ಅಭಿವೃದ್ಧಿ ಯೋಜನೆಗಳ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ; ಕೇಂದ್ರದ ಅನುದಾನ ತರಲು ಪ್ರಯತ್ನಿಸುವೆ : ಸಂಸದ ಗೋವಿಂದ ಎಂ ಕಾರಜೋಳ
ಚಿತ್ರದುರ್ಗ. ಜುಲೈ12 : ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಇರುವ ಯೋಜನೆಗಳ ಕುರಿತು ಪ್ರಸ್ತಾವನೆ ಸಿದ್ದಪಡಿಸಿ, ಕೇಂದ್ರ ಸರ್ಕಾರದ ಹಿಂಬಾಲು ಬಿದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತರುತ್ತೇನೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಸಣ್ಣ ನೀರಾವರಿ ಸಚಿವನಾಗಿದ್ದಾಗ, ರಾಜ್ಯ ಸರ್ಕಾರ ಇಲಾಖೆಗೆ ರೂ.400 ರಿಂದ 500 ಕೋಟಿ ಅನುದಾನ ಮೀಸಲು ಇರಿಸುತ್ತಿತ್ತು. ಆದರೆ ಸಣ್ಣ ನೀರಾವರಿ ಕಾಮಗಾರಿಗಳಿಗೆ ಕೇಂದ್ರದಿಂದ ಪ್ರತಿ ವರ್ಷ ರೂ.2000 ಕೋಟಿಯಷ್ಟು ಅನುದಾನ ತಂದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದೇನೆ. ಈಗ ಸಂಸದನಾಗಿ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆ ಮಂತ್ರಿಗಳ ಬೆನ್ನು ಬಿದ್ದು ಅನುದಾನ ತರುವುದೇ ನನ್ನ ಕೆಲಸವಾಗಿದೆ. ರಾಜ್ಯ ಸರ್ಕಾರದಿಂದ ಅನುಪಾತದ ಹಂಚಿಕೆ ಆಧಾರದ ಮೇಲೆ ಹಾಗೂ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳಿಗೆ ಇಲಾಖೆವಾರು ಪ್ರಸ್ತಾವನೆ ಸಿದ್ಧಪಡಿಸುವಂತೆ ಸಂಸದ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ನೀರು ಕೊಯ್ಲಿಗೆ ಸೂಚನೆ : ಚಿತ್ರದುರ್ಗ ಜಿಲ್ಲೆಯಲ್ಲಿ ನದಿಗಳು ಇಲ್ಲದೆ ಇರುವುದರಿಂದ ಮಳೆಯ ನೀರಿನ ಮೇಲೆಯೇ ಹೆಚ್ಚಿನ ಅವಲಂಬನೆ ಆಗಬೇಕಿದೆ. ಅದಕ್ಕಾಗಿ ಅಧಿಕಾರಿಗಳು ಹೆಚ್ಚು ಚೆಕ್ ಡ್ಯಾಂ, ನಾಲಾ ಬಂಡ್, ಬ್ಯಾರೇಜ್‍ಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಬಗ್ಗೆ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಸರ್ವೇ ನಡೆಸಿ ಯೋಜನೆ ಸಿದ್ದಪಡಿಸಬೇಕು. ಇದರ ಜೊತೆಗೆ ಮಳೆ ನೀರು ಕೋಯ್ಲು ಮಾಡಲು ಸಹ ಪ್ರಯತ್ನಿಸಬೇಕು.
ಹೊಸ ಮನೆಗಳ ನಿರ್ಮಾಣದ ಸಂದರ್ಭದಲ್ಲಿ ಮಳೆ ನೀರು ಕೋಯ್ಲು ನಿರ್ಮಾಣ ಮಾಡಲು ನಿಯಮ ರೂಪಿಸಬೇಕು. ಇದರಿಂದ ಮನೆಗೆ ಅಗತ್ಯವಾದ ನೀರು ಲಭ್ಯವಾಗುತ್ತದೆ. ಮಳೆ ನೀರು ಶುದ್ಧವಾಗಿದ್ದು, ಕುಡಿಯಲು ಹಾಗೂ ದಿನ ಬಳಕೆಗೂ ಅನುಕೂಲವಾಗುತ್ತದೆ. ಈ ಬಗ್ಗೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನೆ ಕಟ್ಟಲು ಪರವಾನಿಗೆ ನೀಡುವಾಗ ಇದನ್ನು ಕಡ್ಡಾಯ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಶಾಶ್ವತ ಜಲಮೂಲಗಳಿಂದ ಜಲಜೀವನ್ ಮಿಷನ್‍ಗೆ ನೀರು : ಜಲಜೀವನ್ ಮಿಷನ್‍ನಡಿ ಜಿಲ್ಲೆಯ ಎಲ್ಲಾ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ನಾಲ್ಕು ಹಂತದಲ್ಲಿ ಯೋಜನೆ ರೂಪಿಸಲಾಗಿದೆ. ಆದರೆ ಬಹುತೇಕ ಕುಡಿಯುವ ನೀರಿನ ಯೋಜನೆಗಳಿಗೆ ಅಂತರ್ಜಲ ನೀರಿನ ಮೂಲಗಳನ್ನು ಅವಲಂಬಿಸಲಾಗಿದೆ. ಇದರಿಂದ ಯೋಜನೆ ಅನುಷ್ಠಾನ ಸರಿಯಾಗಿ ಆಗುವುದಿಲ್ಲ. ಇದರ ಬದಲು ಶಾಶ್ವತ ಜಲಮೂಲಗಳಿಂದ ಜಲಜೀವನ್ ಮಿಷನ್‍ಗೆ ನೀರು ನೀಡಲು ಪ್ರಯತ್ನಿಸಬೇಕು.
ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಅಡಿ ಬರುವ ಕೆರೆಗಳಿಗೆ ವಿ.ವಿ.ಸಾಗರ ಹಾಗೂ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸಿ, ಇವುಗಳನ್ನು ಜಲಜೀವನ್ ಮಿಷನ್‍ಗೆ ನೀರು ಸರಬರಾಜಿನ ಆಕರವನ್ನಾಗಿ ಬಳಸಲು ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಯೋಜನೆ ರೂಪಿಸಬೆಕು ಎಂದು ಸಂಸದ ಗೋವಿಂದ ಎಂ ಕಾರಜೋಳ ನಿರ್ದೇಶನ ನೀಡಿದರು.
ಎಫ್‍ಐಡಿ ಸೃಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ: ಜಮೀನಿನ ಮಾಲೀಕರು ಮರಣದ ನಂತರ ಅವರ ಕುಟುಂಬದ ವಾರಸುದಾರರಿಗೆ ಜಮೀನು ಹಂಚಿಕೆ ಮಾಡಲಾಗುತ್ತದೆ. ಆಗ ಪಹಣಿಯಲ್ಲಿ ಹೆಸರು ಬದಲಾವಣೆಯಾಗುತ್ತದೆ. ಹೊಸದಾಗಿ ಪಹಣಿಗೆ ಬಂದ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ನೋಂದಣಿಗೆ ಅಡಚಣೆಯಾಗುತ್ತಿದೆ. ಹೊಸದಾಗಿ ಪಹಣೆಯಲ್ಲಿ ಹೆಸರು ಸೇರ್ಪಡೆಯಾದವರಿಗೂ ಎಫ್‍ಐಡಿ ಸೃಜನೆ ಮಾಡಲು ಅವಕಾಶವಿದೆ. ಇದರ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸಂಸದ ಗೋವಿಂದ ಎಂ ಕಾರಜೋಳ ನಿರ್ದೇಶನ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ 3.1 ಲಕ್ಷ ರೈತರು ಇದ್ದು, 3.37 ಲಕ್ಷ ಎಫ್‍ಐಡಿ ಸೃಜನೆ ಮಾಡಲಾಗಿದೆ. ಫಸಲ್ ಬಿಮಾ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೂ 55,164 ರೈತರು ನೊಂದಣಿಯಾಗಿದ್ದು, ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಜುಲೈ 31 ರವವರೆಗೂ ನೋಂದಣಿಗೆ ಅವಕಾಶ ಇದೆ. ಕಳೆದ ವರ್ಷ 86,650 ರೈತರಿಗೆ 274 ಕೋಟಿ ರೂಪಾಯಿ ವಿಮೆ ಪಾವತಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಕಾರ್ಯಕ್ರಮ ಆಯೋಜಿಸಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷವಾಗಿ ಹೊಸದುರ್ಗ ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಈ ನಿಟ್ಟಿನಲ್ಲಿ ರೈತರಿಗೆ ಅರಿವು ಹಾಗೂ ಪ್ರೋತ್ಸಾಹ ಕಾರ್ಯಕ್ರಮ ಆಯೋಜಿಸುವಂತೆ ಸಂಸದರು ಸೂಚಿಸಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ಕಳೆದ ವರ್ಷ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗಿದ್ದು, ಈ ವರ್ಷ 24 ಸಾವಿರ ಹೆಕ್ಟೇರ್‍ಗೆ ಹೆಚ್ಚಳವಾಗಿದೆ. ರಾಜ್ಯದಲ್ಲಿಯೇ ಹೆಚ್ಚಾಗಿ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸಿರಿಧಾನ್ಯ ಬೆಳೆಗಳಿಗೆ ನೀಡುವ ಪ್ರೋತ್ಸಾಹ ಧನವು ಸಹ ಸಿರಿಧಾನ್ಯ ಬೆಳೆಯಲು ಕಾರಣವಾಗಿದೆ. ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವೆಯನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.
