For the best experience, open
https://m.suddione.com
on your mobile browser.
Advertisement

ರಾಜವೀರ ಮದಕರಿನಾಯಕರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು : ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ

03:13 PM Jul 01, 2024 IST | suddionenews
ರಾಜವೀರ ಮದಕರಿನಾಯಕರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು   ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ಮೊಘಲರ ಆಳ್ವಿಕೆಯನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿದ ಚಿತ್ರದುರ್ಗದ ದೊರೆ ರಾಜಾವೀರಮದಕರಿನಾಯಕನ ಜಯಂತಿಯನ್ನು ಸರ್ಕಾರವೇ ಆಚರಿಸಬೇಕೆಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಒತ್ತಾಯಿಸಿದರು.

ತ.ರಾ.ಸು.ರಂಗಮಂದಿರದಲ್ಲಿ ನಡೆದ ರಾಜಾವೀರ ಮದಕರಿನಾಯಕನ 270 ನೇ ಪಟ್ಟಾಭಿಷೇಕ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.

Advertisement

ಚಿತ್ರದುರ್ಗಕ್ಕೆ ಇತಿಹಾಸ, ಪ್ರಾಚೀನ ಪರಂಪರೆಯಿದೆ. ವಿಜಯನಗರದ ದೊರೆ ಕಲ್ಬುರ್ಗಿಯನ್ನು ಗೆದ್ದುಕೊಡುವಂತೆ ಮತ್ತಿ ತಿಮ್ಮಣ್ಣ ನಾಯಕನನ್ನು ಅವಲತ್ತುಕೊಳ್ಳುತ್ತಾರೆ. ಹನ್ನೆರಡು ವರ್ಷದ ಬಾಲಕ ರಾಜವೀರಮದಕರಿನಾಯಕನಿಗೆ ಪಟ್ಟ ಕಟ್ಟಿದಾಗ ಎರಡು ವರ್ಷಗಳ ಕಾಲ ತರಬೇತಿ ನೀಡಿ ನಂತರ ಅಸುನೀಗಿದ ಗಂಡೋಬಳವ್ವ ನಾಗತಿಯ ಶೌರ್ಯ, ಪರಾಕ್ರಮವನ್ನು ನೆನಪಿಸಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.

ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ಆಗಬೇಕು. ನಗರದಲ್ಲಿ ಹದಿಮೂರು ಪಾಳೆಯಗಾರರ ಸರ್ಕಲ್ ನಿರ್ಮಿಸಬೇಕಿದೆ. ಐತಿಹಾಸಿಕ ಚಿತ್ರದುರ್ಗವನ್ನಾಳಿದ ರಾಜವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರ್ಪಡೆಯಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆಗೆ ಇತಿಹಾಸವನ್ನು ಮರೆ ಮಾಚಿದಂತಾಗುತ್ತದೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸ್ವಾಮೀಜಿ ಆಗ್ರಹಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಪರಾಕ್ರಮಿ ರಾಜಾವೀರ ಮದಕರಿನಾಯಕನ ಇತಿಹಾಸ, ಸಾಹಸ, ಶೌರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವುದರಿಂದ ಇತಿಹಸವನ್ನು ಉಳಿಸಬೇಕಿದೆ. ಚಿತ್ರದುರ್ಗದಲ್ಲಿ ಮದಕರಿನಾಯಕನ ಥೀಂ ಪಾರ್ಕ್ ಆಗಬೇಕು. ಯಾವುದೇ ರಾಜಕೀಯ ಬೆರೆಸದೆ ಎಲ್ಲಾ ಪಕ್ಷಗಳವರು ಇದಕ್ಕೆ ಒತ್ತು ಕೊಡಬೇಕೆಂದು ವಿನಂತಿಸಿದರು.

ರಾಜಾವೀರ ಮದಕರಿನಾಯಕನಲ್ಲಿ ಸಾಹಸ, ಶೌರ್ಯವನ್ನು ತುಂಬಿದ ಗಂಡೋಬಳವ್ವ ನಾಗತಿಯನ್ನು ಸ್ಮರಿಸುವುದು ಅಷ್ಟೆ ಮುಖ್ಯ ಎಂದರು.

