ಮೊಳಕಾಲ್ಮೂರು ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಪ್ರಕರಣ : ಬೆಸ್ಕಾಂ ಸ್ಪಷ್ಟನೆ
ಬೆಂಗಳೂರು, ಮೇ 25 : ಮಳೆ, ಗಾಳಿಯಿಂದ ಮರ ಬಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೇ 20ರಂದು ರಾತ್ರಿ ವಿದ್ಯುತ್ ಸಮಸ್ಯೆಯಾಗಿತ್ತು ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.
ಕಳೆದ ಮೇ 20ರ ಸಂಜೆ ಸುರಿದ ಭಾರಿ ಮಳೆಯಿಂದಾಗಿ, 66/11 ಕೆ.ವಿ ಹಾನಗಲ್ ವಿದ್ಯುತ್ ವಿತರಣಾ ಕೇಂದ್ರದಿಂದ ಪ್ರವಹಿಸುವ ಎಫ್-2 ಮೊಳಕಾಲ್ಮೂರು ಫೀಡರ್ 11 ಕೆ.ವಿ ಮಾರ್ಗದ ಮೇಲೆ ಮರದ ರೆಂಬೆ ಬಿದ್ದು, ಮಧ್ಯರಾತ್ರಿ 12 ಗಂಟೆಗೆ ಫೀಡರ್ ಓ.ಸಿ.ಆರ್ ರಿಲೇ ಮೇಲೆ ಟ್ರಿಪ್ ಆಗಿತ್ತು.
ಈ ಸಂದರ್ಭದಲ್ಲಿ ಆಸ್ಪತ್ರೆಯ
ಜನರೇಟರ್ ದುರಸ್ಥಿಗೆ ಬಂದಿತ್ತು. ಇದರ ಮಧ್ಯೆಯೂ ಐಸಿಯು ಮತ್ತು ಇತರ ತುರ್ತು ಘಟಕಗಳಿಗೆ ಯುಪಿಎಸ್‌ನಿಂದ ವಿದ್ಯುತ್ ಪೂರೈಕೆ ಇತ್ತು ಎಂದು ಬೆಸ್ಕಾಂ ತಿಳಿಸಿದೆ.
ಮಧ್ಯರಾತ್ರಿ 12ಕ್ಕೆ ಸ್ಥಗಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾ ಸಿಬ್ಬಂದಿ ತ್ವರಿತ ಕಾರ್ಯಾಚರಣೆಯಿಂದ ತಡರಾತ್ರಿ 1.17 ರೊಳಗೆ ವಿದ್ಯುತ್ ಮರುಪೂರೈಕೆ ಮಾಡಿದ್ದರು.
ಸಮಸ್ಯೆ ಕಾಣಿಸಿಕೊಂಡ ತಕ್ಷಣ ಬೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದು, ವಿಳಂಬವಿಲ್ಲದೇ ವಿದ್ಯುತ್ ಮರುಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.