ದ್ರಾಕ್ಷಿ ಬೆಳೆಯಲು ಜಿಲ್ಲೆಯ ಹವಾಗುಣ ಸೂಕ್ತವಾಗಿದ್ದು, ದ್ರಾಕ್ಷಿ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮಾಹಿತಿ ಸಂಗ್ರಹಿಸಿ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವರದಿಗಳು ಬರುತ್ತಿದ್ದು, ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ , ಜಿಲ್ಲಾಸ್ಪತ್ರೆ ಗಳಲ್ಲಿ ದಾಖಲಾಗುವ ಡೆಂಗ್ಯು ಪ್ರಕರಣದ ಸಂಖ್ಯೆಯನ್ನು ಮಾತ್ರ ನೀಡಲಾಗುತ್ತಿದೆ. ಆದರೆ ವಾಸ್ತವವವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯು ಪ್ರಕರಣಗಳು ಕಂಡುಬರುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಡೆಂಗೀ ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿಯನ್ನೂ ಕೂಡ ಸಂಗ್ರಹಿಸಿ, ವರದಿಯನ್ನು ಕ್ರೋಢೀಕರಿಸಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಅವರಿಗೆ ಸಂಸದರು ಸೂಚಿಸಿದರು.
ಜಿಲ್ಲೆಯ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಸೇರಿದಂತೆ ಅಗತ್ಯ ಆರೋಗ್ಯ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಮೇಲೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಬೇಕು. ಎಂಬಿಬಿಎಸ್ ವೈದ್ಯರ ಲಭ್ಯವಿದ್ದಲ್ಲಿ ಆಯುರ್ವೇದ ವೈದ್ಯರನ್ನು ಪಡೆದು ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡಬೇಕು ಎಂದು ತಿಳಿಸಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಶುಶ್ರೂಷಕರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಸೂಚಿಸಿದರು.
ವೈದ್ಯರು ಕಡ್ಡಾಯವಾಗಿ ಗ್ರಾಮೀಣ ಸೇವೆ ಪೂರೈಸಬೇಕು. ಆರೋಗ್ಯ ಸಿಬ್ಬಂದಿಯು ಮಾನವೀಯತೆಯ ದೃಷ್ಠಿಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ 26673 ಮಂದಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನಿತ್ಯವೂ 1500 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 250 ಹಾಸಿಗೆ ಸಾಮಾಥ್ರ್ಯದ ಜಿಲ್ಲಾಸ್ಪತ್ರೆಯನ್ನು 450 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ 250 ಹಾಸಿಗೆ ಸಾಮಥ್ರ್ಯಕ್ಕೆ ಅನುಗುಣವಾಗಿ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕೈಗಾರಿಕಾ ವಲಯ ಲೇಔಟ್ ಅಭಿವೃದ್ಧಿಗೆ ಜತೆಗೆ ಹಂಚಿಕೆಯನ್ನೂ ಮಾಡಿ: ಕೈಗಾರಿಕಾ ವಲಯದ ಲೇಔಟ್ ಅಭಿವೃದ್ಧಿಯ ಜತೆ ಜತೆಗೂ ಹಂಚಿಕೆ ಕಾರ್ಯವನ್ನೂ ಮಾಡಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಅವರು ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್ ಅವರಿಗೆ ಸೂಚಿಸಿದರು.
ಕೈಗಾರಿಕಾ ವಲಯದಿಂದ ಜಿಲ್ಲೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಠಿಯಾಗಬೇಕು. ಈ ಕುರಿತು ಸರ್ಕಾರಕ್ಕೆ ಯಾವ ಯಾವ ಪ್ರಸ್ತಾವನೆ ಸಲ್ಲಿಸಿಲಾಗಿದೆ ಎಂದು ಸಂಸದರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರು, ಚಿತ್ರದುರ್ಗ ನಗರದ ಕೆಳಗೋಟೆಯಲ್ಲಿ ಇಂಡಸ್ಟ್ರೀಯಲ್ ಏರಿಯಾ ಇದ್ದು, ಇದರ ಜೊತೆಗೆ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಬಳಿ 1494 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿಯಾಗುತ್ತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. 1494 ಎಕರೆಯಲ್ಲಿ ಈಗಾಗಲೇ 800 ಎಕರೆಯನ್ನು ಕೆಐಡಿಬಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಪಿಎಂ ಆದರ್ಶ ಗ್ರಾಮ ಯೋಜನೆಯಡಿ 24 ಗ್ರಾಮಗಳು ಆಯ್ಕೆ: ಪಿಎಂ ಆದರ್ಶ ಗ್ರಾಮ ಯೋಜನೆಯಡಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 24 ಗ್ರಾಮಗಳು ಆಯ್ಕೆಯಾಗಿದ್ದು, ಈಗಾಗಲೇ ಕ್ರಿಯಾಯೋಜನೆ ರೂಪಿಸಿಲಾಗಿದ್ದು, ಅನುದಾನ ಬಿಡುಗಡೆಯಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸಭೆಗೆ ಮಾಹಿತಿ ನೀಡಿದರು. ಪಿಎಂ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾದ ಗ್ರಾಮಗಳ ಪಟ್ಟಿ ನೀಡಿ, ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಸಂಸದರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.