ಕೆ.ಡಿ.ಪಿ. ಸದಸ್ಯ ಕೆ.ಸಿ.ನಾಗರಾಜ್ ಮಾತನಾಡುತ್ತ ಮುಂದಿನ ವರ್ಷ 271 ನೇ ಪಟ್ಟಾಭಿಷೇಕ ವಾಲ್ಮೀಕಿ ಭವನದಲ್ಲಿ ನಡೆಯಬೇಕು. ಅದಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಚಿತ್ರದುರ್ಗದ ಕೋಟೆಗೆ ಪ್ರವೇಶಿಸಲು ನೇರವಾದ ದಾರಿ ಆಗಬೇಕು. ರಾಜಾವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರಬೇಕೆಂಬ ನಾಯಕ ಸಮಾಜದ ಬೇಡಿಕೆಯನ್ನು ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಸಂಸದ ಗೋವಿಂದ ಕಾರಜೋಳರವರ ಪುತ್ರ ಉಮೇಶ್ ಕಾರಜೋಳ ಮಾತನಾಡಿ ಚಿತ್ರದುರ್ಗದ ಕೋಟೆ ಆಳಿದ ರಾಜಾವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರಬೇಕೆಂಬ ನಿಮ್ಮ ಬೇಡಿಕೆ ಈಡೇರಿಕೆಗೆ ದೆಹಲಿಗೆ ನಿಯೋಗ ಹೊರಡೋಣ ಎನ್ನುವ ಸಲಹೆ ನೀಡಿದರು.

ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡುತ್ತ ಪಾಳೆಯಗಾರರ ಇತಿಹಾಸವನ್ನು ಮರೆಮಾಚಬಾರದೆನ್ನುವ ಕಾರಣಕ್ಕಾಗಿ ಮದಕರಿನಾಯಕನ ಜಯಂತಿ, ಸ್ಮರಣೋತ್ಸವ, ಪಟ್ಟಾಭಿಷೇಕ ಆಚರಿಸಿಕೊಂಡು ಬರುತ್ತಿದ್ದೇವೆ. ಇತಿಹಾಸ ಸೃಷ್ಟಿಸಿದವರನ್ನು ಗುರುತಿಸಿ ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ದ್ರೋಹವೆಸಗಿದಂತಾಗುತ್ತದೆ. ಅಪ್ರತಿಮ ಶೂರರನ್ನು ನೆನಪಿಸಿಕೊಳ್ಳಬೇಕು. ಗಂಡೋಬಳವ್ವ ನಾಗತಿ ಇತಿಹಾಸ ಪರಾಕ್ರಮವನ್ನು ಮೆಲಕು ಹಾಕಬೇಕಿದೆ ಎಂದು ಹೇಳಿದರು.

ಚಿತ್ರದುರ್ಗದ ಕೋಟೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಬೇಕು, ಅದೇ ರೀತಿ ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ಬಿಜೆಪಿ. ಹಿರಿಯರೊಬ್ಬರು ಇಲ್ಲಿಗೆ ಬಂದಾಗ ಆಶ್ವಾಸನೆ ನೀಡಿದ್ದರು. ಇದುವರೆವಿಗೂ ಆಗಿಲ್ಲ. ಕೋಟೆಗೆ ನೇರ ದಾರಿಯಾದರೆ ಚಿತ್ರದುರ್ಗ ಕೂಡ ಹಂಪಿ ಮಾದರಿಯಲ್ಲಿ ಅಭಿವೃದ್ದಿಯಾಗಲಿದೆ ಇದಕ್ಕೆ ರಾಜಕಾರಣಿಗಳು ಪಕ್ಷ ಬೇಧ ಮರೆತು ಶ್ರಮಿಸಬೇಕೆಂದು ವಿನಂತಿಸಿದರು.

ಸೈಟ್‍ಬಾಬಣ್ಣ, ತಿಪ್ಪೇಸ್ವಾಮಿ ಕಲ್ಲವ್ವನಾಗತಿಹಳ್ಳಿ, ಕವನ ಇವರುಗಳು ಮಾತನಾಡಿದರು. ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆಯ ಸಂದೀಪ್, ನಗರಸಭೆ ಸದಸ್ಯರುಗಳಾದ ದೀಪು, ಭಾಸ್ಕರ್, ನಸ್ರುಲ್ಲಾ, ಹರೀಶ್, ಮಾಜಿ ಸದಸ್ಯರುಗಳಾದ ರಾಘವೇಂದ್ರ, ಫಕೃದ್ದಿನ್, ಶಬ್ಬೀರ್‍ಭಾಷ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥಗೊಪ್ಪೆ, ಗೋನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಂಡಮ್ಮ, ಸೂರಣ್ಣ, ಜಾನ್ಹವಿ ನಾಗರಾಜ್, ಕೆ.ಎಸ್.ಆರ್.ಟಿ.ಸಿ ಡಿಸಿ ಶ್ರೀನಿವಾಸ್, ರತ್ನಮ್ಮ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.

ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು.
ನಾಯಕ ಸಮಾಜದ ಮುಖಂಡ ಡಿ.ಗೋಪಾಲಸ್ವಾಮಿ ನಾಯಕ ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಜಾವೀರ ಮದಕರಿನಾಯಕನಿಗೆ ಕ್ರೇನ್ ಮೂಲಕ ದೊಡ್ಡ ಗಾತ್ರದ ಹೂಮಾಲೆ ಹಾಕಲಾಯಿತು. ನಂತರ ಎಲ್ಲಾ ಜಾತಿ ಧರ್ಮದವರು ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.

Tags :
Advertisement