ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ
ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಜೊತೆಗೆ ದೈಹಿಕ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದು ಹಿರಿಯೂರು ತಾಲ್ಲುಕಿನ ಬಬ್ಬೂರು ಗ್ರಾಮದ ಭಾರತೀಯ ಕೃಷಿ ಅಧ್ಯಯನ ಪರಿಷತ್ತು, ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ.ರುದ್ರಮುನಿ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾಭವನದಲ್ಲಿ ಭಾನುವಾರದಂದು ದೀವಿಗೆ ಎಜುಕೇಷನ್ ಫೌಂಡೇಷನ್ ಹಾಗೂ ವಿ.ಪಿ.ಅಕಾಡೆಮಿ ವತಿಯಿಂದ ಪಿಯುಸಿ ನಂತರ ಮುಂದೇನು? ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷಾ ತರಬೇತಿಯ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ಎಸ್ಸಿ ಅಗ್ರಿಕಲ್ಚರ್ ಓದುವ ಮಕ್ಕಳಿಗೆ ಈ ಕಾರ್ಯಾಗಾರವು ಉಪಯುಕ್ತವಾಗಿದೆ. ದೇಶಕ್ಕೆ ಅನ್ನ ಕೊಡುವ ರೈತನ ಬದುಕು ಸತ್ವಪೂರ್ಣವಾದುದು. ಮಕ್ಕಳು ಕೃತಕ ಜೀವನಕ್ಕೆ ಮಾರುಹೋಗದೆ, ಗುಣಮಟ್ಟದ ಕೃಷಿಪದ್ಧತಿಯ ಶಿಕ್ಷಣ ಪಡೆದು ಸಾರ್ಥಕ ಬದುಕನ್ನು ನಡೆಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಇ.ಮಂಜುನಾಥ ಇವರು ಪಿಯುಸಿ ನಂತರ ಮುಂದೇನು.? ಹಾಗೂ ಕೃಷಿ ಪ್ರಾಯೋಗಿಕ ಪರೀಕ್ಷಾ ಪ್ರಾತ್ಯಕ್ಷಿಕೆ ತರಬೇತಿ ನೀಡಿದರು. ದೀವಿಗೆ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ವಿ.ನಟರಾಜ್, ವಿ.ಪಿ.ಅಕಾಡೆಮಿ ಪ್ರಾಚಾರ್ಯ ಹೆಚ್.ದೇವರಾಜ್, ನಿರ್ದೇಶಕ ಎಸ್.ಕೆ.ದೀಪಕ್ ಹಾಗೂ ವೈ.ಜಿ.ರಾಜು ಉಪಸ್ಥಿತರಿದ್ದರು
ವಿದ್ಯಾರ್ಥಿನಿಯರಾದ ಐಶ್ವರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಚನಾ ಸ್ವಾಗತಿಸಿದರು. ಸಂಜನಾ ವಂದಿಸಿದರು. ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ/ನಿಯರು ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು.