ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು : ಕೆ. ಅನಂತ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 21: ತಳಮಟ್ಟದಿಂದ ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು ಎಂದು ಜಿಲ್ಲಾ ಕಾಂಗ್ರೆಸ್ ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಎಐಸಿಸಿ ಗೋವಾ ಉಸ್ತುವಾರಿ ಕೆ. ಅನಂತ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ರಾಜೀವ್‍ಗಾಂಧಿ ರವರ 33ನೇ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿರಾಗಾಂಧಿ ಹತ್ಯೆಯಾದಾಗ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ರಾಜೀವ್‍ಗಾಂಧಿ ರವರಲ್ಲಿ ದೂರದೃಷ್ಠಿ ಇದ್ದುದರಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. 1984-86 ರಲ್ಲಿ 100000 ಮಿಲಿಯನ್ ಡಾಲರ್ ಖರ್ಚು ಮಾಡಿ ಕಂಪ್ಯೂಟರ್ ತಂದಾಗ ಅಮೆರಿಕಾಗಿಂತ ಹತ್ತುಪಟ್ಟು ಹೆಚ್ಚು ವೇಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕೆಲಸ ಮಾಡಲು ಸಹಕಾರಿಯಾಯಿತು. 18 ವರ್ಷದ ಯುವ ಜನಾಂಗಕ್ಕೆ ಮತದಾನದ ಹಕ್ಕು ನೀಡಿದ ಕೀರ್ತಿ ರಾಜೀವ್‍ಗಾಂಧಿ ರವರಿಗೆ ಸಲ್ಲುತ್ತದೆ.
ತಾಯಿ ಇಂದಿರಾಗಾಂಧಿಯ ಹತ್ಯೆಯ ನಂತರ ದೇಶದ ಚುಕ್ಕಾಣಿ ಹಿಡಿದ ರಾಜೀವ್‍ಗಾಂಧಿ ಕೂಡಾ ಎಲ್.ಟಿ.ಟಿ.ಇ ಗಳಿಂದ ಹತ್ಯೆಯಾಗುತ್ತಾರೆ. ಒಟ್ಟಾರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇತಿಹಾಸ ಕಾಂಗ್ರೆಸ್‍ಗಿದೆ. ಪಂಚಾಯತ್ ರಾಜ್ ತಿದ್ದುಪಡಿಗೆ ಶ್ರಮ ಪಟ್ಟವರು ರಾಜೀವ್‍ಗಾಂಧಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ ಮಾತನಾಡಿ ರಾಜೀವ್ ಗಾಂಧಿಯವರಲ್ಲಿ ದೂರದೃಷ್ಠಿಯ ಆಲೋಚನೆ ಇತ್ತು, ಎಲ್.ಟಿ.ಟಿ.ಇ ಗಳಿಂದ ರಾಜೀವ್‍ಗಾಂಧಿ ಹತ್ಯೆಗೀಡಾದಾಗ ಇಡೀ ವಿಶ್ವವೇ ಕಂಬನಿ ಮಿಡಿಯಿತು. ಯುವ ಜನಾಂಗದ ಮೇಲೆ ಅತೀವವಾದ ಭರವಸೆ ಇಟ್ಟು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ಕೊಟ್ಟರು. ಹೆದ್ದಾರಿ ನಿರ್ಮಾಣವಾಗಿದ್ದು ಕಾಂಗ್ರೆಸ್ ಅಧಿಕಾರದಲ್ಲಿ. ಬಿಜೆಪಿಯವರು ನಮ್ಮದೆಂದು ಹೇಳಿಕೊಳ್ಳುತ್ತಿರುವುದು ಸುಳ್ಳಿನ ಕಂತೆ. ಸಂವಿಧಾನ ತಿದ್ದುಪಡಿಗೊಳಿಸಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇಖಡ 33 ರಷ್ಟು ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಕೊಡುಗೆಯೆಂದು ನೆನಪಿಸಿಕೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಲೋಕೇಶ್ವರಪ್ಪ, ವಸೀಂ, ಪದವೀದರ ವಿಭಾಗದ ಮುದಸಿರ್, ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಡಿ.ಕುಮಾರ್, ಷಬ್ಬೀರ್ ಬಾಷ ಇನ್ನು ಮುಂತಾದವರು ಪುಣ್ಯತಿಥಿಯಲ್ಲಿ ಭಾಗವಹಿಸಿದ್ದರು.