ತುರುವನೂರು ರಸ್ತೆಯ ರೈಲ್ವೆ ಕೆಳ ಸೇತುವೆ ಅವ್ಯವಸ್ಥೆ : ಕೂಡಲೇ ಸರಿಪಡಿಸಿ : ಸಂಸದ ಗೋವಿಂದ ಕಾರಜೋಳ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಅ. 09 : ನಗರದಿಂದ ಹಾದು ಹೋಗುವ ತುರುವನೂರು ರಸ್ತೆಯಲ್ಲಿ ರೈಲು ಮಾರ್ಗವೂ ಕೂಡಾ ಹಾದು ಹೋಗಿದೆ. ಈ ಮಾರ್ಗದ ಮೂಲಕ ಬೆಳಗಟ್ಟ - ತುರುವನೂರು- ಜಗಳೂರು ಮತ್ತು ಬೆಳಗಟ್ಟ - ನಾಯಕನಹಟ್ಟಿ - ಚಳ್ಳಕೆರೆ ಮಾರ್ಗಗಲ್ಲಿ ಹಲವಾರು ಹಳ್ಳಿಗಳಿಗೆ ಇದೇ ರೈಲ್ವೆ ಕೆಳ ಸೇತುವೆ ಮೂಲಕವೇ ಹಾದು ಹೋಗಬೇಕು. ಆದರೆ ಈ ಕೆಳಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು. ಪ್ರತಿ ಸಾರಿ ಮಳೆ ಬಂದಾಗ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಲ್ಲುತ್ತದೆ. ಅದೇ ರೀತಿ ನಿನ್ನೆ (ಮಂಗಳವಾರ) ರಾತ್ರಿ ಸುರಿದ ಮಳೆಗೆ ಸೇತುವೆಯಲ್ಲಿ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿರುವುದನ್ನು ಸಂಸದ ಗೋವಿಂದ ಕಾರಜೋಳ ಇಂದು ವೀಕ್ಷಣೆ ಮಾಡಿ ರೈಲ್ವೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದರು.
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಈ ರೀತಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರೈಲ್ವೆ ಕೆಳಸೇತುವೆಗಳ ಬಳಿ ನೀರು ಜಮಾವಣೆಯಾಗುತ್ತಿದ್ದು, ಇಂತಹ ಸೇತುವೆಗಳನ್ನು ಪಟ್ಟಿ ಮಾಡಿ ಸಭೆಯಲ್ಲಿ ರೈಲ್ವೆ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಸಾಕಷ್ಟು ಸೇತುವೆಗಳ ಬಳಿ ನೀರು ಜಮಾವಣೆಯಾಗುತ್ತಿದ್ದು, ಕೂಡಲೇ ಇವುಗಳನ್ನು ಸರಿಪಡಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.