ರಾಹುಲ್‍ಗಾಂಧಿಗೆ ನರೇಂದ್ರಮೋದಿರವರ ಪ್ರಾಮಾಣಿಕ ಆಡಳಿತವನ್ನು ಪ್ರಶ್ನಿಸುವ ಅಧಿಕಾರವಿಲ್ಲ : ಎನ್.ರವಿಕುಮಾರ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17 : ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವ ರಾಹುಲ್‍ಗಾಂಧಿ ಪ್ರಧಾನಿ ನರೇಂದ್ರಮೋದಿ ಆಡಳಿತದ ಪಾರದರ್ಶಕತೆಯನ್ನು ಪ್ರಶ್ನಿಸುವ ಮೊದಲು ಕಾಂಗ್ರೆಸ್‍ನಲ್ಲಿ ನಡೆದಿರುವ ಹಗರಣಗಳ ಬಗ್ಗೆ ಉತ್ತರ ನೀಡಲಿ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರಶ್ನಿಸಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮನಮೋಹನ್‍ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಹದಿಮೂರು ಲಕ್ಷ ಕೋಟಿ ರೂ.ಗಳ ಹಗರಣವಾಗಿದೆ. ಟು-ಜಿ ಸ್ಟೆಕ್ಟ್ರಂ, ಕಲ್ಲಿದ್ದಲು, ಹಾಗೂ ಹೆಲಿಕ್ಟಾಪರ್ ಹಗರಣಕ್ಕೆ ಯಾರು ಹೊಣೆ? ಚುನಾವಣಾ ಬಾಂಡ್‍ಗಳ ಮೂಲಕ ಬಿಜೆಪಿ. ಕೋಟಿಗಟ್ಟಲೆ ಹಣ ಸಂಗ್ರಹಿಸುತ್ತಿದೆ ಎಂದು ಆಪಾದನೆ ಮಾಡುತ್ತಿರುವ ರಾಹುಲ್‍ಗಾಂಧಿಗೆ ನರೇಂದ್ರಮೋದಿರವರ ಪ್ರಾಮಾಣಿಕ ಆಡಳಿತವನ್ನು ಪ್ರಶ್ನಿಸುವ ಅಧಿಕಾರವಿಲ್ಲ ಎಂದು ತಿರುಗೇಟು ನೀಡಿದರು.
ಚುನಾವಣಾ ಬಾಂಡ್‍ಗಳ ಮೂಲಕ ನಮ್ಮ ಪಕ್ಷಕ್ಕೆ ಶೇ.37 ರಷ್ಟು ಹಣ ಬಂದಿದ್ದರೆ. ಬೇರೆ ಪಕ್ಷಗಳಿಗೆ ಶೇ.67 ರಷ್ಟು ಹಣ ಸಂಗ್ರಹವಾಗಿದೆ. ಮೋದಿ ಆಡಳಿತವನ್ನು ಇಡಿ ವಿಶ್ವ ಮೆಚ್ಚಿಕೊಂಡಿದೆ. ರಾಹುಲ್‍ಗಾಂಧಿಗೆ ಟೀಕಿಸುವ ನೈತಿಕತೆಯಿಲ್ಲ ಎಂದು ಸವಾಲೆಸೆದರು.
ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ. ಅಧಿಕಾರದಲ್ಲಿದ್ದಾಗ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರೂ.ಗಳನ್ನು ಏಕೆ ನಿಲ್ಲಿಸಿದೆ. ಎಸ್ಸಿ. ಎಸ್ಟಿ. ಓ.ಬಿ.ಸಿ. ಮಕ್ಕಳ ಸ್ಕಾಲರ್‍ಶಿಪ್ ರದ್ದುಪಡಿಸಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ದ ಇದುವರೆವಿಗೂ ಕ್ರಮ ಕೈಗೊಳ್ಳಲು ಆಗದ ಕಾಂಗ್ರೆಸ್‍ಗೆ ನಿಜವಾಗಿಯೂ ನಾಚಿಕೆಯಾಗಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಅರವತ್ತು ಪರ್ಸೆಂಟ್ ಕಮೀಷನ್ ಸರ್ಕಾರ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನೆರೆ ಬಂದ ಸಂದರ್ಭದಲ್ಲಿ ಕೇಂದ್ರದ ನೆರವನ್ನು ಎದುರು ನೋಡದೆ ಎನ್.ಡಿ.ಆರ್.ಎಫ್.ನಿಯಮ ಮೀರಿ ಒಂದೊಂದು ಮನೆಗೆ ಐದು ಲಕ್ಷ ರೂ.ಗಳನ್ನು ಕೊಟ್ಟರು. ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಕಿ.ಮೀ. ರಸ್ತೆಯೂ ಆಗಿಲ್ಲ. ಗುಂಡಿ ಬಿದ್ದ ರಸ್ತೆಗೆ ಮುಣ್ಣು ಹಾಕಿ ಮುಚ್ಚಿಲ್ಲ. ಭ್ರಷ್ಠಾಚಾರ, ಗೂಂಡಾಗಿರಿ ಮಿತಿ ಮೀರಿದೆ. ಕುಡಿಯುವ ನೀರಿಗೆ ಹಾಹಾಕಾರವಿದೆ. ಜನವಿರೋಧಿ ಕಾಂಗ್ರೆಸ್ ಸರ್ಕಾರದ ಬಗ್ಗೆ ರಾಹುಲ್‍ಗಾಂಧಿ ಏಕೆ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರಮೋದಿರವರು ಪ್ರತಿ ಮನೆಗಳ ಮೇಲೆ ಸೋಲಾರ್ ಪ್ಲಾಂಟ್‍ಗಳನ್ನು ಅಳವಡಿಸುವ ಚಿಂತನೆಯಲ್ಲಿದ್ದಾರೆ. ಸಾವಯವ ಕೃಷಿಗೆ ಒತ್ತು ನೀಡಲಾಗುವುದೆಂದರು.
ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಯಶವಂತ್, ನಗರ ಕಾರ್ಯದರ್ಶಿ ಶಂಭು, ತಿಪ್ಪೇಸ್ವಾಮಿ ಚಲವಾದಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.