ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.30 : ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಬಸ್‍ಗಳ ಸಂಚಾರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಸ್ತ್ರೀಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ಸಾಕಷ್ಟು ತೊಂದರೆಗಳಾಗುತ್ತಿವೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗುವ ಹಾಗೂ ಬರುವ ಸಂದರ್ಭಗಳಲ್ಲಿ ಕಷ್ಟಪಡುತ್ತಿರುವುದನ್ನು ನಿವಾರಿಸಬೇಕಿದೆ ಎಂದು ಒತ್ತಾಯಿಸಿದರು.
ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಪುರುಷರು ಸಹ ಕುಳಿತುಕೊಳ್ಳಲು ಸೀಟು ಸಿಗದೆ ನಿಂತುಕೊಂಡೆ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸಬೇಕಿದೆ. ಹಿರಿಯ ನಾಗರೀಕರಿಗೆ, ಅಂಗವಿಕಲರಿಗೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆಯಾಗಬೇಕು. ಬರಗಾಲವಿರುವ ಕಾರಣ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕು.
ಬಸ್‍ನಿಲ್ದಾಣ ಮತ್ತು ಬಸ್‍ಗಳಲ್ಲಿ ನಡೆಯುವ ಕಳ್ಳತನ ನಿಯಂತ್ರಿಸಲು ಸೂಕ್ತ ಕ್ರಮ ವಹಿಸಬೇಕು.
ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಡನೆ ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ಟ್ರಾಫಿಕ್ ಕಂಟ್ರೋಲರ್‍ಗಳ ಕೊರತೆಯನ್ನು ನೀಗಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ರವಿಕುಮಾರ್, ಬಿ.ನಿಜಲಿಂಗಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಬಿ.ಎಸ್.ರಂಗಸ್ವಾಮಿ, ಬಸವರಾಜಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.