For the best experience, open
https://m.suddione.com
on your mobile browser.
Advertisement

ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ 26 ರಂದು ಪ್ರತಿಭಟನೆ : ಜೆ.ಯಾದವರೆಡ್ಡಿ

03:59 PM Nov 23, 2024 IST | suddionenews
ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ 26 ರಂದು ಪ್ರತಿಭಟನೆ   ಜೆ ಯಾದವರೆಡ್ಡಿ
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಸಂಯಕ್ತ ಹೋರಾಟ-ಕರ್ನಾಟಕ ವತಿಯಿಂದ ನ.26 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಸರ್ವೊದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ತಿಳಿಸಿದರು.

Advertisement

ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದ ಪ್ರಧಾನಿ ಮೋದಿರವರು ಈಗ ಬೆಂಬಲ ಬೆಲೆ ನೀಡಲು ಆಗುತ್ತಿಲ್ಲವೆಂದು ಹೇಳುತ್ತಿದ್ದಾರೆ. ಕೃಷಿಗೆ ಮಾಡಿದ ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.

Advertisement

ರೈತರ ಆತ್ಮಹತ್ಯೆಗೆ ಮೂಲ ಸಾಲವೇ ಕಾರಣ. ಹಾಗಾಗಿ ಬೆಂಬಲ ಬೆಲೆ ರೂಪಿಸಿ ಕಾನೂನು ರೂಪ ಕೊಡಬೇಕು. ಅದೇ ರೀತಿ ರಾಜ್ಯ ಸರ್ಕಾರ ಎಲ್ಲದಕ್ಕು ಕೇಂದ್ರದ ಮೇಲೆ ಗೂಬೆ ಕೂರಿಸುವ ಬದಲು ಅಪ್ಪರ್‍ಭದ್ರಾ ಯೋಜನೆಗಾಗಿ ಘೋಷಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳ ಶೀಘ್ರ ಬಿಡುಗಡೆಗೆ ಪ್ರಯತ್ನಸಿ ನಿಗಧಿತ ಅವಧಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಿ ಬರಪೀಡಿತ ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ಭದ್ರಾಮೇಲ್ದಂಡೆ ಯೋಜನೆಯ ನೀರನ್ನು ಬಳಸಿಕೊಳ್ಳುವ ಪ್ರಯತ್ನವಾಗಬೇಕು. ಹಿನ್ನೀರಿನ ಸಂತ್ರಸ್ಥರಿಗೆ ಸೌಲಭ್ಯ ಕಲ್ಪಿಸಿ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ವಿದ್ಯುತ್ ಖಾಸಗೀಕರಣವಾಗಬಾರದು. ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರಗಳನ್ನು ನೀಡಬೇಕು. ಬ್ಯಾಂಕ್‍ಗಳು ಸಾಲ ವಸೂಲು ಮಾಡುವುದನ್ನು ನಿಲ್ಲಿಸಬೇಕು. ಸ್ವಾಮಿನಾಥನ್ ವರದಿ ಪ್ರಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಚಳುವಳಿ ನಡೆಸಲಾಗುವುದು. ಅಂದು ಬೆಳಿಗ್ಗೆ 10 ಗಂಟೆಗೆ ಯೂನಿಯನ್ ಪಾರ್ಕ್‍ನಿಂದ ಹೊರಡುವ ಮೆರವಣಿಗೆಯಲ್ಲಿ ರೈತರು, ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ಮಾತನಾಡುತ್ತ ವಾಣಿವಿಲಾಸಸಾಗರದ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕೆ ರೂಪುರೇಷಯಾಗಬೇಕು. ಬಗರ್‍ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ಪತ್ರ ನೀಡಬೇಕು. ಭೂಮಿಗಾಗಿ ಅರ್ಜಿ ಸಲ್ಲಿಸಿರುವವರನ್ನು ಒಕ್ಕಲೆಬ್ಬಿಸಬಾರದು. ಅರಣ್ಯ ಇಲಾಖೆ ದೌರ್ಜನ್ಯ ಕಿರುಕುಳ ನಿಲ್ಲಬೇಕು. ಜಿಲ್ಲೆಯ ಗ್ರಾಮೀಣ ನಗರ ಪ್ರದೇಶಗಳೊಳಗೊಂಡಂತೆ ವಸತಿ ರಹಿತರಿಗೆ ನಿವೇಶನ, ಮನೆಗಳ ಹಂಚಿಕೆ ಸೇರಿದಂತೆ ಹತ್ತು ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ತಿಳಿಸಿದರು.

ರೈತ ಮುಖಂಡರುಗಳಾದ ಧನಂಜಯ ಹಂಪಯ್ಯನಮಾಳಿಗೆ, ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಸತ್ಯಪ್ಪ ಮಲ್ಲಾಪುರ, ಸಿ.ಐ.ಟಿ.ಯು. ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್, ಕರ್ನಾಟಕ ರಾಜ್ಯ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Tags :
Advertisement