ಹಿರಿಯೂರು - ಯಲ್ಲದಕೆರೆ ಮಾರ್ಗದಲ್ಲಿ KSRTC ಬಸ್ ವ್ಯವಸ್ಥೆ ಕಲ್ಪಿಸಿ : ವಿದ್ಯಾರ್ಥಿಗಳ ಮನವಿ
ಸುದ್ದಿಒನ್, ಹಿರಿಯೂರು, ಆಗಸ್ಟ್.06 : ತಾಲೂಕಿನ ಯಲ್ಲದಕೆರೆ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಕೆಎಸ್ಆರ್ಟಿಸಿ ಬಸ್ ಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್ ವ್ಯಾಸಂಗಕ್ಕಾಗಿ ಹಿರಿಯೂರು ಹಾಗೂ ಚಿತ್ರದುರ್ಗಕ್ಕೆ ಹೋಗಲು ಬಸ್ ಗಳಿಲ್ಲ. ವಿದ್ಯಾರ್ಥಿಗಳು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಕಾದು ಕುಳಿತರು ಕೆಎಸ್ಆರ್ಟಿಸಿ ಅಥವಾ ಖಾಸಗಿ ಬಸ್ ವ್ಯವಸ್ಥೆ ಇಲ್ಲ.
ಬಸ್ ಇಲ್ಲದ ಕಾರಣ ದುಬಾರಿ ವೆಚ್ಚ ಕೊಟ್ಟು ಆಟೋಗಳಲ್ಲಿ ಹೋಗಬೇಕು. ಒಂದು ವೇಳೆ ಆಟೋ ಇಲ್ಲವಾದಲ್ಲಿ ಹುಳಿಯಾರು ಕಡೆಯಿಂದ ಬರುವ ಲಾರಿಗಳು ಇಲ್ಲವೆ ಅಥವಾ ಸಿಕ್ಕಸಿಕ್ಕ ವಾಹನಗಳಿಗೆ ಕೈ ಅಡ್ಡ ಹಾಕಿ ಹತ್ತಿಕೊಂಡು ಪ್ರಯಾಣ ಮಾಡಬೇಕಾಗುತ್ತದೆ. ಆದರೆ ಯಲ್ಲದಕೆರೆ ಭಾಗದಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಇದ್ದಾರೆ ಅವರಿಗೆ ಇದು ಅತ್ಯಂತ ಕಠಿಣ ಪರಿಸ್ಥಿತಿ ಆಗಿದೆ.
ಬೆಳಿಗ್ಗೆ 9.15ಕ್ಕೆ ಬರಬೇಕಾದ ಯಡಿಯೂರು ನಿಂದ ಗದಗ ಕಡೆ ಹೊರಡುವ ಬಸ್ 9.35ನಿಮಿಷಕ್ಕೆ ಬರುತ್ತದೆ. ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ತೀವ್ರ ಸಮಸ್ಯೆ ಉಂಟಾಗಿದೆ. ಇಲ್ಲದೆ ಹಿರಿಯೂರು ನಗರದಿಂದ ಸಂಜೆ ಯಲ್ಲದಕೆರೆ ಕಡೆಗೂ ಸಹ ಯಾವುದೇ ಬಸ್ ಇಲ್ಲ. ಮಧ್ಯಾಹ್ನ 2.30ಕ್ಕೆ ಬಾಗಲಕೊಟೆ ಮೈಸೂರು ಹೊರಡುತ್ತದೆ.
ಇದಾದ ನಂತರ ಸಂಜೆ 6.30ರ ವರೆಗೆ ಯಾವುದೇ ಬಸ್ ಯಲ್ಲದಕೆರೆ ಮಾರ್ಗಕ್ಕೆ ಇರುವುದಿಲ್ಲ. 4ಗಂಟೆಗೆ ಸಿಂಧನೂರು ಬಸ್ ಮತ್ತು 4.30ಕ್ಕೆ ತುರುವೇಕೆರೆ ಮೈಸೂರು ಬಸ್ ಬರುತ್ತಿತ್ತು. ಇದೀಗ ಈ ಎರಡು ಬಸ್ ನಿಲ್ಲಿಸಲಾಗಿದೆ. ಶಾಲಾ ಕಾಲೇಜು ಮುಗಿಸಿ ಸಂಜೆಯವರೆಗೂ ನಾವು ನಗರದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹಾಗೂ ಅಧಿಕಾರಿಗಳು ಈ ಭಾಗದ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಸಾರಿಗೆ ಬಸ್ ಕಲ್ಪಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸತೀಶ್, ಸಂತೋಷ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿದ್ದರು.