾರದಲ್ಲಿ ರೈತರ ನೊಂದಣಿ ಮಾಡುವುದರಿಂದ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರವೇ ರೈತರ ನೊಂದಣಿಯನ್ನು ಪ್ರಾರಂಭಿಸಲಾಗುವುದು ಎಂದರು.

ರೈತ ಮುಖಂಡರ ಅಹವಾಲು : ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ಆರಂಭಕ್ಕೂ ಮುನ್ನ, ರೈತ ಮುಖಂಡರಾದ ರಘು, ಸತೀಶ್, ವೇದಮೂರ್ತಿ ಅವರು ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿ, ಕಳೆದ ವರ್ಷ ರಾಗಿ ಮಾರಾಟ ಮಾಡಿದ 484 ರೈತರಿಗೆ ಹಣ ಪಾವತಿ ಬಾಕಿ ಇದೆ, ಕೂಡಲೆ ಈ ಎಲ್ಲ ರೈತರಿಗೆ ಹಣ ಪಾವತಿಯಾಗಬೇಕು. ಕಳೆದ ಬಾರಿ ಅಕ್ರಮವಾಗಿ ರೈತರಲ್ಲದವರು, ರಾಗಿ ಬೆಳೆಯದವರೂ ಕೂಡ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಿದ್ದರು.

ಇದರಿಂದಾಗಿ ನಿಜವಾದ ರೈತರಿಗೆ ಅನ್ಯಾಯವಾಗಿತ್ತು, ಈ ಬಾರಿ ಇಂತಹ ಪ್ರಮಾದಕ್ಕೆ ಅವಕಾಶ ಮಾಡಿಕೊಡಬಾರದು.  ಕಳೆದ ಬಾರಿ ಸಮರ್ಪಕವಾಗಿ ಗುಣಮಪಟ್ಟ ಪರಿಶೀಲಿಸದೆ, ಧೂಳು, ಕಸದಿಂದ ಕೂಡಿದ ರಾಗಿಯನ್ನು ಕೂಡ ಖರೀದಿಸಲಾಗಿತ್ತು,  ಈ ರೀತಿ ಖರೀದಿಸಿದ ರಾಗಿ ಪಡಿತರ ವ್ಯವಸ್ಥೆ ಮೂಲಕ ಪುನಃ ಜನರಿಗೇ ತಲುಪುವುದರಿಂದ, ಕಳಪೆ ಗುಣಮಟ್ಟದ ರಾಗಿಯನ್ನು ಜನರಿಗೆ ಸರ್ಕಾರವೇ ಪೂರೈಸಿದಂತೆ ಆಗುತ್ತದೆ.  ಹೀಗಾಗಿ ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸಿಯೇ ಖರೀದಿಸುವಂತೆ ಗ್ರೇಡರ್ಸ್ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಬೇಕು, ರೈತರ ನೊಂದಣಿ ಹಾಗೂ ಖರೀದಿ ಸಂದರ್ಭದಲ್ಲಿ ರೈತರು ಹಗಲು ರಾತ್ರಿ ನಿಂತು ಕಾಯುವ ಸ್ಥಿತಿ ಬರಬಾರದು ಎಂದು ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ, 484 ರೈತರ ಬಾಕಿ ಮೊತ್ತ ಒಂದು ವಾರದ ಒಳಗಾಗಿ ಪಾವತಿಯಾಗಲಿದೆ, ಈ ಬಾರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಗೊಂದಲವಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು, ಗುಣಮಟ್ಟದ ಖರೀದಿಗೆ ಸೂಕ್ತ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್ ಕುಮಾರ್ ಮೀನಾ ಮಾತನಾಡಿ, ರಾಗಿ ಖರೀದಿ ಕೇಂದ್ರದ ಸುತ್ತಲೂ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲು ವ್ಯವಸ್ಥೆ ಮಾಡಲಾಗುವುದು. ಏನಾದರೂ ಸಮಸ್ಯೆ ಕಂಡುಬಂದಲ್ಲಿ 112 ಗೆ ಕರೆ ಮಾಡಿದಲ್ಲಿ ನಮ್ಮ ಪೊಲೀಸರು ತ್ವರಿತವಾಗಿ ಸ್ಪಂದಿಸುವರು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್,  ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಚೌಧರಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ವಾಣಿಶ್ರೀ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement
Tags :
chitradurgaDistrict Collector Divya Prabhu G.R.J.featuredmilletPurchaseregistrationsuddionesupport priceಖರೀದಿಚಿತ್ರದುರ್ಗದಿವ್ಯಪ್ರಭು ಜಿ.ಆರ್.ಜೆನೋಂದಣಿಪ್ರಾರಂಭಬೆಂಬಲ ಬೆಲೆರಾಗಿಶೀಘ್ರಸುದ್ದಿಒನ್
Advertisement
Next Article