For the best experience, open
https://m.suddione.com
on your mobile browser.
Advertisement

ಅಲೆಮಾರಿ, ಅರೆ ಅಲೆಮಾರಿ ಜನಾಂಗದ ನಿರ್ಲಕ್ಷ್ಯ ಮುಂದುವರಿದರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ : ಕೆ.ರವೀಂದ್ರಶೆಟ್ಟಿ ಉಳಿದೊಟ್ಟು

06:24 PM Jul 19, 2024 IST | suddionenews
ಅಲೆಮಾರಿ  ಅರೆ ಅಲೆಮಾರಿ ಜನಾಂಗದ ನಿರ್ಲಕ್ಷ್ಯ ಮುಂದುವರಿದರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ   ಕೆ ರವೀಂದ್ರಶೆಟ್ಟಿ ಉಳಿದೊಟ್ಟು
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ‌, ಜುಲೈ. 19 : ಅಲೆಮಾರಿ, ಅರೆ ಅಲೆಮಾರಿ ಜನಾಂಗದ ರಕ್ಷಣೆಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು. ಇನ್ನು ಎರಡು ಮೂರು ತಿಂಗಳು ಕಾಯುತ್ತೇವೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಹಿಂದುಳಿದ ವರ್ಗ ಪ್ರವರ್ಗ-1 ಜನಾಂಗಗಳ ಒಕ್ಕೂಟದ ನಿಕಟಪೂರ್ವ ರಾಜ್ಯಾಧ್ಯಕ್ಷ ಕೆ.ರವೀಂದ್ರಶೆಟ್ಟಿ ಉಳಿದೊಟ್ಟು ಎಚ್ಚರಿಕೆ ನೀಡಿದರು.

Advertisement

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತ್ತ ಡೇರಿಯೂ ಅಲ್ಲ. ಇಲ್ಲ ಗುಡಿಸಲು ಅಲ್ಲದೆ ಟೆಂಟ್‍ಗಳಲ್ಲಿ ಅತ್ಯಂತ ಶೋಚನೀಯವಾಗಿ ವಾಸಿಸುತ್ತಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರ ಸ್ಥಿತಿಗತಿಗಳ ಸುಧಾರಣೆಯತ್ತ ಸರ್ಕಾರ ಗಮನ ಕೊಡುತ್ತಿಲ್ಲದಿರುವುದು ನೋವಿನ ಸಂಗತಿ.

ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಅಭಿವೃದ್ದಿ ನಿಗಮ ಸ್ಥಾಪಿಸಿ ನನ್ನನ್ನು ಅಧ್ಯಕ್ಷನಾಗಿ ನೇಮಕ ಮಾಡಿದಾಗ ರಾಜ್ಯಾದ್ಯಂತ ಸುತ್ತಾಡಿ ಅಲೆಮಾರಿ ಮತ್ತು ಅರೆ ಅಲೆಮಾರಿಗಳ ನಿಕೃಷ್ಟ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ. ಮಕ್ಕಳ ಶಿಕ್ಷಣಕ್ಕೆ ಮೂಲಭೂತ ಸೌಲಭ್ಯ ಕೊಡುವಲ್ಲಿ ಸರ್ಕಾರ ಎಡವಿದೆ. ಸರ್ಕಾರಿ ಜಾಗದಲ್ಲಿ ಹತ್ತು ವರ್ಷಗಳಿಂದ ಟೆಂಟ್‍ಗಳನ್ನು ಹಾಕಿಕೊಂಡು ಜೀವಿಸುತ್ತಿರುವ ಈ ಜನಾಂಗಕ್ಕೆ ಪಹಣಿ ಕೊಡಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಿಗೆ ವಸತಿ ನಿಲಯ, ಶಾಲಾ-ಕಾಲೇಜುಗಳಲ್ಲಿ ವಿಶೇಷ ಮೀಸಲಾತಿ, ಸಿ.ಇ.ಟಿ. ಮತ್ತು ನೀಟ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅನುಸರಿಸುವ ಮಾನದಂಡ ಅನ್ವಯವಾಗಬೇಕು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಮುದಾಯ ಭವನ, ಶವ ಸಂಸ್ಕಾರಕ್ಕೆ ಸರ್ಕಾರಿ ಜಾಗ ನೀಡಬೇಕೆಂದು ಮನವಿ ಮಾಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕಗೊಳಿಸಿ ಅನುದಾನ ಮೀಸಲಿಡಬೇಕು. ನೇರ ಸಾಲ, ಗಂಗಾ ಕಲ್ಯಾಣ, ಉನ್ನತ ಶಿಕ್ಷಣಕ್ಕೆ ಸಹಾಯಧನ ಕೊಡಬೇಕು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತೊಂದರೆ ಕೊಡಬಾರದು. ರಾಜ್ಯದಲ್ಲಿ ಎಪ್ಪತ್ತು ಲಕ್ಷದಷ್ಟು ಜನಸಂಖ್ಯೆಯಿದೆ ಎಂದು ಗೊತ್ತಾಗಿದೆ. ಪ್ರತಿ ಜಿಲ್ಲೆಯಲ್ಲಿ ಎಷ್ಟೆಷ್ಟು ಜನಸಂಖ್ಯೆಯಿದೆ ಎನ್ನುವ ಪಕ್ಕಾ ಮಾಹಿತಿ ಸಿಗಬೇಕಾದರೆ ಜಾತಿ ಗಣತಿ ಆಗಬೇಕೆಂದು ಕೆ.ರವೀಂದ್ರಶೆಟ್ಟಿ ಉಳಿದೊಟ್ಟು ಆಗ್ರಹಿಸಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್‍ಜೋಗಿ ಮಾತನಾಡಿ ಜಿಲ್ಲೆಯಲ್ಲಿ ಯಾವ್ಯಾವ ಜಾತಿಯಿದೆ ಎನ್ನುವ ಅರಿವು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಇದ್ದಂತಿಲ್ಲ. ಈ ಜನಾಂಗದ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಕಡಿತಗೊಳಿಸಿರುವುದರಿಂದ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತರ್ಜಾತಿ ವಿವಾಹವಾಗುತ್ತಿರುವವರನ್ನು ಹಳ್ಳಿಗಳಲ್ಲಿ ಬಹಿಷ್ಕರಿಸುತ್ತಿರುವುದು ನಿಲ್ಲಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಕಾರ್ಯಾಗಾರ ನಡೆಸಿದಾಗ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟಷ್ಟು ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿದ್ದಾರೆನ್ನುವ ನಿಖರ ಮಾಹಿತಿ ಸಿಗುತ್ತದೆಂದು ಹೇಳಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಕುಂಚಿಗನಹಾಳ್ ಮಾತನಾಡುತ್ತ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಈ ಜನಾಂಗಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದಾರೆ. ಅಚ್ಚೆ ಹಾಕಿ ಜೀವನ ಸಾಗಿಸುವವರು ಈಗಲೂ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದಲ್ಲಿದ್ದಾರೆ. ಟೆಂಟ್, ಸೋಲಾರ್ ಲೈಟ್, ಟೆಂಟ್ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯ ಮಹಿಳಾ ಉಪಾಧ್ಯಕ್ಷೆ ಹೆಚ್.ಜ್ಯೋತಿ, ರವಿಕುಮಾರ್, ಹೇಮಣ್ಣ, ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags :
Advertisement