Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ 23ರಂದು ಪ್ರಿಯಾಂಕಾ ಗಾಂಧಿ ಪ್ರಚಾರ ಸಭೆ ಆಯೋಜನೆ : ಒಂದು ಲಕ್ಷಕ್ಕೂ ಹೆಚ್ಚು ಜನ ಆಗಮನ ನಿರೀಕ್ಷೆ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

05:49 PM Apr 21, 2024 IST | suddionenews
Advertisement

ಚಿತ್ರದುರ್ಗ, ಏ.21 : ಪ್ರಥಮ ಬಾರಿಗೆ ಇಂದಿರಾಗಾಂಧಿ ಮೊಮ್ಮಗಳು, ಭಾರತದ ಭವಿಷ್ಯದ ನಾಯಕಿ ಪ್ರಿಯಾಂಕಾ ಗಾಂಧಿ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಏ.23ರಂದು ಆಗಮಿಸುತ್ತಿದ್ದು, ಅವರನ್ನು ನೋಡಲು, ಅವರ ಭಾಷಣ ಕೇಳುವ ಕುತೂಹಲ ಸಹಜವಾಗಿ ಜನರಲ್ಲಿ ಹೆಚ್ಚು ಇದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

Advertisement

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಾರ್ಯಕ್ರಮದ ಸಿದ್ಧತಾ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅಂದು ಮಧ್ಯಾಹ್ನ 2.30 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಡೆಸಲು ಸಿದ್ಧತೆ ಭರದಿಂದ ಸಾಗುತ್ತಿದೆ. 25 ಸಾವಿರ ಆಸನಗಳನ್ನು ಹಾಕಿಸಲಾಗಿದೆ. ಜೊತೆಗೆ ಜಿಲ್ಲೆಯ ವಿವಿಧ ತಾಲೂಕು, ಹಳ್ಳಿಗಳಿಂದ ಜನರೇ ಸ್ವಯಂ ಪ್ರೇರಿತರಾಗಿ ಬಸ್ ಇತರ ವಾಹನಗಳನ್ನು ಮಾಡಿಕೊಂಡು ಇಂದಿರಾಗಾಂಧಿ ಮೊಮ್ಮಗಳನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡುವ ಜವಾಬ್ದಾರಿ ನಮ್ಮದು. ಆದ್ದರಿಂದ ಅಚ್ಚುಕಟ್ಟು ಕಾರ್ಯಕ್ರಮಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

Advertisement

ನಾಡಿನ ಜನತೆಗೆ ಇಂದಿರಾಗಾಂಧಿ ಮತ್ತು ಅವರ ಕುಟುಂದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಉಳುವವನೆ ಒಡೆಯ, ಬ್ಯಾಂಕ್‍ಗಳ ರಾಷ್ಟ್ರೀಕರಣ, ಗರೀಭಿ ಹಠಾವ್ ಹೀಗೆ ಬಡವರ ಪರ ನೂರಾರು ಕಾರ್ಯಕ್ರಮ ಕೊಟ್ಟ ಇಂದಿರಾ ಗಾಂಧಿಯನ್ನು ನಾಡಿನ ಜನರು ತಾಯಿ ಸ್ಥಾನದಲ್ಲಿಟ್ಟಿದ್ದಾರೆ. ದೇಶಕ್ಕೆ ಕಂಪ್ಯೂಟರ್ ಪರಿಚಯಿಸಿದ ರಾಜೀವ್ ಗಾಂಧಿ ಆಧುನೀಕ ಭಾರತದ ನಿರ್ಮಾತೃ ಎಂದೇ ಪ್ರತಿ ಗಳಿಸಿದ್ದಾರೆ. ಆದ್ದರಿಂದ ಅವರ ಕುಟುಂಬದ ಕುಡಿ ಪ್ರಿಯಾಂಕಾ ಗಾಂಧಿಯ ಭಾಷಣ ಕೇಳಲು ಅಂದಾಜು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಖಚಿತ ಎಂಬ ಸಮೀಕ್ಷೆಗಳು ಬಿಜೆಪಿಯವರ ನಿದ್ದೆ ಕೆಡಿಸಿದೆ. ನಮ್ಮ ಗುರಿ 28 ಕ್ಷೇತ್ರದಲ್ಲೂ ಗೆಲ್ಲಬೇಕೆಂಬುದು ಆಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಕ್ಷದ ವರಿಷ್ಠರು ಎಲ್ಲ ರೀತಿಯ ಸಂಘಟನೆ ಕೈಗೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಪಕ್ಷ ಘೋಷಣೆ ಮಾಡಿದಾಗ ಸಾಧ್ಯವೇ ಇಲ್ಲ ಇದು ಸುಳ್ಳು ಎಂದು ಪ್ರಚಾರ ನಡೆಸಿದರು. ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕ ರಾಜ್ಯ ದಿವಾಳಿ ಆಗಲಿದೆ ಎಂದು ಬಿಜೆಪಿಗರು ಆರೋಪಿಸಿದರು. ಆದರೆ, ಯೋಜನೆಗಳು ಸುಗಮವಾಗಿ ಅನುಷ್ಠಾನಗೊಂಡಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ ಎಂದರು.

ಈಗ ಎಐಸಿಸಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಗ್ಯಾರಂಟಿ ಸಾಧ್ಯವೇ ಇಲ್ಲ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹೇಗೆ ಯೋಜನೆಗಳು ಜಾರಿಗೊಂಡಿವೆ, ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಘೋಷಿತ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು. ಈ ವಿಷಯದಲ್ಲಿ ಜನರಿಗಷ್ಟೇ ಅಲ್ಲ ಬಿಜೆಪಿಗರಲ್ಲೂ ನಂಬಿಕೆ ಇದೆ. ಆದರೆ ಅವರು ಸೋಲುವ ಭೀತಿಗೆ ಆತಂಕಗೊಂಡು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಶೈಲಿಗೆ ಬಿಜೆಪಿಯವರು ಬೆಚ್ಚಿದ್ದಾರೆ. ಆರೋಪ ಮಾಡಲು ಏನೂ ಇಲ್ಲದೆ ಕಾಂಗ್ರೆಸ್ ಅಧಿಕಾರದಲ್ಲಿ ಬರಗಾಲ ಎಂಬ ಅವೈಜ್ಞಾನಿಕ, ಮೂಡನಂಬಿಕೆ ಮಾತುಗಳನ್ನು ಆಡುತ್ತಿದ್ದಾರೆ. ಅವರ ಈ ಹೇಳಿಕೆ ಮಧ್ಯೆಯೇ ರಾಜ್ಯದಲ್ಲಿ ಮಳೆ ಆಗುತ್ತಿದೆ. ವಿಜ್ಞಾನದ ತಿಳಿವಳಿಕೆ ಇಲ್ಲದವರು, ಸಾಮಾನ್ಯ ವ್ಯಕ್ತಿಗೆ ಇರುವಷ್ಟು ಜ್ಞಾನ ಇಲ್ಲದ ಬಿಜೆಪಿಯವರು ಪ್ರಕೃತಿ ಸಹಜ ಮುನಿಸನ್ನು ಕಾಂಗ್ರೆಸ್ ಮೇಲೆ ಆರೋಪಿಸುವ ಮೂಲಕ ನಗೆಪಾಟಿಲು ಆಗುತ್ತಿದ್ದಾರೆ ಎಂದರು.

ಬಿಜೆಪಿಯವರಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರ, ಅಭಿವೃದ್ಧಿ, ಜನರ ಬದುಕು ಬೇಕಿಲ್ಲ. ಸುಳ್ಳುಗಳ ಮೇಲೆ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಅವರ ಒಡೆದು ಆಳುವ ನೀತಿಗೆ ಜನರು ತಕ್ಕ ಪಾಠ ಕಲಿಸಿದ್ದು, ಆ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸಲಿದೆ ಎಂದು ಹೇಳಿದರು.

ಯಾದವ, ನಾಯಕ, ಒಕ್ಕಲಿಗ, ವೀರಶೈವ ಲಿಂಗಾಯತ, ಕುರುಬ, ಮಾದಿಗ ಸಮುದಾಯದ ಸೇರಿ ವಿವಿಧ ಜಾತಿ ಸಂಘಟನೆಗಳ ಮುಖಂಡರು, ರಾಷ್ಟ್ರನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಸಿದ್ದರಾಮಯ್ಯ ಅವರನ್ನು ವಿಶೇಷವಾಗಿ ಸ್ವಾಗತಿಸುವ ಕುರಿತು ಚರ್ಚಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್,ಮುಖಂಡರಾದ ಪ್ರಕಾಶ ರಾಮನಾಯ್ಕ, ಎನ್.ಡಿ.ಕುಮಾರ್, ಓ.ಶಂಕರ್, ಬಿ.ಪಿ.ಪ್ರಕಾಶಮೂರ್ತಿ, ಡಿ.ಎನ್.ಮೈಲಾರಪ್ಪ, ವಕೀಲ ಶರಣಪ್ಪ, ರವಿಕುಮಾರ್ ಇತರರಿದ್ದರು.

Advertisement
Tags :
bengaluruCampaign meeting planchitradurgaFormer Minister H. Anjaneyah anjenyaMore than one lakh peoplePriyanka Gandhisuddionesuddione newsಚಿತ್ರದುರ್ಗಪ್ರಚಾರ ಸಭೆ ಆಯೋಜನೆಪ್ರಿಯಾಂಕಾ ಗಾಂಧಿಬೆಂಗಳೂರುಮಾಜಿ ಸಚಿವ ಎಚ್.ಆಂಜನೇಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article